ಮುಂಬಯಿ: ಎನ್ ಸಿಪಿ (ಅಜಿತ್ ಪವರ್) ಬಣದ ನಾಯಕ ಬಾಬಾ ಸಿದ್ದಿಕಿ (Baba Siddique) ಹ*ತ್ಯೆ ಪ್ರಕರಣದ ಚರ್ಚೆ ಕಳೆದ ಕೆಲ ದಿನದಿಂದ ಬಾಲಿವುಡ್‌ನಲ್ಲಿ ನಡೆಯುತ್ತಿದೆ. ಇನ್ನೊಂದೆಡೆ ಇದರ ಹೊಣೆ ಹೊತ್ತುಕೊಂಡಿರುವ ಲಾರೆನ್ಸ್ ಬಿಷ್ಣೋಯ್ (Gangster Lawrence Bishnoi) ಗ್ಯಾಂಗ್ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಸಲ್ಮಾನ್ ಖಾನ್ ಅವರನ್ನು ಬೆಂಬಲಿಸಿದ ಎಲ್ಲರಿಗೂ ಇದೇ ರೀತಿ ಆಗುತ್ತದೆಂದು ಗ್ಯಾಂಗ್‌ನ ಸದಸ್ಯರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಈ ಹಿನ್ನೆಲೆ ನಟ ಸಲ್ಮಾನ್ ಖಾನ್ (Salman Khan) ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಇದನ್ನೂ ಓದಿ: Tollywood: ʼಬಾಹುಬಲಿʼ ಮೂರನೇ ಪಾರ್ಟ್ ಬರುತ್ತಾ?; ಖ್ಯಾತ ನಿರ್ಮಾಪಕ ಹೇಳಿದ್ದೇನು?
ಲಾರೆನ್ಸ್ ಹಿಟ್ ಲಿಸ್ಟ್ ನಲ್ಲಿ ಬಾಲಿವುಡ್ ನಟರು, ರಾಜಕಾರಣಿಗಳು ಸೇರಿದಂತೆ ಹಲವರಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ನಡುವೆ ಸಲ್ಮಾನ್ ಖಾನ್ ಅವರ ಮಾಜಿ ಗೆಳತಿ, ನಟಿಯೊಬ್ಬಳು ಲಾರೆನ್ಸ್ ಬಿಷ್ಣೋಯ್‌ಗೆ ಬಹಿರಂಗ ಸಂದೇಶವೊಂದನ್ನು ರವಾನಿಸಿದ್ದಾರೆ.
ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅವರ ಮಾಜಿ ಗೆಳತಿ ಸೋಮಿ ಅಲಿ (Somy Ali) ಅವರು ತನ್ನ ಸಾಮಾಜಿಕ ಜಾಲತಾಣದಲ್ಲಿ ಲಾರೆನ್ಸ್ ಬಿಷ್ಣೋಯ್ ಅವರಿಗೆ ಬಹಿರಂಗವಾಗಿ ಒಂದು ಸಂದೇಶವನ್ನು ಕಳುಹಿಸಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ನನಗೆ ತಮ್ಮ ಬಳಿ ಏನೋ ಮಾತನಾಡಲು ಇದೆ. ನನಗೆ ಕರೆ ಮಾಡಿ ಎಂದು ಸೋಮಿ ಸಂದೇಶದಲ್ಲಿ ತಿಳಿಸಿದ್ದಾರೆ.
ಪೋಸ್ಟ್‌ನಲ್ಲಿ ಏನಿದೆ?: ಸೋಮಿ ಅಲಿ ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಲಾರೆನ್ಸ್ ಫೋಟೋ ಹಾಕಿಕೊಂಡು ಪೋಸ್ಟ್ ಹಾಕಿದ್ದು, “ಇದು ಲಾರೆನ್ಸ್ ಬಿಷ್ಣೋಯಿ ಅವರಿಗೆ ನನ್ನ ನೇರ ಸಂದೇಶವಾಗಿದೆ: ನಮಸ್ತೆ ಲಾರೆನ್ಸ್ ಭಾಯಿ, ನೀವು ಜೈಲಿನಲ್ಲಿದ್ದು ಝೂಮ್ ಕಾಲ್ ಮಾಡುತ್ತೀರಾ ಅಂಥ ಕೇಳಿದ್ದೇನೆ ಮತ್ತು ನೋಡಿದ್ದೇನೆ. ನನಗೆ ನಿಮ್ಮ ಬಳಿ ಏನೋ ಮಾತನಾಡಲು ಇದೆ. ದಯವಿಟ್ಟು ಇದು ಹೇಗೆ ಸಾಧ್ಯವಾಗುತ್ತದೆ ಎಂದು ತಿಳಿಸಿ. ನನಗೆ ವಿಶ್ವದಲ್ಲೇ ಅತ್ಯಂತ ಸುಂದರವಾದ ಜಾಗ ರಾಜಸ್ಥಾನ. ನಾನು ನಿಮ್ಮ ದೇವಸ್ಥಾನಕ್ಕೆ ಬರಲು ಇಷ್ಟಪಡುತ್ತೇನೆ. ಅಲ್ಲಿ ಪೂಜೆ ಸಲ್ಲಿಸುವ ಮುನ್ನ ನಿಮ್ಮ ಬಳಿ ಮಾತನಾಡಬೇಕು. ಪೂಜೆ ಬಳಿಕ ನಿಮ್ಮ ಹತ್ತಿರ ತುಂಬಾ ಮಾತನಾಡಬೇಕು. ನನ್ನನ್ನು ನಂಬಿ ಇದು ನಿಮ್ಮ ಒಳ್ಳೆಯದಕ್ಕೆ ಆಗುವುದು. ನಿಮ್ಮ ಮೊಬೈಲ್ ನಂಬರ್ ಹಂಚಿಕೊಂಡರೆ ತುಂಬಾ ಉಪಕಾರ ಆಗುತ್ತದೆ” ಎಂದು ಸೋಮಿ ಬರೆದುಕೊಂಡಿದ್ದಾರೆ.
