ಸಲ್ಮಾನ್ ಖಾನ್ ನಾಯಕರಾಗಿರುವ “ದಬಾಂಗ್-3′ ಚಿತ್ರದಲ್ಲಿ ಸುದೀಪ್ ಪ್ರಮುಖ ಪಾತ್ರ ಮಾಡಿರೋದು ಗೊತ್ತೇ ಇದೆ. ಚಿತ್ರದಲ್ಲಿ ಬಲ್ಲಿ ಸಿಂಗ್ ಎಂಬ ಪಾತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದಾರೆ. ಸಖತ್ ಸ್ಟೈಲಿಶ್ ಆಗಿ, ಹೀರೋಗಿಂತ ಹೆಚ್ಚು ಡೈಲಾಗ್ ಇರುವ ಅಬ್ಬರಿಸುವ ಪಾತ್ರವದು. ಸುದೀಪ್ ಅವರ ಈ ಪಾತ್ರಕ್ಕೆ ಮತ್ತಷ್ಟು ಜೀವ ತುಂಬಿ, ತೂಕ ಬರುವಂತೆ ಮಾಡಿದ್ದು ಸ್ವತಃ ಸಲ್ಮಾನ್ ಖಾನ್. ಹೌದು, ಈ ಮಾತನ್ನು ಸುದೀಪ್ ಖುಷಿಯಿಂದ ಹೇಳುತ್ತಾರೆ.
ತನ್ನೆದುರು ನಿಂತು ನಟಿಸುವ ಕಲಾವಿದರ ತನಗಿಂತ ಚೆನ್ನಾಗಿ ನಟಿಸಿದರೆ ಅಥವಾ ಅವರ ಪಾತ್ರದ ತೂಕ ಹೆಚ್ಚಿದರೆ ಅದೆಷ್ಟೋ ಹೀರೋಗಳು ಕಸಿವಿಸಿಗೊಳ್ಳುತ್ತಾರೆ. ಆದರೆ, ಸಲ್ಮಾನ್ ಖಾನ್ ಮಾತ್ರ ಅದರಿಂದ ಮುಕ್ತ ಮುಕ್ತ. ಈ ಬಗ್ಗೆ ಮಾತನಾಡುವ ಸುದೀಪ್, “ದಬಾಂಗ್ ನನಗೆ ಒಳ್ಳೆಯ ಅನುಭವ ಕೊಟ್ಟ ಸಿನಿಮಾ. ಹಾಗಂತ ನಾನು ಈ ಸಿನಿಮಾವನ್ನು ನನ್ನ ಕೆರಿಯರ್‌ಗೊàಸ್ಕರ ಮಾಡಿದ್ದೀನಿ ಅಂದ್ರೆ ತಪ್ಪಾಗುತ್ತೆ.
ಒಂದು ಸಿನಿಮಾವಾಗಿ ಜೊತೆಗೆ ಸಲ್ಮಾನ್ ಖಾನ್ ಜೊತೆಗೆ ಮಾಡಬೇಕೆಂಬ ಆಸೆಗಾಗಿಯೂ ಒಪ್ಪಿಕೊಂಡೆ. ಎಷ್ಟೋ ಬಾರಿ ಸಲ್ಮಾನ್ ಖಾನ್ ನನಗಾಗಿ ಬರೆದಿದ್ದಾರೆ, ನನ್ನ ಪಾತ್ರವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ಇದು ಸಾಕಾಗ್ತಾ ಇಲ್ಲ. ಇನ್ನೂ ಏನನ್ನೋ ಬೇಕು, ಹೀಗೆ ಬರಬೇಕು, ಇಷ್ಟು ಡೈಲಾಗ್ ಇರಬೇಕು ಎಂದು ಮತ್ತಷ್ಟು ತೂಕ ಹೆಚ್ಚಿಸಿದ್ದಾರೆ. ಅವರು ಯಾವತ್ತೂ ಸ್ವಾರ್ಥಿಯಾಗಿ ಯೋಚಿಸೋದಿಲ್ಲ. ಅವರಿಗೆ ಇನ್‌ಸೆಕ್ಯುರ್ಡ್ ಭಾವನೆಯೇ ಇಲ್ಲ.
