Advertisement

ಮಂಗಳೂರಿನಲ್ಲಿ ಉಪ್ಪು ನೀರು ಸಿಹಿಯಾಗಲು ಕಾಲ ಸನ್ನಿಹಿತ!

11:06 PM Mar 25, 2021 | Team Udayavani |

ಮಹಾನಗರ: ಸಮುದ್ರದ ಉಪ್ಪು ನೀರನ್ನು ಸಂಸ್ಕರಿಸಿ ಕೈಗಾರಿಕೆಗಳಿಗೆ ನೀಡುವ ರಾಜ್ಯದ ಮೊದಲ ಯೋಜನೆ “ಉಪ್ಪು ನೀರು ಸಂಸ್ಕರಣ ಘಟಕ’ ತಣ್ಣೀರುಬಾವಿಯಲ್ಲಿ ಬಹುತೇಕ ಅಂತಿಮವಾಗಿದ್ದು, ಈ ಮೂಲಕ ಕೆಲವೇ ದಿನಗಳಲ್ಲಿ ಸಮುದ್ರದ ಉಪ್ಪು ನೀರು ಸಿಹಿಯಾಗಲು ಕಾಲ ಸನ್ನಿಹಿತವಾಗಿದೆ.

Advertisement

ಎಂಆರ್‌ಪಿಎಲ್‌ (ಮಂಗಳೂರು ರಿಫೈನರಿ ಆ್ಯಂಡ್‌ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌) ಈ ಘಟಕವನ್ನು ನಿರ್ಮಿಸುತ್ತಿದೆ. ತಣ್ಣೀರುಬಾವಿಯಲ್ಲಿ ಘಟಕದ ಕಾಮಗಾರಿ ಶೇ.70ರಷ್ಟು ಈಗಾಗಲೇ ಪೂರ್ಣವಾಗಿದ್ದು, ಅಲ್ಲಿ ಸಂಸ್ಕರಣೆ ಮಾಡಿದ ಸಮುದ್ರದ ನೀರನ್ನು ಪೈಪ್‌ಲೈನ್‌ ಮೂಲಕ ಎಂಆರ್‌ಪಿಎಲ್‌ಗೆ ಸರಬರಾಜು ಮಾಡಲಾಗುತ್ತದೆ.

ಚೆನ್ನೈ ಮೂಲದ ಕಂಪೆನಿ ಒಟ್ಟು 595 ಕೋ.ರೂ. ವೆಚ್ಚದಲ್ಲಿ ಈ ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿದೆ. ಇದೇ ಕಂಪೆನಿ ಚೆನ್ನೈ ಮತ್ತಿತರ ಕಡೆಗಳಲ್ಲಿ ಇಂತಹ ಬೃಹತ್‌ ಸ್ಥಾವರ ನಿರ್ಮಾಣದ ಅನುಭವ ಹೊಂದಿದೆ. ತಣ್ಣೀರುಬಾವಿ ಬಳಿಯ 13 ಎಕರೆ ಪ್ರದೇಶದಲ್ಲಿ ಸ್ಥಾವರ ನಿರ್ಮಾಣ ನಡೆಯುತ್ತಿದ್ದು, ಶೇ.30ರಷ್ಟು ಕಾಮಗಾರಿ ನಡೆಯಲು ಬಾಕಿಯಿದೆ. ಎಂಆರ್‌ಪಿಎಲ್‌ಗೆ ಅಗತ್ಯವಿರುವ ನೀರನ್ನು ಘಟಕದ ಮೂಲಕ ಪಡೆಯಲು ಉದ್ದೇಶಿಸಲಾಗಿದೆ.

ತೈಲ ಸಂಸ್ಕರಣೆಗೆ ನೀರು :

ಎಂಆರ್‌ಪಿಎಲ್‌ನಲ್ಲಿ ರಿಫೈನರಿಯನ್ನು ಚಲಾಯಿಸುವುದಕ್ಕೆ ಪ್ರತಿದಿನ 6 ಎಂಜಿಡಿಯಷ್ಟು ನೀರು ಬೇಕಾಗುತ್ತದೆ. ಇದರಲ್ಲಿರುವ ಕ್ಯಾಪ್ಟಿವ್‌ ಪವರ್‌ ಪ್ಲಾಂಟ್‌ ಮೂಲಕ ವಿದ್ಯುತ್‌ ಉತ್ಪಾದಿಸಲು ನೀರು ಬೇಕು. ಅತ್ಯಧಿಕ 300, 400 ಡಿಗ್ರಿ ಸೆಲ್ಸಿಯಸ್‌ ಉಷ್ಣತೆಯಲ್ಲಿ ಕಚ್ಚಾ ತೈಲವನ್ನು ಸಂಸ್ಕರಿಸಲಾಗುತ್ತಿದ್ದು , ಅದನ್ನು ತಣಿಸುವುದಕ್ಕೆ ಮತ್ತೆ ಭಾರೀ ಪ್ರಮಾಣದ ನೀರಿನ ಅಗತ್ಯವಿದೆ. ಇದಕ್ಕಾಗಿ ನೇತ್ರಾವತಿ ನದಿ, ಕಾವೂರು ಒಳಚರಂಡಿ ಸಂಸ್ಕರಣ ಘಟಕದಿಂದ ನೀರು ಪಡೆಯುತ್ತಿದೆ.

