ಜೋಧ್‌ಪುರ: ಕೃಷ್ಣಮೃಗ ಬೇಟೆಯಾಡಿದ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿರುವ ಕೋರ್ಟ್ ತೀರ್ಪನ್ನು ಸ್ವಾಗತಿಸಿ ಬಿಷ್ಣೋಯಿ ಸಮುದಾಯದ ಜನರು ಜೋಧ್‌ಪುರ್ ಸಿಜೆ ನ್ಯಾಯಾಲಯದ ಎದುರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ.
ಕೋರ್ಟ್ ತೀರ್ಪು ಹೊರ ಬರುತ್ತಿದ್ದಂತೆ ಜಮಾವಣೆಗೊಂಡ ನೂರಾರು ಯುವಕರು ಪಟಾಕಿ ಸಿಡಿಸಿ ಕೇಕೆ ಹಾಕಿ ಸಂಭ್ರಮಿಸಿದರು. ನ್ಯಾಯಕ್ಕೆ , ಹೋರಾಟಕ್ಕೆ ಜಯ ಸಿಕ್ಕಿದೆ, ಅನ್ಯಾಯಕ್ಕೆ ಜೈಲಾಗಿದೆ ಎನ್ನುವ ಘೋಷಣೆಗಳನ್ನು ಕೂಗಿದರು.
ಕೃಷ್ಣ ಮೃಗಗಳ ಹತ್ಯೆ ಪ್ರಕರಣದ ದೂರು ದಾಖಲಿಸುವುದರಿಂದ ಹಿಡಿದು ನ್ಯಾಯಾಲಯದ ಮೆಟ್ಟಿಲೇರಿ ಸಾಕ್ಷಿ ಹೇಳುವ ಮೂಲಕ ಸಲ್ಮಾನ್ ಖಾನ್‌ಗೆ ಜೈಲು ಶಿಕ್ಷೆ ಯಾಗುವ ವರೆಗೆ ಬಿಷ್ಣೋಯಿ ಜನರು ಹೋರಾಟ ನಡೆಸಿದ್ದರು.
ಪ್ರಕರಣದ ಇತರ ಆರೋಪಿಗಳಾದ ಸೈಫ್ ಅಲಿ ಖಾನ್, ಟಬು, ಸೋನಾಲಿ ಬೆಂದ್ರೆ ಮತ್ತು ನೀಲಂ ಕೋಠಾರಿ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
1998 ರ ಆಕ್ಟೋಬರ್ 2 ರಂದು ಜೋಧ್‌ಪುರ್ ಹೊರವಲಯದಲ್ಲಿ ಕಂಕಣಿ ಎಂಬಲ್ಲಿ 2 ಕೃಷ್ಣ ಮೃಗಗಳನ್ನು ಗುಂಡಿಕ್ಕಿ ಹತ್ಯೆಗೈದಿದ್ದರು. ‘ಹಮ್ ಸಾಥ್ ಸಾಥ್ ಹೇ’ ಚಿತ್ರದ ಚಿತ್ರೀಕರಣಕ್ಕೆ ತೆರಳಿದ್ದ ವೇಳೆ ಈ ಕೃತ್ಯ ಎಸಗಿದ್ದರು.