Advertisement

ಸಾಲಿಗ್ರಾಮ: ಇನ್ನೂ ಆಗಿಲ್ಲ ಸರ್ವೀಸ್‌ ರಸ್ತೆ

12:33 AM Jan 25, 2020 | Sriram |

ಚತುಷ್ಪಥ ಕಾಮಗಾರಿ ಆರಂಭದಲ್ಲೇ ಸಾಲಿಗ್ರಾಮದಲ್ಲಿ ಸರ್ವೀಸ್‌ ರಸ್ತೆ ನಿರ್ಮಾಣವಾಗಬೇಕಿತ್ತು. ಆದರೆ ಕಾಮಗಾರಿ ವಿಳಂಬವಾಗಿತ್ತು. ಇದರ ವಿರುದ್ಧ ಸಾಕಷ್ಟು ಹೋರಾಟಗಳು ನಡೆದು ಕುಂದಾಪುರ ಸಹಾಯಕ ಕಮಿಷನರ್‌ ಮಧ್ಯಸ್ಥಿಕೆಯಲ್ಲಿ ಜನವರಿ ಅಂತ್ಯದೊಳಗೆ ಕಾಮಗಾರಿ ಮುಗಿಸುವುದಾಗಿ ನವಯುಗ ಕಂಪೆನಿ ಭರವಸೆ ನೀಡಿತ್ತು. ಆದರೆ ಗಡುವು ಮುಗಿದರೂ ಕಾಮಗಾರಿ ಆರಂಭಗೊಂಡಿಲ್ಲ. ಹೀಗಾಗಿ ಹೋರಾಟಕ್ಕೆ ಸ್ಥಳೀಯರು ಸಜ್ಜಾಗುತ್ತಿದ್ದಾರೆ.

Advertisement

ಕೋಟ: ಹೆದ್ದಾರಿಯ ಪಕ್ಕದಲ್ಲಿ ಸರ್ವೀಸ್‌ ರಸ್ತೆಯಾಗುತ್ತದೆ ಎಂದು ಕಾದಿದ್ದ ಸಾಲಿಗ್ರಾಮ ಜನತೆಯ ಬೇಡಿಕೆ ಇನ್ನೂ ಈಡೇರಿಲ್ಲ. ಕಾಮಗಾರಿ ನಡೆದು 10 ವರ್ಷ ಕಳೆದರೂ ಬೇಡಿಕೆ ಹಾಗೇ ಉಳಿದಿದ್ದು, ಜನರ ಆಕ್ರೋಶಕ್ಕೆ ಗುರಿಯಾಗಿದೆ.

ಚತುಷ್ಪಥ ಕಾಮಗಾರಿಯ ಪ್ರಥಮ ಹಂತದ ಯೋಜನೆ ಪಟ್ಟಿಯಲ್ಲಿ ಸರ್ವೀಸ್‌ ರಸ್ತೆಯ ಪ್ರಸ್ತಾವನೆ ಇತ್ತು. ಈ ಬಗ್ಗೆ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ಹಲವು ಹೋರಾಟಗಳೂ ನಡೆದಿದ್ದವು. ಕೆಲ ತಿಂಗಳ ಹಿಂದೆ ಪ್ರತಿಭಟನೆ ನಡೆದಿದ್ದಾಗ 2020 ಜನವರಿ ಒಳಗೆ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ಕುಂದಾಪುರ ಎ.ಸಿ.ಯವರ ಸಮಕ್ಷಮದಲ್ಲಿ ಕಂಪೆನಿ ಭರವಸೆ ನೀಡಿತ್ತು. ಆದರೆ ಕಾಮಗಾರಿ ಆರಂಭವಾಗಲೇ ಇಲ್ಲ.

ಸಾರ್ವಜನಿಕರಿಗೆ ಸಮಸ್ಯೆ
ಕಾರ್ಕಡ-ಕಾವಡಿ ರಸ್ತೆಯಿಂದ ಮೀನುಮಾರುಕಟ್ಟೆ ತನಕ ಎರಡೂ ಕಡೆಗಳಲ್ಲಿ ಸರ್ವೀಸ್‌ ರಸ್ತೆ ನಿರ್ಮಾಣವಾಗಬೇಕಿತ್ತು. ರಸ್ತೆ ನಿರ್ಮಾಣವಾಗದ್ದರಿಂದ ಕಾವಡಿ ರಸ್ತೆ ಮೂಲಕ ಆಗಮಿಸುವವರು ಸಾಲಿಗ್ರಾಮ ತಲುಪಬೇಕಾದರೆ ಸುಮಾರು 4 ಕಿ.ಮೀ. ಸುತ್ತುಬಳಸಿ ಗುಂಡ್ಮಿ ಮೂಲಕ ಸಂಚರಿಸಬೇಕಾಗಿದೆ. ಅಥವಾ ಸಂಚಾರ ನಿಯಮ ಉಲ್ಲಂ ಸಿ 500 ಮೀ. ದೂರದಲ್ಲೇ ಮುಖ್ಯಪೇಟೆ ತಲುಪಬಹುದು. ಹೀಗಾಗಿ ಇಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚಾರ ಹೆಚ್ಚಿದ್ದು ಸಾಕಷ್ಟು ಅಪಘಾತ, ಜೀವಹಾನಿ ಸಂಭವಿಸಿದೆ.

