Advertisement

ಸಾಲಿಗ್ರಾಮ: ಯಕ್ಷಗಾನ ಕಲಾವಿದರ ಬೃಹತ್‌ ಸಮಾವೇಶ

10:32 PM Nov 12, 2019 | mahesh |

ಕೊಟ: ಯಕ್ಷಗಾನ ಕಲಾವಿದರ ವೃತ್ತಿ ಭದ್ರತೆಗಾಗಿ ಸಂಘಟಿತರಾಗಿ ಸರಕಾರದ ಮಟ್ಟದಲ್ಲಿ ಹೋರಾಟ ನಡೆಸುವ ಸಲುವಾಗಿ ಯಕ್ಷಗಾನ ಕಲಾ ವಿದರ ಹಿತಾಸಕ್ತಿ ಒಕ್ಕೂಟದ ಆಶ್ರಯದಲ್ಲಿ 12ರಂದು ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಸಭಾಂ ಗಣದಲ್ಲಿ ತೆಂಕು-ಬಡಗುತಿಟ್ಟಿನ 300ಕ್ಕೂ ಹೆಚ್ಚು ಕಲಾವಿದರನ್ನೊಳಗೊಂಡು ಸಮಾವೇಶ ನಡೆಯಿತು.

Advertisement

ಈ ಸಂದರ್ಭ ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗ್ಡೆ, ಪಟ್ಲ ಫೌಂಡೇಶನ್‌ ಸ್ಥಾಪಕ ಪಟ್ಲ ಸತೀಶ್‌ ಶೆಟ್ಟಿ ಉಪಸ್ಥಿತಿಯಲ್ಲಿ ಕಲಾವಿದರಿಗೆ ನೀಡಬಹುದಾದ ವಿವಿಧ ಸೌಲಭ್ಯಗಳ ಕುರಿತು ಚರ್ಚೆ ಹಾಗೂ ಕಲೆಯ ಕುರಿತು ವಿಚಾರ ವಿನಿಮಯ ನಡೆಯಿತು.

ಕಲಾವಿದರ ಅಭ್ಯುದಯಕ್ಕಾಗಿ ಸಂಘಟನೆ
ಕಾರ್ಯಕ್ರಮದ ಸಂಘಟಕ, ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರ ಅಧ್ಯಕ್ಷ ಐರೋಡಿ ರಾಜಶೇಖರ ಹೆಬ್ಟಾರ್‌ ಮಾತನಾಡಿ, ಕಲಾವಿದರು ಸಂಘಟನೆಗೊಳ್ಳಬೇಕು ಎನ್ನುವುದು ಕಾರ್ಯಕ್ರಮದ ಉದ್ದೇಶ. ಕಲಾವಿದ ರನ್ನು ಕಾರ್ಮಿಕರಾಗಿ ಪರಿಗಣಿಸುವುದು, ಬದುಕಿನ ಭದ್ರತೆಗೆ ಅಗತ್ಯವಿರುವ ವಿಮೆ, ಭವಿಷ್ಯನಿಧಿ, ಪಿಂಚಣಿ ವ್ಯವಸ್ಥೆ, ಮಾಸಾಶನದ ವಯೋಮಿತಿ ಸಡಿಲಿಕೆ ಮುಂತಾದ ಬೇಡಿಕೆಗಳನ್ನು ಸರಕಾರದ ಮುಂದಿಟ್ಟು ಹೋರಾಟ ನಡೆಸಲಾಗುವುದು ಎಂದರು.

ಕಲಾವಿದರ ಕಷ್ಟ ಅರಿಯಲಿ
ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಕೆ.ಎಂ. ಶೇಖರ ಮಾತನಾಡಿ, ಕಲಾವಿದರು ಅನೇಕ ಸಮಸ್ಯೆ, ನೋವುಗಳ ನಡುವೆ ಜೀವನ ನಡೆಸುತ್ತಾರೆ. ಆದ್ದರಿಂದ ಸರಕಾರ ಕಲಾವಿದರ ಕಷ್ಟ ಅರಿತು ಅಗತ್ಯ ಸಹಕಾರ ನೀಡಬೇಕು ಎಂದರು.

