Advertisement

ಜೋಧ್‌ಪುರ ಸೆಂಟ್ರಲ್‌ ಜೈಲಿನಲ್ಲಿ ಸಲ್ಮಾನ್‌; ಕೈದಿ ಆಸಾ ರಾಮ್‌ ಸಹವಾಸ

07:17 PM Apr 05, 2018 | udayavani editorial |

ಹೊಸದಿಲ್ಲಿ : ಹದಿನೆಂಟು ವರ್ಷಗಳ ಹಿಂದೆ ಎರಡು ಕೃಷ್ಣ ಮೃಗಗಳನ್ನು ಹತ್ಯೆ ಗೈದ ಅಪರಾಧಕ್ಕಾಗಿ ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿ ಇಂದು ಜೋಧ್‌ಪುರ ಸೆಂಟ್ರಲ್‌ ಜೈಲನ್ನು ಸೇರಿಕೊಂಡಿರುವ ಬಾಲಿವುಡ್‌ ಸೂಪರ್‌ ಹಿಟ್‌ ನಟ ಸಲ್ಮಾನ್‌ ಖಾನ್‌, ಇಂದು ರಾತ್ರಿಯ ತಮ್ಮ ಜೈಲು ವಾಸವನ್ನು 13ರ ಹರೆಯದ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸ್ವಘೋಷಿತ ದೇವಮಾನವ ಆಸಾರಾಂ ಬಾಪು ಅವರನ್ನು ಇರಿಸಲಾಗಿರುವ  2ನೇ ನಂಬರ್‌ ಜೈಲು  ಕೋಣೆಯಲ್ಲಿ ಕಳೆಯಲಿದ್ದಾರೆ.

Advertisement

ಸಲ್ಮಾನ್‌ ಖಾನ್‌ ಬಂಧಿಯಾಗಿರುವ ಜೋಧ್‌ಪುರ ಜೈಲಿಗೆ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿದೆ. ನಾಳೆ ಶುಕ್ರವಾರ ಸಲ್ಮಾನ್‌ ಬೇಲ್‌ ಅರ್ಜಿಯನ್ನು ನ್ಯಾಯಾಲಯ ವಿಚಾರಣೆಗೆ ಎತ್ತಿಕೊಳ್ಳಲಿದೆ. 

ಕೃಷ್ಣ ಮೃಗ ಬೇಟೆಯಾಡಿದ ಪ್ರಕರಣದಲ್ಲಿ ಸಲ್ಮಾನ್‌ ಖಾನ್‌ ಇದೇ ಜೋಧ್‌ಪುರ ಸೆಂಟ್ರಲ್‌ ಜೈಲಿನಲ್ಲಿ ಈ ಹಿಂದೆ 1998, 2006 ಮತ್ತು 2007ರಲ್ಲಿ ಒಟು 18 ದಿನಗಳ ಕಾರಾಗೃಹ ವಾಸವನ್ನು ಅನುಭವಿಸಿದ್ದಾರೆ. ಆದುದರಿಂದ ಜೋಧ್‌ಪುರ ಜೈಲಿನಲ್ಲಿ ಸಲ್ಮಾನ್‌ ಇದೀಗ ನಾಲ್ಕನೇ ಬಾರಿಗೆ ಅತಿಥಿಯಾಗಿದ್ದಾರೆ. 

ಐದು ವರ್ಷಗಳ ಜೈಲು ಶಿಕ್ಷೆಯ ಕೋರ್ಟ್‌ ತೀರ್ಪು ಪ್ರಕಟವಾದೊಡನೆಯೇ 52ರ ಹರೆಯದ ನಟ ಸಲ್ಮಾನ್‌ ಖಾನ್‌ ಅವರನ್ನು ಪೊಲೀಸ್‌ ವಾಹನದಲ್ಲಿ ಜೋಧ್‌ಪುರ ಸೆಂಟ್ರಲ್‌ ಜೈಲಿಗೆ ಒಯ್ಯಲಾಯಿತು. ಮೊದಲು ಆಸ್ಪತ್ರೆಯೊಂದಕ್ಕೆ ಒಯ್ದು ಅಲ್ಲಿ ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಿ ಅನಂತರ ಅವರನ್ನು ಜೈಲಿಗೆ ಒಯ್ಯಲಾಯಿತು. 

ಕೃಷ್ಣ ಮೃಗ ಬೇಟೆಯ ವೇಳೆ ಸಫಾರಿ ಜೀಪ್‌ನಲ್ಲಿ  ಸಲ್ಮಾನ್‌ ಖಾನ್‌ ಜತೆಗಿದ್ದ ಬಾಲಿವುಡ್‌ನ‌ ಇತರ ನಟರಾದ ಸೈಫ್ ಅಲಿ ಖಾನ್‌, ತಬು,  ಸೋನಾಲಿ ಬೇಂದ್ರೆ ಮತ್ತು ನೀಲಂ ಕೊಠಾರಿ ಇವರ ಖುಲಾಸೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದು ಜೀವ ರಕ್ಷಾ ಬಿಷ್ಣೋಯಿ ಸಭಾ ಅಧ್ಯಕ್ಷ ಶಿವರಾಜ್‌ ಬಿಷ್ಣೋಯಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next