Advertisement

ಸಾಲಿಗ್ರಾಮ ಪ.ಪಂ.: ಮಹಿಳೆಯರಿಗಿಲ್ಲ ಶೇ.50 ಮೀಸಲಾತಿ 

02:20 AM Jun 20, 2018 | Team Udayavani |

ವಿಶೇಷ ವರದಿ – ಕೋಟ: ನಗರ ಸ್ಥಳೀಯಾಡಳಿತ ಸಂಸ್ಥೆಗಳ ಆಡಳಿತಾವಧಿ ಸೆಪ್ಟೆಂಬರ್‌ ನಲ್ಲಿ ಅಂತ್ಯಗೊಳ್ಳಲಿದೆ. ಹೀಗಾಗಿ ಮುಂದಿನ ಚುನಾವಣೆಗೆ ಆಯೋಗ ಸಿದ್ಧತೆ ನಡೆಸಿದ್ದು  ವಾರ್ಡ್‌ವಾರು ಮೀಸಲಾತಿ ಪಟ್ಟಿ ಪ್ರಕಟಿಸಿದೆ. ಆದರೆ  ಸಾಲಿಗ್ರಾಮ ಪಟ್ಟಣ ಪಂಚಾಯತ್‌ನಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಸ್ಥಾನ ಮೀಸಲಿರಿಸಿಲ್ಲ, ಹಲವು ವಾರ್ಡ್‌ಗಳಲ್ಲಿ ಮೀಸಲಾತಿ ಪುನರಾವರ್ತನೆಯಾಗಿದೆ ಎನ್ನುವ ಆರೋಪ ಕೇಳಿ ಬಂದಿದ್ದು ಆಕ್ಷೇಪಣೆ ಸಲ್ಲಿಕೆಯಾಗಿದೆ.

Advertisement

ಮಹಿಳೆಯರಿಗಿಲ್ಲ ಶೇ.50 ಮೀಸಲಾತಿ 
ಇಲ್ಲಿ 16ವಾರ್ಡ್‌ಗಳಿದ್ದು 6171 ಮಹಿಳೆಯರು ಹಾಗೂ 6698 ಪುರುಷರು ಸೇರಿ ಒಟ್ಟು 12,869 ಮತದಾರರಿದ್ದಾರೆ. ಪ್ರಕಟಿತ ಮೀಸಲಾತಿಯಲ್ಲಿ ಹಿಂದುಳಿದ ವರ್ಗ ಎ. ಮಹಿಳೆಗೆ  2 ಸ್ಥಾನ,  ಸಾಮಾನ್ಯ ಮಹಿಳೆಗೆ 4 ಸ್ಥಾನ  ಸೇರಿದಂತೆ ಒಟ್ಟು 6 ಸ್ಥಾನ ಮೀಸಲಿರಿಸಲಾಗಿದೆ. ಹೀಗಾಗಿ  ಶೇ.50ರಷ್ಟು ಮಹಿಳೆಯರಿಗೆ ಸ್ಥಾನ ಮೀಸಲಾಗಿಲ್ಲ. ಇನ್ನುಳಿದರಲ್ಲಿ ಸಾಮಾನ್ಯ ವರ್ಗಕ್ಕೆ 5 ಸ್ಥಾನ,  ಹಿಂ.ವರ್ಗ ಎ.ಗೆ 2 ಸ್ಥಾನ,  ಪರಿಶಿಷ್ಠ ಜಾತಿಗೆ 1 ಸ್ಥಾನ, ಪರಿಶಿಷ್ಠ ಪಂಗಡಕ್ಕೆ 1ಸ್ಥಾನ, ಹಿಂದುಳಿದ ವರ್ಗ ಬಿ.ಗೆ 1 ಸ್ಥಾನ ಮೀಸಲಿರಿಸಲಾಗಿದೆ. 2013ರ ಚುನಾವಣೆ 2008ರ ಮೀಸಲಾತಿಯನ್ವಯ ನಡೆದಿದ್ದು ಇದೀಗ ಕೆಲವು ವಾರ್ಡ್‌ಗಳಲ್ಲಿ ಮತ್ತೆ ಅದೇ ಮೀಸಲಾತಿ ಪುನರಾವರ್ತನೆಯಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.