ಸದ್ಯ ಈ ಪೋಸ್ಟ್ ವೈರಲ್ ಆಗಿದ್ದು, ವಿವಾದಕ್ಕೂ ಎಡೆಮಾಡಿಕೊಟ್ಟಿದೆ.
ಸಲ್ಮಾನ್ ಮೇಲೆ ಲಾರೆನ್ಸ್‌ಗೆ ದ್ವೇಷ ಯಾಕೆ?: ಬಾಲಿವುಡ್ ನಟ ಲಾರೆನ್ಸ್ ಬಿಷ್ಣೋಯ್ ತಂಡದ ಪ್ರೈಮ್ ಟಾರ್ಗೆಟ್ ಆಗಿದ್ದಾರೆ. 1998ರಲ್ಲಿ ‘ಹಮ್ ಸಾಥ್ ಸಾಥ್ ಹೇ’ ಚಿತ್ರದ ಶೂಟಿಂಗ್ಗಾಗಿ ಸಲ್ಮಾನ್ ಖಾನ್ (Salman Khan) ರಾಜಸ್ಥಾನದ ಜೋಧ್‌ಪುರಕ್ಕೆ ತೆರಳಿದ್ದರು. ಆ ಸಮಯದಲ್ಲಿ ಸಲ್ಮಾನ್ ಖಾನ್ ಒಂದು ಕೃಷ್ಣ ಮೃಗವನ್ನು ಬೇಟೆಯಾಡಿದ್ದರು. ಬಿಷ್ಣೋಯ್ ಸಮುದಾಯದವರು ಪ್ರಕೃತಿ ಆರಾಧಕರು. ಬಿಷ್ಣೋಯ್ ಗಳು ಕೃಷ್ಣಮೃಗವನ್ನು ತಮ್ಮ ಧಾರ್ಮಿಕ ಗುರು ಭಗವಾನ್ ಜಂಬೇಶ್ವರ ಅವರ ಪುನರ್ಜನ್ಮ ಎಂದು ಪರಿಗಣಿಸುತ್ತಾರೆ. ಹೀಗಾಗಿ, ಈ ಪ್ರಾಣಿಯನ್ನು ಕೊಲ್ಲುವುದನ್ನು ಅಥವಾ ಮರವನ್ನು ಕಡಿಯುವುದನ್ನು ಬಿಷ್ಣೋಯಿಗಳು ಎಂದಿಗೂ ಸಹಿಸುವುದಿಲ್ಲ.
ಅಂದಿನಿಂದ ಇಂದಿನವರೆಗೆ ಸಲ್ಮಾನ್ ಖಾನ್ ಅವರಿಗೆ ಅನೇಕ ಬಾರಿ ಗ್ಯಾಂಗ್ ಸ್ಟರ್ ಲಾರೆನ್ಸ್ ಇ-ಮೇಲ್ ಮೂಲಕ ಬೆದರಿಕೆಯನ್ನು ಹಾಕುತ್ತಲೇ ಬಂದಿದ್ದ. ಇತ್ತೀಚೆಗೆ ಗುಂಡಿನ ದಾಳಿ ನಡೆಸಿ, ಮತ್ತೊಮ್ಮೆ ಸಲ್ಮಾನ್ ಖಾನ್ ಗೆ ಎಚ್ಚರಿಕೆಯನ್ನು ನೀಡಿದ್ದ. 2022 ಹಾಗೂ 2023 ರ ಅವಧಿಯಲ್ಲಿ ಬಿಷ್ಣೋಯ್ ಹಲವು ಬಾರಿ ಸಲ್ಮಾನ್ ಖಾನ್ ಗೆ ಬೆದರಿಕೆಯನ್ನು ಹಾಕಿದ್ದ.