Advertisement

ಹರೇಗೋಡು: ಗದ್ದೆಗೆ ಉಪ್ಪು ನೀರಿನ ದಾಂಗುಡಿ

09:44 PM Nov 20, 2020 | mahesh |

ಕುಂದಾಪುರ: ರಾಜಾಡಿ ಕಳುವಿನಬಾಗಿಲಿನ ಕಿಂಡಿ ಅಣೆಕಟ್ಟಿಗೆ ಇನ್ನೂ ಕೂಡ ಗೇಟು ಅಳವಡಿಸದ ಕಾರಣ ಹರೇಗೋಡು, ತೋಟಬೈಲು, ಕಲ್ಕೇರಿ ಮತ್ತಿತರ ಭಾಗದ ಗದ್ದೆಗಳಿಗೆ ಉಪ್ಪು ನೀರು ನುಗ್ಗಿದ್ದು, ಇದರಿಂದ ಉದ್ದು ಬಿತ್ತನೆ ಮಾಡಲಾದ ಗದ್ದೆಗೂ ಹಾನಿಯಾಗಿದೆ. ಇದಲ್ಲದೆ ಹಿಂಗಾರು ಹಂಗಾಮಿನ ಭತ್ತದ ಕೃಷಿಗೂ ಸಂಕಷ್ಟ ಎದುರಾಗಿದೆ.

Advertisement

ತಲ್ಲೂರು ಗ್ರಾಮದ ರಾಜಾಡಿಯ ಕಳುವಿನ ಬಾಗಿಲಿನಲ್ಲಿ 4.44 ಕೋ.ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಿದ್ದು, ಆದರೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಅನೇಕ ಸಮಯ ಕಳೆದರೂ, ಈ ಭಾಗದ ರೈತರು ರೇಡಿಯಲ್‌ ಗೇಟುಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿದ್ದರೂ, ಇನ್ನೂ ಅಳವಡಿಸಿಲ್ಲ. ಇದರಿಂದಾಗಿ ಈಗ ಗದ್ದೆಗಳಿಗೆ ಉಪ್ಪು ನೀರು ದಾಂಗುಡಿಯಿಟ್ಟಿದೆ.

ಮುಂಗಾರು ಹಂಗಾಮಿನ ಕಟಾವಿನ ವೇಳೆಯೇ ಕೆಲವರು ಉದ್ದಿನ ಬೀಜಗಳನ್ನು ಬಿತ್ತನೆ ಮಾಡಿದ್ದು, ಆದರೆ ಈಗ ಉಪ್ಪು ನೀರು ನುಗ್ಗಿದ್ದರಿಂದ ಭಾರೀ ಪ್ರಮಾಣದಲ್ಲಿ ತೊಂದರೆ ಎದುರಾದಂತಾಗಿದೆ.

ಈ ಕಿಂಡಿ ಅಣೆಕಟ್ಟಿಗೆ ಗೇಟುಗಳನ್ನು ಅಳವಡಿಸದಿರುವುದರಿಂದ ರಾಜಾಡಿ, ಕೋಟೆಬಾಗಿಲು, ತಲ್ಲೂರು, ಕನ್ಯಾನ, ಹರೇಗೋಡು, ತೋಟಬೈಲು, ಗುಬ್ಬು ಕೋಣ ಸುತ್ತಮುತ್ತಲಿನ ಪರಿಸರದ ಸಾವಿರಾರು ಮಂದಿ ರೈತರ ನೂರಕ್ಕೂ ಮಿಕ್ಕಿ ಎಕರೆ ಗದ್ದೆಗಳಿಗೆ ತೊಂದರೆಯಾಗುತ್ತಿದೆ.

ಮನವಿ
ಕಿಂಡಿ ಅಣೆಕಟ್ಟಿನ ಗೇಟುಗಳನ್ನು ಕೂಡಲೇ ಅಳವಡಿಸಲು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎನ್ನುವುದಾಗಿ ಮನವಿ ಸಲ್ಲಿಸಿ ವಾರ ಕಳೆದರೂ, ಗೇಟು ಮಾತ್ರ ಅಳವಡಿಸಿಲ್ಲ. ಅಧಿಕಾರಿಗಳಿಗೆ ಕೇಳಿದರೆ ಮುಂಗಾರು ಹಂಗಾಮಿನ ಕಟಾವು ಕಾರ್ಯ ಬಾಕಿಯಿದೆ ಎನ್ನುತ್ತಾರೆ. ಆದರೆ ಈ ಭಾಗದಲ್ಲಿ ಕಟಾವು ಕಾರ್ಯ ಪೂರ್ಣಗೊಂಡಿದ್ದು, ಗೇಟು ಅಳವಡಿ ಸಲು ಯಾವುದೇ ಸಮಸ್ಯೆಯಿಲ್ಲ ಎನ್ನು ವುದು ಇಲ್ಲಿನ ರೈತರ ಅಭಿಪ್ರಾಯ.

Advertisement

ಸ್ಪಂದನೆಯೇ ಇಲ್ಲ
ಈ ಭಾಗದ ರೈತರಿಂದ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು, ಬೈಂದೂರು ಶಾಸಕರಿಗೂ ಮನವಿ ಸಲ್ಲಿಸಿ, ಕೂಡಲೇ ಕ್ರಮಕೈಗೊಳ್ಳಿ ಎಂದು ಆಗ್ರಹಿಸಿದ್ದರೂ ಈ ವರೆಗೆ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ. ಭತ್ತದ ಬೆಳೆ ಬೆಳೆಯುವ ಗದ್ದೆಗಳಿಗೆ ಉಪ್ಪು ನೀರು ನುಗ್ಗಿದ್ದು, ಇನ್ನೂ ಗೇಟು ಅಳವಡಿಸದಿರುವುದರಿಂದ ಹಿಂಗಾರು ಕೃಷಿ ಕಾರ್ಯಕ್ಕೆ ಅಡ್ಡಿಯಾಗಲಿದೆ. ಶೀಘ್ರ ಇದಕ್ಕೊಂದು ಪರಿಹಾರ ಕಲ್ಪಿಸಬೇಕು.
– ವಿಶ್ವನಾಥ ಗಾಣಿಗ ಹರೇಗೋಡು, ಕೃಷಿಕರು

Advertisement

Udayavani is now on Telegram. Click here to join our channel and stay updated with the latest news.

Next