ಕಲಾವಿದರ ಜೀವನಕ್ಕೆ ಭದ್ರತೆ ನೀಡಿ
ಯಕ್ಷಗಾನ ಕಲಾವಿದರ ಜೀವನಕ್ಕೆ ಭದ್ರತೆ ಇಲ್ಲ. ನಿವೃತ್ತಿ, ಅನಾರೋಗ್ಯ ಮುಂತಾದ ಸಂದರ್ಭಗಳಲ್ಲಿ ನಮ್ಮ ಕಷ್ಟವನ್ನು ಕೇಳುವವರಿಲ್ಲ. ಆದ್ದರಿಂದ ನಮ್ಮ ಜೀವನಕ್ಕೆ ಭದ್ರತೆ ನೀಡಿ ಎಂದು ಯಕ್ಷಗಾನ ವಿದ್ವಾಂಸ ತಾರಾನಾಥ ವರ್ಕಾಡಿ ತಿಳಿಸಿದರು.

Advertisement

ಕಲಾವಿದರ ಕಷ್ಟಕ್ಕೆ ನಾನಿದ್ದೇನೆ
ಪಟ್ಲ ಫೌಂಡೇಶನ್‌ ಅಧ್ಯಕ್ಷ ಪಟ್ಲ ಸತೀಶ್‌ ಶೆಟ್ಟಿ ಮಾತನಾಡಿ, ಕಲಾವಿದರ ಕಷ್ಟವನ್ನು ಯಾರೂ ಕೇಳುವವರಿಲ್ಲ ಎನ್ನುವುದನ್ನು ಮನಗಂಡು ಪಟ್ಲ ಫೌಂಡೇಶನ್‌ ಸ್ಥಾಪನೆ ಮಾಡಿದ್ದೇನೆ. ಈಗಾಗಲೇ ನೂರಾರು ಮಂದಿ ಕಲಾವಿದರ ಕಷ್ಟಕ್ಕೆ ಸ್ಪಂದಿಸುವ ಕಾರ್ಯವನ್ನು ಟ್ರಸ್ಟ್‌ ಮಾಡಿದೆ ಮತ್ತು ಕಲಾವಿದರ ಕಷ್ಟಕ್ಕೆ ಯಾವಾಗಲೂ ನಾವು ಜತೆಯಾಗುತ್ತೇವೆ ಎಂದರು.

ಕಲಾವಿದರಲ್ಲಿ ಸಾಮೂಹಿಕ ಚಿಂತನೆ ಬರಲಿ
ಹಿರಿಯ ಕಲಾವಿದ ಕೋಡಿ ವಿಶ್ವನಾಥ ಗಾಣಿಗ ಮಾತನಾಡಿ, ಹೆಚ್ಚಿನ ಕಲಾವಿದರು ಸಂಘಟನೆಯಿಂದ ನಮಗೇನು ಲಾಭ ಎನ್ನುವ ಕುರಿತು ಆಲೋಚಿಸುತ್ತಾರೆ. ಆದರೆ ಈ ರೀತಿ ಯೋಚಿಸದೆ ಕಲೆ, ಕಲಾವಿದರ ಶ್ರೇಯೋಭಿವೃದ್ಧಿಯ ನಿಟ್ಟಿನಲ್ಲಿ ನಾವೆಲ್ಲ ಒಟ್ಟಾಗಬೇಕು ಎಂದರು.

