ಮುಂಬೈ:ಮಾರಣಾಂತಿಕ ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಮುಂದುವರಿದಿದ್ದು, ಏತನ್ಮಧ್ಯೆ ಬಾಲಿವುಡ್ ನ 25 ಸಾವಿರ ದಿನಗೂಲಿ ನೌಕರರಿಗೆ ನೆರವು ನೀಡಲು ಖ್ಯಾತ ನಟ ಸಲ್ಮಾನ್ ಖಾನ್ ಮುಂದಾಗಿದ್ದಾರೆ ಎಂದು ವರದಿ ತಿಳಿಸಿದೆ.
ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯ್ಸ್ ನ ಕಲಾವಿದರಿಗೆ ಸಲ್ಮಾನ್ ಖಾನ್ ನೆರವು ನೀಡುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ಬಿಎನ್ ತಿವಾರಿ ತಿಳಿಸಿದ್ದಾರೆ.
“ಸಂಘದ ವತಿಯಿಂದ ನಾವು ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಿದ್ದೇವು, ಲಾಕ್ ಡೌನ್ ನಿಂದಾಗಿ ತುಂಬಾ ಕಷ್ಟಕ್ಕೊಳಗಾದ ನೌಕರರ ವಿವರ ಕೊಡುವಂತೆ ಕೇಳಿದ್ದರು. ಸುಮಾರು 25 ಸಾವಿರ ಮಂದಿ ಕಲಾವಿದರು ಇದ್ದಿರುವುದಾಗಿ ತಿಳಿಸಿದೆವು. ನಂತರ ಎಲ್ಲರಿಗೂ ನೆರವು ನೀಡುವುದಾಗಿ ತಿಳಿಸಿದ್ದರು. ಅಲ್ಲದೇ ಎಲ್ಲರ ವಿವರಗಳ ಪಟ್ಟಿಯನ್ನು ಸಲ್ಮಾನ್ ಖಾನ್ ಗೆ ಕಳುಹಿಸಿಕೊಡುವುದಾಗಿ ತಿವಾರಿ ತಿಳಿಸಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ಡಾಟ್ ಕಾಮ್ ವರದಿ ಮಾಡಿದೆ.
ಇದೊಂದು ತುಂಬಾ ಕಷ್ಟದ ಸಮಯವಾಗಿದೆ. ಜನರು ಕೇವಲ 21 ದಿನಗಳ ಲಾಕ್ ಡೌನ್ ಗೆ ಸಿದ್ದರಾಗಿದ್ದಾರೆ. ಆದರೆ ನಮ್ಮಲ್ಲಿ ಐದು ಲಕ್ಷ ಮಂದಿ ಕಾರ್ಮಿಕರಿದ್ದಾರೆ. ಒಂದು ವೇಳೆ ಲಾಕ್ ಡೌನ್ ಮತ್ತೆ ಮುಂದುವರಿದರೆ, ನಾವು ಪ್ರತಿಯೊಬ್ಬರ ಬಳಿಯೂ ನೆರವು ಕೇಳಬೇಕಾಗುತ್ತದೆ ಎಂದು ತಿವಾರಿ ತಿಳಿಸಿದ್ದಾರೆ. ದಿನಗೂಲಿ ಕಾರ್ಮಿಕರ ಬ್ಯಾಂಕ್ ಖಾತೆ ವಿವರ ನೀಡುವಂತೆ ಸಲ್ಮಾನ್ ಖಾನ್ ತಿಳಿಸಿದ್ದು, ನೇರವಾಗಿ ಎಲ್ಲರ ಖಾತೆಗೆ ಹಣ ಹಾಕುವ ವ್ಯವಸ್ಥೆ ಮಾಡುವುದಾಗಿ ಸಲ್ಮಾನ್ ತಿಳಿಸಿದ್ದಾರೆ ಎಂದು ವರದಿ ಹೇಳಿದೆ.