Advertisement

ಘಟಕ ಏಕೆ ? :

ಜಿಲ್ಲೆಯಲ್ಲಿ ಸಾಮಾನ್ಯವಾಗಿ ಫೆಬ್ರವರಿ ಬಳಿಕ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನೇತ್ರಾವತಿಯಲ್ಲಿ ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಕೊರತೆ ಎದುರಾಗುವ ಕಾರಣದಿಂದ ನೇತ್ರಾವತಿಯಿಂದ ಕೈಗಾರಿಕೆಗಳಿಗೆ ವಿತರಿಸುವ ನೀರನ್ನು ಕಡಿತ ಮಾಡಲಾಗುತ್ತದೆ.

ಮನಸ್ಸು ಮಾಡದ ಪಾಲಿಕೆ! :

ಮಂಗಳೂರಿನಲ್ಲಿ ಕುಡಿಯುವ ನೀರಿನ ಕೊರತೆ ಎದುರಾದಾಗ ಕಡಲಿನ ಉಪ್ಪು ನೀರನ್ನು ಸಂಸ್ಕರಿಸಿ ಕೈಗಾರಿಕೆಗಳಿಗೆ ಬಳಸುವ ಬಗ್ಗೆ ಚಿಂತನೆ ನಡೆದಿತ್ತು. ಎಂಆರ್‌ಪಿಎಲ್‌ ಈ ಬಗ್ಗೆ ಒಂದು ಹೆಜ್ಜೆ ಮುಂದಿಟ್ಟು ಯೋಜನೆ ಪೂರ್ಣಗೊಳಿಸುವ ಹಂತದಲ್ಲಿದೆ. ಆದರೆ ಪಾಲಿಕೆ ವತಿಯಿಂದ ಉದ್ದೇಶಿಸಿದ್ದ ಇಂತಹುದೇ ಯೋಜನೆ ಮಾತ್ರ ಕಡತದಲ್ಲೇ ಬಾಕಿಯಾಗಿದೆ. ಈ ಬಗ್ಗೆ ಪಾಲಿಕೆ ಸದಸ್ಯರು ಹಿಂದೆ ಚೆನ್ನೈಗೆ ತೆರಳಿ ಅಧ್ಯಯನ ಪ್ರವಾಸ ಮಾಡಿದ್ದು, ಬಿಟ್ಟರೆ ಯೋಜನೆ ಅನುಷ್ಠಾನಕ್ಕೆ ಮಾತ್ರ ಮನಸ್ಸು ಮಾಡಿಲ್ಲ.

ಕೈಗಾರಿಕೆಗಳಿಗೆ ನೀರಿನ ಸಮಸ್ಯೆ ಎದುರಾದಾಗ ಎಂಆರ್‌ಪಿಎಲ್‌ ಸಹಿತ ಕೆಲವು ಕಂಪೆನಿಗಳು ಶಟ್‌ಡ್‌ನ… ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ ನೇತ್ರಾವತಿ ನದಿ ನೀರನ್ನೇ ಅವಲಂಬಿಸುವ ಬದಲು ಪರ್ಯಾಯದ ಬಗ್ಗೆ ಯೋಚಿಸಬೇಕು ಎಂದು ಮನಗಂಡು ಉಪ್ಪುನೀರು ಸಂಸ್ಕರಣ ಘಟಕ ನಿರ್ಮಿಸಲಾಗಿದೆ. ನವಮಂಗಳೂರು ಬಂದರು ಮಂಡಳಿಗೆ (ಎನ್‌ಎಂಪಿಟಿ)ಸೇರಿದ ಜಾಗವನ್ನು ಈ ಯೋಜನೆಗಾಗಿ ಬಳಸಿಕೊಳ್ಳಲಾಗಿದೆ. ಎನ್‌ಎಂಪಿಟಿಗೆ ಸೇರಿದ ಅತಿಥಿಗೃಹ ಇದ್ದ ಜಾಗ ಸಮತಟ್ಟುಗೊಳಿಸಿ ಸ್ಥಾವರ ನಿರ್ಮಿಸಲಾಗುತ್ತಿದೆ. ದೇಶದ ಜಾಮ್‌ನಗರ, ತಮಿಳುನಾಡು ಮುಂತಾದೆಡೆ ಉಪ್ಪುನೀರು ಸಂಸ್ಕರಣ ಘಟಕಗಳಿವೆ. ಗಲ್ಫ್ ರಾಷ್ಟ್ರಗಳಲ್ಲೂ ಇದೆ. ಇದೇ ಶೈಲಿಯಂತೆ ಸಂಸ್ಕರಣ ಘಟಕ ರೂಪುಗೊಳ್ಳುತ್ತಿದೆ.