ರಾಜಕೀಯ ಚಟುವಟಿಕೆ ಚುರುಕು

ಮೀಸಲಾತಿ ಪ್ರಕಟವಾಗುತಿದ್ದಂತೆ ರಾಜಕೀಯ ಚಟುವಟಿಕೆ ಚುರುಕು ಪಡೆದಿದ್ದು ಟಿಕೇಟ್‌ ಆಕಾಂಕ್ಷಿಗಳು ನಾಯಕರ ಬೆನ್ನು ಬಿದ್ದಿದ್ದಾರೆ. ಮೀಸಲಾತಿ ಕಾರಣ ಅವಕಾಶ ವಂಚಿತರಾದವರು ಮೀಸಲಾತಿ ಬದಲಾವಣೆಗೆ ಹೋರಾಟ ನಡೆಸುತ್ತಿದ್ದಾರೆ ಹಾಗೂ ಕಾರ್ಯಕರ್ತರ ಅಭಿಪ್ರಾಯವನ್ನು ಪಡೆಯುವ ಸಲುವಾಗಿ  ಮುಖಂಡರು ಸಭೆಗಳನ್ನು ನಡೆಸುತ್ತಿದ್ದಾರೆ.

ಆಕ್ಷೇಪ ಸಲ್ಲಿಕೆ  
ಕೆಲವು ವಾರ್ಡ್‌ಗಳಲ್ಲಿ ಹಿಂದಿನ ಮೀಸಲಾತಿಯೇ ಪುನರಾವರ್ತನೆಯಾಗಿದೆ. ಮಹಿಳೆಯರಿಗೆ ಶೇ.50 ಸ್ಥಾನಗಳನ್ನು ಮೀಸಲಿರಿಸಿಲ್ಲ. ಈ ಕುರಿತು ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಆಕ್ಷೆಪಣೆ ಸಲ್ಲಿಸಿದ್ದೇವೆ. ಪ್ರಸ್ತುತ ಮೀಸಲಾತಿ ಬದಲಾವಣೆಯಾಗಲಿದೆ ಹಾಗೂ ಕಾಂಗ್ರೆಸ್‌ ಪಕ್ಷ ಈ ಬಾರಿ ಖಂಡಿತ ಅಧಿಕಾರಕ್ಕೆ ಬರಲಿದೆ.
– ಶಂಕರ್‌ ಕುಂದರ್‌, ಅಧ್ಯಕ್ಷರು ಬ್ಲಾಕ್‌ ಕಾಂಗ್ರೆಸ್‌ ಕೋಟ

ಪೂರ್ವಭಾವಿ ತಯಾರಿಗೆ ಚಾಲನೆ
ಚುನಾವಣೆ ಪೂರ್ವಭಾವಿಯಾಗಿ ಈಗಾಗಲೇ ಮೂರು ಸಭೆಗಳು ನಡೆದಿದ್ದು ಸ್ಥಳೀಯ ಶಾಸಕರು, ಸಂಸದರು ಹಾಗೂ ಪಕ್ಷದ ಮುಖಂಡರು ಭಾಗವಹಿಸಿದ್ದಾರೆ. ಮೀಸಲಾತಿಯಲ್ಲಿ ಬದಲಾವಣೆಯಾಗುವ ಸಾಧ್ಯತೆ ಇರುವುದರಿಂದ ಒಂದು ವಾರ್ಡ್‌ಗೆ ನಾಲ್ಕೈದು ಮಂದಿ ಅಭ್ಯರ್ಥಿಗಳನ್ನು ಗುರುತಿಸಲಾಗುತ್ತಿದೆ. ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ದುಡಿಯುವ ಸಂಕಲ್ಪ ಮಾಡಿದ್ದೇವೆ.
– ರಾಜು ಪೂಜಾರಿ ಕಾರ್ಕಡ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರು

Advertisement
Advertisement

Udayavani is now on Telegram. Click here to join our channel and stay updated with the latest news.

Next