ಆರಾಮವಾಗಿ ತನ್ನ ಜೊತೆಗಿರುವ ಕಲಾವಿದರನ್ನು ಪ್ರೋತ್ಸಾಹಿಸುತ್ತಾರೆ’ ಎನ್ನುವುದು ಸುದೀಪ್ ಮಾತು. ಸುದೀಪ್ ಅವರ ಬಲ್ಲಿ ಸಿಂಗ್ ಪಾತ್ರ ತುಂಬಾ ವಿಶೇಷವಾಗಿದೆಯಂತೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಅವರ ಮಾತು ಕಮ್ಮಿಯಾದರೆ, ಅದಕ್ಕೆ ತದ್ವಿರುದ್ಧವಾದ ಪಾತ್ರ ಸುದೀಪ್ ಅವರದು. ಸುದೀಪ್ ಅವರ ಮಾತಲ್ಲೇ ಹೇಳಬೇಕಾದರೆ, “ಚಿತ್ರದಲ್ಲಿ ಸಲ್ಮಾನ್ ಖಾನ್ ಚುಲ್‌ಬುಲ್ ಪಾಂಡೆಯಾದರೆ ನಾನು ಸಲ್ಮಾನ್ ಖಾನ್ ಆದೆ’ ಎನ್ನುತ್ತಾರೆ.
“ದಬಾಂಗ್-3′ ಚಿತ್ರತಂಡ ಸುದೀಪ್ ಅವರನ್ನು ಆರಂಭದಿಂದಲೂ ತುಂಬಾ ಗೌರವಯುತವಾಗಿ ನಡೆಸಿಕೊಂಡಿತಂತೆ. “ನನಗೆ ಆರಂಭದಲ್ಲಿ ವಿಡಿಯೋ ಕಾಲ್ ಮೂಲಕ ಸೊಹೈಲ್ ಖಾನ್ ಈ ಆಫರ್ ಕೊಟ್ಟರು. ಅಲ್ಲೂ ಅವರು ಗೌರವ ನೀಡಿದ್ದನ್ನು ನಾನು ಮರೆಯುವಂತಿಲ್ಲ. “ಪಾತ್ರ ಮಾಡೋಕೆ ಕರ್ಕೊಂಡು ಬನ್ನಿ’ ಎಂದು ಕೇಳಲಿಲ್ಲ. ಬದಲಾಗಿ, “ಅವರು ಈ ಪಾತ್ರ ಮಾಡ್ತಾರಾ ಕೇಳಿ ನೋಡಿ’ ಎಂದರು. ಆಗ ನಮಗೆ ನಾವಿಲ್ಲಿ ಮಾಡಿರೋ ಸಾಧನೆಯ ಬಗ್ಗೆ ಗೊತ್ತಾಗುತ್ತದೆ’ ಎನ್ನುತ್ತಾರೆ.
ತುಂಬಾ ಯೋಚನೆ ಮಾಡಬಾರದು: ಸುದೀಪ್ ಅವರು ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಅದೇನೆಂದರೆ ಕೆಲವು ಸಿನಿಮಾಗಳನ್ನು ಒಪ್ಪಿಕೊಳ್ಳುವ ಮುನ್ನ ತುಂಬಾ ಯೋಚನೆ ಮಾಡಬಾರದೆಂದು. “ಚಿತ್ರರಂಗಕ್ಕೆ ಬಂದು 24 ವರ್ಷ ಆಯ್ತು. 24 ವರ್ಷ ಆದ ಮೇಲೆ ಕೆಲವು ಸಿನಿಮಾ ಒಪ್ಪಿಕೊಳ್ಳುವ ಮುನ್ನ ತುಂಬಾ ಥಿಂಕ್ ಮಾಡಬಾರದು, ಯಾಕ್ ಮಾಡಬೇಕು, ಇದರಿಂದ ನನಗೇನು ಲಾಭ- ನಷ್ಟ.
ನಮಗಿಂತ ಮುಂಚೆ ಬಂದವರು ಜೊತೆ ಒಂದು ಅವಕಾಶ ಸಿಗುತ್ತಿದೆ ಎಂದರೆ ಹೋಗಿ ಬರಬೇಕು. “ಮಾತಾಡ್ ಮಾತಾಡ್ ಮಲ್ಲಿಗೆ’ ಮಾಡುವಾಗ ತುಂಬಾ ಯಂಗ್. ಅವತ್ತು ಆ ಸಿನಿಮಾವನ್ನು ನಾನು ಮಿಸ್ ಮಾಡ್ತಾ ಇದ್ರೆ, ಇವತ್ತು ತುಂಬಾ ಫೀಲ್ ಆಗ್ತಾ ಇತ್ತು. ಮುಂದೊಂದು ದಿನ ನಮ್ಮ ಡೈರಿ ನೋಡಿದಾಗ ಇಂತಿಂಥವರ ಜೊತೆ ಮಾಡಿದ್ದೀನಿ ಅಂತ ಬರುತ್ತಲ್ಲ’ ಎನ್ನುವುದು ಸುದೀಪ್ ಮಾತು.