Advertisement

ಉಪ್ಪು ನೀರಿನ ಬಾಧೆ; ಸಂಕಷ್ಟದಲ್ಲಿ ಕೃಷಿಕರು

11:16 PM Jun 10, 2019 | Team Udayavani |

ಪಂಜ: ಕೆಮ್ರಾಲ್‌ ಗ್ರಾ.ಪಂ. ವ್ಯಾಪ್ತಿಯ ಪಂಜದಲ್ಲಿ ನಿರ್ಮಾಣವಾಗಿರುವ ಕಿಂಡಿ ಅಣೆಕಟ್ಟಿನಲ್ಲಿ ಅಳವಡಿಸಿರುವ ಫೈಬರ್‌ ಹಲಗೆಗಳು ಸಮರ್ಪಕ ಜೋಡಣೆಯಾಗದಿರುವುದು ಮತ್ತು ಚೇಳಾರುವಿನಲ್ಲಿ ಉಪ್ಪು ನೀರಿನ ತಡೆಗೆ ಅಣೆಕಟ್ಟಿನ ಹಲಗೆಗಳನ್ನು ತೆರವುಗೊಳಿಸಿರುವುದರಿಂದ ಪಂಜ ತನಕ ನದಿಯಲ್ಲಿ ಉಪ್ಪು ನೀರು ತುಂಬಿಕೊಂಡಿದೆ. ಇದರಿಂದಾಗಿ ನಾಟಿ ಮಾಡಲು ಸಿದ್ಧಗೊಂಡಿರುವ ನೇಜಿ ಮಡಿಗಳು ನೀರಿಲ್ಲದೆ ಒಣಗಿ ಹೋಗಿ ಈ ಭಾಗದ ರೈತರಿಗೆ ನಷ್ಟ ಉಂಟಾಗಿ ಸಂಕಷ್ಟ ಸ್ಥಿತಿ ಎದುರಿಸುವಂತಾಗಿದೆ.

Advertisement

ಪ್ರತಿವರ್ಷವೂ ಮಳೆಗಾಲ ಆರಂಭ ವಾಗುವ ಮಂಚೆ ಸ್ವಲ್ಪ ಮಳೆ ಬಂದಾಗಲೇ ಚೇಳಾರುವಿನಲ್ಲಿ ಉಪ್ಪು ನೀರಿನ ತಡೆಗೆ ಹಾಕಿದ ಹಲಗೆಗಳನ್ನು ತೆರವು ಮಾಡುವ ಕ್ರಮ ಇತ್ತು. ಆದರೆ ಈ ಬಾರಿ ಜೂ. 1ರಂದು ಹಲಗೆ ತೆರವುಗೊಳಿಸಿರುವುದರಿಂದ ಸಮುದ್ರದ ಉಪ್ಪು ನೀರು ಪಂಜ ತನಕ ಬಂದಿದೆ. ಇದರಿಂದ ನೇಜಿ ಗದ್ದೆಗಳಿಗೆ, ಕುಡಿಯುವ ನೀರಿಗೂ ಜಾನುವಾರು ಗಳಿಗೂ ಕುಡಿಯಲು ನೀರಿಲ್ಲದೆ ಪರದಾಡುವ ಸ್ಥಿತಿ ಉಂಟಾಗಿದೆ.

200 ಎಕ್ರೆ ನೇಜಿ ನಾಟಿ
ಪಂಜ ಕಿಂಡಿ ಅಣೆಕಟ್ಟು ಹಲಗೆ ಸಡಿಲಗೊಂಡಿರುವುದರಿಂದ ನೀರು ಸೋರಿಕೆಯಾಗಿ ಕಿಲೆಂಜೂರು, ಶಿಬರೂರು, ಪುಚ್ಚಾಡಿ ಅಣೆಕಟ್ಟಿನ ತನಕ ಸುಮಾರು ನಾಲ್ಕು ಕಿ.ಮೀ. ಉಪ್ಪು ನೀರು ತುಂಬಿ ಕೊಂಡಿದೆ. ಸುಮಾರು 200 ಎಕ್ರೆ ಗದ್ದೆಯಲ್ಲಿ 30ಕ್ಕೂ ಹೆಚ್ಚು ಕೃಷಿ ಕರು ನಾಟಿ ಮಾಡಲು ನೇಜಿ ತಯಾರಿಸಿದ್ದರು. ಈಗ ಉಪ್ಪು ನೀರಿನಿಂದಾಗಿ ನೇಜಿ ನಾಟಿಯೂ ಒಣಗಿ ಹೋಗಿ ರೈತರು ನಷ್ಟ ಅನುಭವಿಸುವಂತಾಗಿದೆ.

