Advertisement

ಸಾಲೂರುಮಠ ಉತ್ತರಾಧಿಕಾರಿ ಪಟ್ಟಾಭಿಷೇಕ

11:18 AM Aug 08, 2020 | Suhan S |

ಹನೂರು: ಸಾಲೂರು ಬೃಹನ್ಮಠದ ಉತ್ತರಾಧಿಕಾರಿಯಾಗಿ ನಾಗೇಂದ್ರ ಆಯ್ಕೆಯಾಗಿದ್ದು ಶನಿವಾರ ಇವರ ಪಟ್ಟಾಭಿಷೇಕಕ್ಕೆ ಸಕಲ ಸಿದ್ಧತೆಗಳು ನಡೆದಿವೆ. ಮತ್ತೂಂದೆಡೆ ನಾಗೇಂದ್ರ ಅವರ ಆಯ್ಕೆಗೆ ಬಗ್ಗೆ ಕೆಲ ಭಕ್ತರಿಂದ ಅಸಮಾಧಾನ ವ್ಯಕ್ತವಾಗಿವೆ.

Advertisement

ಶನಿವಾರದ ಪಟ್ಟಾಭಿಷೇಕ ಮಹೋತ್ಸವದಲ್ಲಿ ಮಹೋತ್ಸವದಲ್ಲಿ ಸುತ್ತೂರು ವೀರಸಿಂಹಾಸನ ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ, ಸಿದ್ಧಗಂಗಾ ಕ್ಷೇತ್ರದ ಸಿದ್ಧಲಿಂಗ ಮಹಾಸ್ವಾಮಿ, ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮಿ, ವಿವಿಧ ಮಠಗಳ ಮಠಾಧೀಶರು, ಹರಗುರುಚರ ಮೂರ್ತಿಗಳು ಭಾಗವಹಿಸಲಿದ್ದಾರೆ.

ಬಂಡಳ್ಳಿ ಗ್ರಾಮದ ಮಹದೇವಪ್ಪ, ಸುಂದ್ರಮ್ಮನವರ ಜೇಷ್ಠ ಪುತ್ರರಾದ ನಾಗೇಂದ್ರ ಅವರು ಮಠದ ಕಿರಿಯ ಸ್ವಾಮೀಜಿಯಾಗಿ ಆಯ್ಕೆಗೊಂಡಿದ್ದಾರೆ. ಉತ್ತರಾಧಿಕಾರಿ ಆಯ್ಕೆ ಮತ್ತು ಮೇಲುಸ್ತುವಾರಿ ಸಮಿತಿ ಜು.28ರಂದು ಸಭೆ ಸೇರಿ ಮಠದ ಉತ್ತರಾಧಿಕಾರಿಯಾಗಿ ಆಯ್ಕೆ ಅಂತಿಮಗೊಳಿಸಿ ವರದಿ ಸಲ್ಲಿಸಿತ್ತು. ಇದಾದ ಬಳಿಕ ಉತ್ತರಾಧಿಕಾರಿ ಆಯ್ಕೆ ಸಂಬಂಧ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನೂ ಆ.3ರಂದು ಘನ ನ್ಯಾಯಾಲಯ ರದ್ದುಗೊಳಿಸಿತ್ತು. ಈ ಹಿನ್ನೆಲೆ ಮಠದ ಉತ್ತರಾಧಿಕಾರಿಯಾಗಿ ನಾಗೇಂದ್ರ ಎಂಬ ವಟುವಿಗೆ ಪಟ್ಟಾಭಿಷೇಕ ನೆರವೇರಿಸಲು ಸಕಲ ಸಿದ್ಧತೆ ನಡೆದಿದೆ.