ನವಯುಗ ನಾಟ್‌ ರೀಚೆಬಲ್‌
ಕಾಮಗಾರಿ ಯಾವಾಗ ಆರಂಭಿಸುತ್ತೀರಿ ಎಂಬ ಪ್ರಶ್ನೆಗೆ ಕಂಪೆನಿಯ ಉನ್ನತ ಅಧಿಕಾರಿಗಳು ಸಂಪರ್ಕಕ್ಕೆ ಸಿಗುವುದಿಲ್ಲ. ಕಿರಿಯ ಅಧಿಕಾರಿಗಳು ಈ ಬಗ್ಗೆ ತಿಳಿದಿಲ್ಲ ಎನ್ನುತ್ತಾರೆ. ಹೀಗಾಗಿ ಸಮಸ್ಯೆ ಹೇಳಲಾರದೆ, ಯಾರಿಗೆ ಮನವಿ ಸಲ್ಲಿಸಬೇಕು ಎಂದು ತಿಳಿಯದ ಸ್ಥಿತಿಯಲ್ಲಿ ಸ್ಥಳೀಯರಿದ್ದಾರೆ. ಜನಪ್ರತಿನಿಧಿಗಳು ಕೂಡ ಸಮಸ್ಯೆಯನ್ನು ಗಂಭಿರವಾಗಿ ಪರಿಗಣಿಸುತ್ತಿಲ್ಲ ಎನ್ನುವ ಆರೋಪವಿದೆ.

Advertisement

ಫ್ಲೈಓವರ್‌ ಮುಗಿಯದೆ ಕಾಮಗಾರಿ ಆಗದು
ಕಾರ್ಮಿಕರು, ಸಂಪನ್ಮೂಲದ ಕೊರತೆ ಇದೆ. ಹೀಗಾಗಿ ಕುಂದಾಪುರದ ಫ್ಲೈಓವರ್‌ ಕಾಮಗಾರಿ ಮುಗಿದ ಮೇಲೆ ಬಾಕಿ ಉಳಿದ ಕೆಲಸಗಳನ್ನು ಹಂತ- ಹಂತವಾಗಿ ಪೂರ್ಣಗೊಳಿಸ ಲಾಗುವುದು ಎಂದು ನವಯುಗ ಅಧಿಕಾರಿಗಳು ವರ್ಷದ ಹಿಂದೆ ತಿಳಿಸಿದ್ದರು. ಆದರೆ ಫ್ಲೈಓವರ್‌ ಕಾಮಗಾರಿ ಇದುವರೆಗೆ ಪೂರ್ಣಗೊಂಡಿಲ್ಲ. ಟೋಲ್‌ ಆರಂಭಿಸುವಾಗ ಎಲ್ಲ ಕಾಮ ಗಾರಿಗಳು ಬಹುತೇಕ ಪೂರ್ಣಗೊಂಡಿವೆೆ ಎಂದು ಕಂಪನಿ ಮಾಹಿತಿ ನೀಡಿತ್ತು. ಆದರೆ ಯೋಜನೆಯಂತೆ ಇನ್ನೂ ಹಲ ವಾರು ಕಾಮಗಾರಿಗಳು ಬಾಕಿ ಇವೆ. ಆದ್ದರಿಂದ ಟೋಲ್‌ ತಡೆದು ಹೋರಾಟ ನಡೆಸಿದಲ್ಲಿ ತಪ್ಪಿಲ್ಲ ಎನ್ನುವುದು ಹೆದ್ದಾರಿ ಜಾಗೃತಿ ಸಮಿತಿಯ ಅಭಿಪ್ರಾಯವಾಗಿದೆ.

ಸರ್ವಿಸ್‌ ರಸ್ತೆಯ ಬೇಡಿಕೆ ನಿನ್ನೆಮೊನ್ನೆಯದ್ದಲ್ಲ. ಹತ್ತು ವರ್ಷಗಳ ಆಗ್ರಹ. ಆದರೆ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಅದರ ಜತೆಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಪಘಾತಗಳು ಜನರ ಆಕ್ರೋಶವನ್ನು ಇನ್ನಷ್ಟು ಹೆಚ್ಚಿಸಿವೆೆ. ಅಧಿಕಾರಿಗಳು ಈ ಬಗ್ಗೆ ತುರ್ತು ಕ್ರಮಕೈಗೊಳ್ಳಬೇಕಾಗಿದೆ.

