Advertisement

ಬಾವಿಗಳಲ್ಲೂ ಸೇರಿಕೊಳ್ಳುತ್ತಿದೆ ಉಪ್ಪು ನೀರು !

05:23 PM Apr 29, 2019 | Team Udayavani |

ಕುಮಟಾ: ತಾಲೂಕಿನ ಬಹಳಷ್ಟು ಪ್ರದೇಶಗಳಲ್ಲಿ ಮಾರ್ಚ್‌ನಿಂದ ನೀರಿಗಾಗಿ ಪರದಾಟ ಪ್ರಾರಂಭವಾಗಿದೆ. ಸರಕಾರ ಕುಡಿಯುವ ನೀರು ಪೂರೈಸಲು ಹಲವಾರು ಯೋಜನೆ ಜಾರಿಗೊಳಿಸಿದರೂ, ಪ್ರಯೋಜನವಾಗುತ್ತಿಲ್ಲ. ನೀರಿಗಾಗಿ ಕಾತರಿಸುವ ಜನತೆಯ ಬಯಕೆ ಈಡೇರಿಲ್ಲ.

Advertisement

ತಾಲೂಕಿನ ಹಳಕಾರ, ಮದ್ಗುಣಿ, ಹಣ್ಣೇಮಠ, ಹೊಲನಗದ್ದೆ, ಕಾಗಾಲ, ಮೊಸಳೆಸಾಲ, ಕೂಜಳ್ಳಿ, ಹಿರೇಗುತ್ತಿ, ತೊರ್ಕೆ, ಬರ್ಗಿ, ಕಿಮಾನಿ, ಮಿರ್ಜಾನ್‌, ದೀವಗಿ, ಹೆಗಡೆ ಹಾಗೂ ಇನ್ನೂ ಹಲವಾರು ಕಡೆ ನೀರಿನ ಕೊರತೆಯಿದ್ದು, ಈ ಎಲ್ಲಾ ಗ್ರಾಮಗಳು ನೀರಿನ ಅತೀ ಸಮಸ್ಯೆ ಎದುರಿಸುತ್ತಿವೆ. ಶೀಘ್ರವೇ ಈ ಎಲ್ಲಾ ಗ್ರಾಮಗಳಿಗೂ ಕುಡಿಯುವ ನೀರಿನ ಪೂರೈಸಬೇಕಿದೆ. ಅನೇಕ ಕಡೆ ನೀರಿನ ಟ್ಯಾಂಕ್‌ ಹಾಳಾಗಿ ನೀರು ಸರಬರಾಜು ಆಗುತ್ತಿಲ್ಲ. ಇನ್ನು ಕೆಲವು ಕಡೆ ಕೊಳವೆ ಬಾವಿಗೆ ಅಳವಡಿಸಿದ ಪಂಪ್‌ ಹಾಳಾಗಿದ್ದು, ರಿಪೇರಿಗೂ ಬಾರದ ಪರಿಸ್ಥಿತಿಯಿದೆ.

ಇನ್ನು ಹೆಗಡೆಯ ತಾರಿಬಾಗಿಲು, ಹೊಲನಗದ್ದೆ, ಕಾಗಾಲ, ಮೊಸಳೆಸಾಲ ಮದ್ಗುಣಿಗಳಲ್ಲಿ ಈಗಾಗಲೇ 80ಕ್ಕೂ ಅಧಿಕ ಬಾವಿಗಳಲ್ಲಿ ಉಪ್ಪುನೀರು ತುಂಬಿ, ಕುಡಿಯಲೂ ನೀರಿಲ್ಲದಂತಾಗಿದೆ.

ಕೆಲಕಡೆ ನೀರಿಗಾಗಿ ಮೈಲುಗಟ್ಟಲೆ ನಡೆಯಬೇಕಾದ ಪರಿಸ್ಥಿತಿಯಿದೆ. ನಲ್ಲಿಯ ನೀರಿಗಾಗಿ ಉರಿಬಿಸಿಲಿನಲ್ಲಿ ಸಾಲಾಗಿ ನಿಂತ ದೃಶ್ಯ ಮರುಕಹುಟ್ಟಿಸುತ್ತದೆ. ಈಗಲೇ ಕೆಲವು ಕಡೆ ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ.