ಪಂಜ, ಉಲ್ಯ ಮದ್ಯ, ಕೊಕುಡೆ, ಸಹಿತ ನದಿ ಪಾತ್ರದ ಇಕ್ಕೆಲದ 200ಕ್ಕೂ ಹೆಚ್ಚು ಬಾವಿಗಳಲ್ಲಿ ಉಪ್ಪು ನೀರಿನ ಒರೆತ ಉಂಟಾ ಗಿ, ಉಪಯೋಗಕ್ಕೆ ಅಯೋಗ್ಯವಾಗಿದೆ. ಪಂಜದ ನದಿಯ ಬದಿಯಲ್ಲಿ ಕುಡಿಯುವ ನೀರಿಗಾಗಿ ತೆರೆದ ಬಾವಿ ನಿರ್ಮಾಣ ಮಾಡಲಾಗಿತ್ತು, ಅದರೆ ಅಲ್ಲಿ ಕೂಡ ಉಪ್ಪು ನೀರಿನ ಒರೆತ ಉಂಟಾಗಿದೆ.

ಹಲಗೆ ತೆರವಿನಿಂದ ನಷ್ಟ
ಈ ವರ್ಷ ಮಳೆ ವಿಳಂಬವಾಗಿರುವುದರಿಂದ ತರಾತುರಿಯಲ್ಲಿ ಹಲಗೆ ತೆಗಯುವುದಕ್ಕಿಂತ ಮಳೆ ಬಂದ ಮೇಲೆ ಹಲಗೆ ತರೆವುಗೊಳಿಸಬಹುದಿತ್ತು. ಮಳೆಗಾಲಕ್ಕೆ ನಾಟಿ ಮಾಡಲು ಸಿದ್ಧ ಮಾಡಿದ್ದ ನೇಜಿ ಗದ್ದೆಗಳು ನೀರಿಲ್ಲದೆ ಒಣಗಿವೆ ಈ ನಷ್ಟಕ್ಕೆ ಇಲಾಖೆಯೇ ಕಾರಣ. ನಮ್ಮ ಸಮಸ್ಯೆಗೆ ನ್ಯಾಯ ಒದಗಿಸಬೇಕು.
 - ಸತೀಶ್‌ ಶೆಟ್ಟಿ ಬೈಲಗುತ್ತು, ಹಿರಿಯ ಕೃಷಿಕ

Advertisement

ಮೀನುಗಳು ಸಾವು
ಉಪ್ಪು ನೀರು ನದಿಯಲ್ಲಿ ತುಂಬಿಕೊಂಡಿ ರುವುದರಿಂದ ಸಾವಿರಾರು ಮೀನುಗಳುಸತ್ತಿದ್ದು, ಇದರಿಂದ ಮೀನುಗಳು ಕೊಳೆತು ವಾಸನೆ ಬರುತ್ತಿದೆ. ಸತ್ತ ಮೀನುಗಳಿಂದಾಗಿ ಪ್ರದೇಶದ ಜನರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

 ಇಲಾಖೆಯ ಗಮನಕ್ಕೆ ತರಲಾಗುವುದು
ಪಂಜ ಮತ್ತು ಉಲ್ಯ, ಕೊಕುಡೆ ನದಿ ಪಾತ್ರದ ಭಾಗದಲ್ಲಿ ಉಪ್ಪು ನೀರಿನ ಸಮಸ್ಯೆ ತಿಳಿದು ಬಂದಿದೆ. ಇಲಾಖೆಗೆ ಈ ಬಗ್ಗೆ ತಿಳಿಸಲಾಗಿದೆ.
 - ನಾಗೇಶ್‌ ಅಂಚನ್‌, ಅಧ್ಯಕ್ಷರು, ಕೆಮ್ರಾಲ್‌ ಗ್ರಾ.ಪಂ.

- ರಘುನಾಥ ಕಾಮತ್‌, ಕೆಂಚನಕೆರೆ

Advertisement

Udayavani is now on Telegram. Click here to join our channel and stay updated with the latest news.

Next