ಒಳಚರಂಡಿ ನೀರಿಗೂ ಡಿಮ್ಯಾಂಡ್‌! :

ಕುದ್ರೋಳಿ, ಪಾಂಡೇಶ್ವರ, ಪಡೀಲ್‌, ಎಕ್ಕೂರು, ಕೊಟ್ಟಾರಚೌಕಿ ಸೇರಿದಂತೆ ಮಂಗಳೂರಿನ ಒಟ್ಟು 22 ಕಡೆಗಳಲ್ಲಿ ಪಾಲಿಕೆಯು ವೆಟ್‌ವೆಲ್‌ ನಿರ್ಮಿಸಿದೆ. ಅಂದರೆ, ಶೌಚಾಲಯ, ಪಾತ್ರೆ ತೊಳೆಯುವ ನೀರು ಒಳಚರಂಡಿಯ ಮೂಲಕ ಮ್ಯಾನ್‌ಹೋಲ್‌ (ಒಟ್ಟು 24,365) ದಾಟಿ, ವೆಟ್‌ವೆಲ್‌ಗೆ ಹರಿಯುತ್ತದೆ. ಅಲ್ಲಿಂದ ಮಂಗಳೂರಿನ ನಾಲ್ಕು ಕಡೆಗಳಲ್ಲಿ ಪಾಲಿಕೆ ವತಿಯಿಂದ ನಿರ್ಮಿಸಿರುವ ಎಸ್‌ಟಿಪಿಗೆ (ಸಂಸ್ಕರಣಾ ಘಟಕ) ಬರುತ್ತದೆ. 16 ಎಂಎಲ್‌ಡಿ ಸಾಮರ್ಥ್ಯದ ಸುರತ್ಕಲ್‌ ಎಸ್‌ಟಿಪಿ, 20 ಎಂಎಲ್‌ಡಿಯ ಜಪ್ಪಿನಮೊಗರು ಎಸ್‌ಟಿಪಿ, 44.4 ಎಂಎಲ್‌ಡಿಯ ಕಾವೂರು ಎಸ್‌ಟಿಪಿ, 8.7 ಎಂಎಲ್‌ಡಿ ಸಾಮರ್ಥ್ಯದ ಪಚ್ಚನಾಡಿ ಎಸ್‌ಟಿಪಿಯಲ್ಲಿ ತ್ಯಾಜ್ಯ ನೀರು ಸಂಸ್ಕರಣೆಯಾಗುತ್ತದೆ. ಇದರಲ್ಲಿ ಕಾವೂರು ಎಸ್‌ಟಿಪಿಯ ನೀರನ್ನು ಮಾತ್ರ ಸದ್ಯ ಸಂಸ್ಕರಣೆ ಮಾಡಿದ ಅನಂತರ ಎಂಆರ್‌ಪಿಎಲ್‌ ಪಡೆದುಕೊಳ್ಳುತ್ತಿದೆ. ಸಾಧ್ಯವಾಗುವುದಾದರೆ ಉಳಿದಿರುವ ನಗರದ ಮೂರು ಎಸ್‌ಟಿಪಿಯ ಒಳಚರಂಡಿ ನೀರನ್ನು ಸಂಸ್ಕರಿಸಿ ಬಳಕೆ ಮಾಡಲು ಎಂಆರ್‌ಪಿಎಲ್‌ ಆಸಕ್ತಿ ವಹಿಸಿದೆ.

ನೇತ್ರಾವತಿ ನದಿ ನೀರನ್ನು ಆಶ್ರಯಿಸುವ ಬದಲು ಸಮುದ್ರದ ಉಪ್ಪು ನೀರನ್ನು ಸಂಸ್ಕರಣೆ ಮಾಡಿ ಬಳಕೆ ಮಾಡಲು ಎಂಆರ್‌ಪಿಎಲ್‌ ಈಗಾಗಲೇ ನಿರ್ಧರಿಸಿ ತಣ್ಣೀರುಬಾವಿಯಲ್ಲಿ ಘಟಕ ನಿರ್ಮಾಣ ಕೈಗೊಂಡಿದೆ. ಶೇ. 70ರಷ್ಟು ಕಾಮಗಾರಿ ಈಗಾಗಲೇ ಪೂರ್ಣವಾಗಿದ್ದು ಉಳಿದ ಕಾಮಗಾರಿ ಇದೀಗ ವೇಗವಾಗಿ ನಡೆಯುತ್ತಿದೆ. ಇದು ನೀರಿನ ಬಳಕೆಗೆ ಸಂಬಂಧಿಸಿ ಮಹತ್ವದ ಯೋಜನೆಯಾಗಿದೆ.  ಎಂ. ವೆಂಕಟೇಶ್‌, ವ್ಯವಸ್ಥಾಪಕ ನಿರ್ದೇಶಕರು, ಎಂಆರ್‌ಪಿಎಲ್‌

 

Advertisement

Udayavani is now on Telegram. Click here to join our channel and stay updated with the latest news.

Next