ಹೋರಾಟಕ್ಕೆ ಸಿದ್ಧತೆ
ಕಂಪೆನಿ ಮಾತಿಗೆ ತಪ್ಪಿರುವುದರಿಂದ ಸ್ಥಳೀಯರು ಅಸಮಾಧಾನ ಗೊಂಡಿದ್ದಾರೆ. ಕಾಮಗಾರಿ ಬಹುತೇಕ ಪೂರ್ಣಗೊಳ್ಳದೆ ಟೋಲ್‌ ಸ್ವೀಕರಿಸುವಂತಿಲ್ಲ ಎನ್ನುವ ಕಾನೂನು ಇರುವುದರಿಂದ ಮುಂದೆ ಸರ್ವೀಸ್‌ ರಸ್ತೆ ಆಗುವ ವರೆಗೆ ಟೋಲ್‌ ಸಂಗ್ರಹಿಸಲು ಬಿಡುವುದಿಲ್ಲ ಎಂದು ಪ್ರತಿಭಟಿಸುವ ಸಿದ್ಧತೆ ನಡೆಸುತ್ತಿದ್ದಾರೆ.

ಮೂಲಸೌಕರ್ಯ
ಅಪಘಾತ ಹೆಚ್ಚಳ ತಡೆಯಲು ಸರ್ವೀಸ್‌ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು.

ಕಾಮಗಾರಿ ಆರಂಭಿಸುವ ಲಕ್ಷಣವಿಲ್ಲ
ಸರ್ವೀಸ್‌ ರಸ್ತೆಗೆ ಸಂಬಂಧಿಸಿದಂತೆ ಕಳೆದ ಏಳೆಂಟು ತಿಂಗಳ ಹಿಂದೆ ಹೋರಾಟ ನಡೆಸಿದಾಗ ಜನವರಿ ಆರಂಭದೊಳಗೆ ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇದೀಗ ಗಡುವು ಮುಗಿದರೂ ಕಾಮಗಾರಿ ಆರಂಭಿಸುವ ಲಕ್ಷಣ ಕಂಡು ಬರುತ್ತಿಲ್ಲ. ನವಯುಗದ ಅಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ ಹೋರಾಟ ನಡೆಸುವ ಚಿಂತನೆಯಲ್ಲಿದ್ದೇವೆ..
– ರತ್ನಾ ನಾಗರಾಜ್‌,
ಪ.ಪಂ. ಪೇಟೆ ವಾರ್ಡ್‌ ಸದಸ್ಯೆ

ಟೋಲ್‌ ತಡೆದು ಪ್ರತಿಭಟನೆ
ಕಾಮಗಾರಿ ಆಗದ್ದರಿಂದ ಮುಂದೆ ಟೋಲ್‌ ಬಂದ್‌ ಮಾಡಿ ಪ್ರತಿಭಟಿಸುವ ಬಗ್ಗೆ ಸಿದ್ಧತೆ ನಡೆಸಿದ್ದೇವೆ. ಈ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ಜಿಲ್ಲಾಧಿಕಾರಿಗಳಿಗೆ ಪತ್ರ ರವಾನಿಸಿದ್ದೇವೆ.
– ಶ್ಯಾಮ್‌ಸುಂದರ ನಾೖರಿ,
ಅಧ್ಯಕ್ಷರು ಹೆದ್ದಾರಿ ಜಾಗೃತಿ ಸಮಿತಿ

ಮಾಹಿತಿ ಇಲ್ಲ
ಸರ್ವೀಸ್‌ ರಸ್ತೆ ಯಾವಾಗ ಆರಂಭವಾಗುತ್ತದೆ ಎನ್ನುವ ಕುರಿತು ಯಾವುದೇ ಮಾಹಿತಿ ಇಲ್ಲ. ಆರ್ಥಿಕ ಅಡಚಣೆಯಿಂದ ಕೆಲಸಗಳು ಸ್ಥಗಿತಗೊಂಡಿದೆ ಎನ್ನುವ ಮಾಹಿತಿ ಇದೆ. ಮೇಲಧಿಕಾರಿಗಳಿಂದ ಆದೇಶ ಬಂದ ಕೂಡಲೇ ಕೆಲಸ ಆರಂಭಿಸುತ್ತೇವೆ. .
– ನವಯುಗ ಎಂಜಿನಿಯರ್‌

-ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next