ಮಠದ ಹಿನ್ನೆಲೆ: ಶ್ರೀ ಕ್ಷೇತ್ರ ಮಲೆ ಮಹದೇಶ್ವರದ ಸಾಲೂರು ಬೃಹನ್ಮಠಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. ಈ ಮಠದಲ್ಲಿ ಹಿರಿಯ ಶ್ರೀಗಳಾಗಿ ಪಟ್ಟದ ಗುರುಸ್ವಾಮಿಗಳು ಮತ್ತು ಕಿರಿಯ ಶ್ರೀಗಳಾಗಿ ಇಮ್ಮಡಿ ಮಹದೇವಸ್ವಾಮಿ ಕಾರ್ಯನಿರ್ವಹಿಸುತ್ತಿದ್ದರು. ಈ ಪೈಕಿ ಇಮ್ಮಡಿ ಮಹದೇವಸ್ವಾಮಿ ಸುಳ್ವಾಡಿ ವಿಷಪ್ರಸಾದ ಪ್ರಕರಣದಲ್ಲಿ ಸಿಲುಕಿ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದಾರೆ. ಇತ್ತ ಹಿರಿಯ ಶ್ರೀಗಳಾದ ಪಟ್ಟದ ಗುರುಸ್ವಾಮಿಗಳ ಆರೋಗ್ಯದಲ್ಲಿ ಆಗಾಗ್ಗೆ ಏರು ಪೇರಾಗುತ್ತಿದ್ದು ಮಠದ ಜವಾಬ್ದಾರಿ ವಹಿಸುವುದು ಕಷ್ಟವಾಗುತ್ತಿದೆ. ಈ ಹಿನ್ನೆಲೆ ಮಠಕ್ಕೆ ಉತ್ತರಾಧಿಕಾರಿ ಆಯ್ಕೆ ಪ್ರಸ್ತಾಪ ಹಿನ್ನೆಲೆಯಲ್ಲಿ ಸುತ್ತೂರು ಶ್ರೀಗಳ ಮಾರ್ಗದರ್ಶನದಲ್ಲಿ ಉತ್ತರಾಧಿಕಾರಿ ಆಯ್ಕೆ ಸಂಬಂಧ 9 ಜನ ಸದಸ್ಯರ ಮೇಲುಸ್ತುವಾರಿ ಸಮಿತಿ ರಚಿಸಲಾಯಿತು. ಈ ಸಮಿತಿ 2-3ಬಾರಿ ಸಭೆ ನಡೆಸಿದರೂ ಮಠದ ಭಕ್ತರಲ್ಲಿ ಒಮ್ಮತ ಮೂಡಿದ ಹಿನ್ನೆಲೆ ಮತ್ತು ಸುಳ್ವಾಡಿ ಪ್ರಕರಣದ ಆರೋಪಿ ಇಮ್ಮಡಿ ಮಹದೇವಸ್ವಾಮಿ ಉತ್ತರಾಧಿಕಾರಿ ಆಯ್ಕೆ ಪ್ರಶ್ನಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಗೆ ಕೋರ್ಟ್‌ ತಡೆಯಾಜ್ಞೆ ನೀಡಿತ್ತು. ಅತ್ತ ಸಾಲೂರು ಮಠದಲ್ಲಿ ನಾಗೇಂದ್ರರ ಪಟ್ಟಾಭಿಷೇಕಕ್ಕೆ ಸಿದ್ಧತೆ ಕೈಗೊಂಡಿದ್ದರೆ ಇತ್ತ ಭಕ್ತರ ಗುಂಪೊಂದು ಶುಕ್ರವಾರ ಮಠದ ಮುಂಭಾಗ ಪ್ರತಿಭಟನೆಗೆ ಮುಂದಾಗಿದ್ದರು. ಈ ವೇಳೆ ಪೊಲೀಸರು ಅನುಮತಿ ನಿರಾಕರಿಸಿದ ಹಿನ್ನೆಲೆ ಸಮಾನ ಮನಸ್ಕರ ಸಭೆ ನಡೆಸಲಾಯಿತು.

ಸಮಾನ ಮನಸ್ಕರ ಸಭೆಯಲ್ಲಿ ಕೇಳಿ ಬಂದಿದ್ದು: ಆಯ್ಕೆ ಸಮಿತಿ ಭಕ್ತರ ಮನವಿ ಪರಿಗಣಿಸದೆ ನಾಗೇಂದ್ರ ಎಂಬವರಿಗೆ ಉತ್ತರಾಧಿಕಾರಿ ಪಟ್ಟಾಭಿಷೇಕ ನಡೆಸಲು ಸಕಲ ಸಿದ್ಧತೆಗಳು ನಡೆಯುತ್ತಿರುವುದು ನಿಯಮ ಬಾಹಿರ ಎಂದು ಭಕ್ತರು ಆರೋಪಿಸಿದ್ದಾರೆ.