ಸರಕಾರವು ನೀರಿನ ದಾಹವನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಹಲವಾರು ಯೋಜನೆ ಗಳನ್ನು ಹಮ್ಮಿಕೊಂಡಿದೆ. ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಜಲಾನಯನ ಇಲಾಖೆ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದೆ. ಮನೆಮನೆಗೆ ನೀರನ್ನು ಒದಗಿಸುವ ನಿಟ್ಟಿನಲ್ಲಿ ಜಲನಿರ್ಮಲ ಯೋಜನೆ ಇದೆ. ಆದರೂ ಜನತೆಯ ನೀರಿನ ಸಮಸ್ಯೆ ನೀಗುತ್ತಿಲ್ಲ. ದಿನಪೂರ್ತಿ ಕೆಲಸ ಮಾಡಿ ಜೀವನ ಸಾಗಿಸಬೇಕಾದವರ ಪರಿಸ್ಥಿತಿ ನೀರನ್ನು ತರುವುದರಲ್ಲಿಯೇ ಮುಗಿಯುತ್ತಿದೆ. ಹೀಗೆ ನೀರಿಗಾಗಿ ದುಡಿಮೆಯನ್ನು ಬಿಟ್ಟು ಕುಳಿತರೆ, ಅವರ ಜೀವನದ ಗತಿಯೇನು ಎಂಬುದು ಪ್ರಶ್ನೆಯಾಗಿದೆ. ಸರಕಾರದ ಎಷ್ಟೋ ಕೊಳವೆ ಬಾವಿಗಳು, ತೆರೆದ ಬಾವಿಗಳು ಇಂದು ಉಪಯೋಗಕ್ಕೆ ಬಾರದೇ ನಿರುಪಯುಕ್ತವಾಗಿವೆ.

Advertisement

ತಾಪಂ, ಜಿಪಂ ಹಾಗೂ ಶಾಸಕರ ನಿಧಿಯಿಂದ ನೀರಿಗಾಗಿ ಎಷ್ಟೋ ಬಾವಿಗಳು ಮಂಜೂರಾಗುತ್ತದೆ. ಗುತ್ತಿಗೆದಾರ ಬಾವಿಯನ್ನೂ ತೆಗೆಯುತ್ತಾನೆ. ಆದರೆ ಇದರ ಪ್ರಯೋಜನ ಮಾತ್ರ ಜನತೆಗೆ ಸಿಗುತ್ತಿಲ್ಲ.

ಮೊದಲು ಕೃಷಿ ಕಾರ್ಯಗಳು ಜಾಸ್ತಿ ಮಾಡುವುದರಿಂದಾಗಿ ನೀರಿನ ಇಂಗುವಿಕೆ ಜಾಸ್ತಿಯಾಗುತ್ತಿತ್ತು. ಈಗ ಕೃಷಿ ಪ್ರಮಾಣ ಕಡಿಮೆಯಾಗಿ ನೀರು ಇಂಗುವಿಕೆ ಪ್ರಮಾಣ ಇಳಿದಿರುವುದರಿಂದ ಅಂತರ್ಜಲ ಕುಸಿದಿದೆ ಎಂದು ಇಲ್ಲಿನ ತಜ್ಞರ ಅಭಿಪ್ರಾಯವಾಗಿದೆ.

ದೊಡ್ಡ ದೊಡ್ಡ ಕೆರೆಗಳ ಸ್ವಚ್ಛ ಮಾಡುವ ಕೆಲಸವಾಗಬೇಕು. ತಾಲೂಕಿನಾದ್ಯಂತ ಅನೇಕ ಚಿಕ್ಕಚಿಕ್ಕ ಝರಿಗಳಿದ್ದು ಅವುಗಳ ನೀರನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸಿ ಯೋಜನೆ ರೂಪಿಸಿದರೆ ಶಾಶ್ವತ ಪರಿಹಾರ ಸಿಗಬಹುದಾಗಿದೆ. ಅಧಿಕಾರಿಗಳು ಜನಪ್ರತಿನಿಧಿಗಳು ಈ ಕುರಿತು ಗಮನಹರಿಸಬೇಕು ಎಂಬುದು ಈ ಭಾಗದ ಜನರ ಆಶಯವಾಗಿದೆ.

.ದಿನೇಶ ಗಾಂವ್ಕರ

Advertisement

Udayavani is now on Telegram. Click here to join our channel and stay updated with the latest news.

Next