Advertisement

ಉತ್ತರಾಧಿಕಾರಿ ಸಂಕ್ಷಿಪ್ತ ಪರಿಚಯ : ಎಂ.ನಾಗೇಂದ್ರ ಅವರು 1989ರ ಜೂ.4ರಂದು ಚಾ.ನಗರ ಜಿಲ್ಲೆಯ ಹನೂರು ತಾಲೂಕು ಬಂಡಳ್ಳಿ ಗ್ರಾಮದಲ್ಲಿ ಜನಿಸಿದರು. ಪ್ರಾಥಮಿಕ ಸಂಸ್ಕೃತ ವೇದ ಶಿಕ್ಷಣ ಶ್ರೀಸಿದ್ಧಗಂಗಾ ಮಠದಲ್ಲಿ, ಆಗಮ ಮತ್ತು ಮಾಧ್ಯಮಿಕ ಸಂಸ್ಕೃತ ಶಿಕ್ಷಣ ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆಯಲ್ಲಿ ಮಾಡಿದ್ದಾರೆ. ಮೈಸೂರು ವಿವಿಯಲ್ಲಿ ಸಂಸ್ಕೃತ ಎಂಎ ಪದವಿಯೊಂದಿಗೆ ಚಿನ್ನದ ಪದಕ, ನಗದು ಬಹುಮಾನ ಪಡೆದಿದ್ದಾರೆ. ವೇದಾಂತದಲ್ಲಿ ಸಂಸ್ಕೃತ ವಿದ್ವತ್‌ ಪದವಿ ಗಳಿಸಿದ್ದಾರೆ. ನಾಡಿನ ಖ್ಯಾತ ವಿದ್ವಾಂಸ ಮಠಾಧಿಪತಿಗಳೆನಿಸಿದ ಲಿಂ.ಡಾ.ಶ್ರೀಇಮ್ಮಡಿ ಶಿವಬಸವ ಸ್ವಾಮಿಗಳ ಮಾರ್ಗದರ್ಶನ, ಆಶ್ರಯದಲ್ಲಿ ಮೈಸೂರಿನ ಶ್ರೀಕುಂದೂರು ಮಠದಲ್ಲಿ ಅಧ್ಯಯನ ಮಾಡಿದರು. ಪ್ರಸ್ತುತ ಆ ಮಠದ ಅಧ್ಯಕ್ಷರು, ಸಂಸ್ಕೃತ ಪ್ರಾಧ್ಯಾಪಕ ಡಾ.ಶ್ರೀ ಶರತ್‌ ಚಂದ್ರ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಸಂಸ್ಕೃತ ವಿವಿಯಲ್ಲಿ ಎಂ. ಫಿಲ್‌ ಪದವಿ ಪಡೆದಿದ್ದಾರೆ. ಪ್ರಸ್ತುತ ಅಲ್ಲಿಯೇ ಪಿಎಚ್‌ ಡಿ ಪದವಿಗಾಗಿ ಶೈವಾಗಮ ವಿಷಯದ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಅವರು ಗುಜರಾತ್‌, ಹಿಮಾಚಲ ಪ್ರದೇಶ, ದೆಹಲಿ, ಆಂಧ್ರಪ್ರದೇಶ, ತಮಿಳುನಾಡು, ಜಾರ್ಖಂಡ್‌ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಮತ್ತು ವಿಶ್ವಮಟ್ಟದಲ್ಲಿ ನೇಪಾಳ, ಮಲೇಷ್ಯಾ ದೇಶಗಳಲ್ಲಿ ನಡೆದಿರುವ ವಿಚಾರ ಸಂಕಿರಣಗಳಲ್ಲಿ ಭಾಷಾಶಾಸ್ತ್ರ, ಧರ್ಮ ಸಾಹಿತ್ಯ, ಸಂಸ್ಕೃತಿ ಬಗ್ಗೆ 10ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ.  ಲಿಪಿಶಾಸ್ತ್ರ, ಹಸ್ತ ಪ್ರತಿಗಳ ಮೇಲೆ ವಿಶೇಷ ಅಧ್ಯಯನದಲ್ಲಿ ನಿರತರಾಗಿದ್ದಾರೆ. ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಆಯುರ್ವೇದ ಆಹಾರ ವಿಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ಹಸ್ತಪ್ರತಿ ಶಾಸ್ತ್ರ ಸಂಶೋಧಕರಾಗಿ ಕಾರ್ಯನಿರ್ವಹಿಸಿ, 2016 ರಿಂದ ಪ್ರಸ್ತುತದವರೆಗೆ ಮೈಸೂರಿನ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಭಾರತೀಯ ಭಾಷಾ ಸಂಸ್ಥಾನದಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

 

ವಿನೋದ್‌ ಎನ್‌. ಗೌಡ

Advertisement

Udayavani is now on Telegram. Click here to join our channel and stay updated with the latest news.

Next