ಕುಂದಾಪುರ ಮೈದಾನದಲ್ಲಿ ಯಕ್ಷಪ್ರದರ್ಶನಕ್ಕೆ ಅವಕಾಶ ಸಿಗಲಿ
ಕುಂದಾಪುರ ನೆಹರೂ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಕೆಲವು ತಿಂಗಳು ನಿರ್ಭಂದ ಹೇರಳಾಗುತ್ತದೆ ಹಾಗೂ ಇದರಿಂದ ಕಲೆ,ಕಲಾವಿದರು, ಸಂಘಟಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಈ ನಿರ್ಭಂದ ತೆರವುಗೊಳಿಸಿ ಕ್ರೀಡಾಂಗಣ ಯಕ್ಷಗಾನ ಕಲೆಗೆ ಮುಕ್ತವಾಗಿಸಬೇಕು ಎಂದು ಕಲಾವಿದ ಮಂಕಿ ಈಶ್ವರ ನಾಯ್ಕ ಅಭಿಪ್ರಾಯಪಟ್ಟರು.

ಮುಜರಾಯಿ ಇಲಾಖೆ ಹತ್ತಿರವಾಗಲಿ
ಹಿರಿಯ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಮಾತನಾಡಿ, ಯಕ್ಷಗಾನ ಕಲಾವಿದರು ಹೆಚ್ಚಾಗಿ ಮುಜರಾಯಿ ಇಲಾಖೆ ಅಧೀನದ ಯಕ್ಷಗಾನ ಮೇಳಗಳಲ್ಲಿ ಸೇವೆ ಸಲ್ಲಿಸ್ತುತ್ತಾರೆ. ಆದ್ದರಿಂದ ಈ ಇಲಾಖೆ ಕಲಾವಿದರಿಗೆ ಅಗತ್ಯ ಸೌಲಭ್ಯವನ್ನು ನೀಡಬೇಕು. ಇಂದಿನ ಸಮಾವೇಶ ಕಲಾವಿದರ ಒಗ್ಗೂಡುವಿಕೆಯ ಸಂಕೇತವಾಗಿದೆ ಎಂದರು.

ಕಲಾವಿದರ ಸಹಕಾರ ಅಗತ್ಯ
ಕಲಾವಿದರಿಗೆ ಸರಕಾರದಿಂದ ಸಹಕಾರ ಅಗತ್ಯ ಮತ್ತು ಸಚಿವ ಕೋಟ ಶ್ರೀನಿವಾಸ ಪೂಜಾರಿ ಯವರು ಕಲಾವಿದರ ನೋವನ್ನು ಅರಿತಿದ್ದಾರೆ ಅವರು ಸರಕಾರದ ಮಟ್ಟದಲ್ಲಿ ನಿಮ್ಮ ಸಮಸ್ಯೆಗೆ ಧ್ವನಿಯಾಗುತ್ತಾರೆ ಎಂದು ಕೋಟ ಅಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ.ಕುಂದರ್‌ ಹಾಗೂ ಸಾಲಿಗ್ರಾಮ ಗುರುನರಸಿಂಹ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಅನಂತಪದ್ಮನಾಭ ಐತಾಳ ಅಭಿಪ್ರಾಯಪಟ್ಟರು.

ಕಲಾವಿದ ಎಂ.ಕೆ. ರಮೇಶ ಆಚಾರ್ಯ, ಐರೋಡಿ ಗೋವಿಂದಪ್ಪ, ಕ್ಯಾದಗಿ ಮಹಾಬಲೇಶ್ವರ ಭಟ್‌, ಪ್ರಸಂಗಕರ್ತ ದೇವದಾಸ್‌ ಈಶ್ವರಮಂಗಳ ಮುಂತಾದವರು ತಮ್ಮ ಅಭಿಪ್ರಾಯ ತಿಳಿಸಿದರು. ವೈದ್ಯರಾದ ಡಾ| ಹೇಮಂತ್‌ ಇ.ಎಸ್‌.ಐ. ಕುರಿತು ಮಾಹಿತಿ ನೀಡಿದರು. ಯಕ್ಷಗಾನದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಸಮಾವೇಶ ಎನ್ನುವ ಶ್ಲಾಘನೆ ವ್ಯಕ್ತವಾಯಿತು.

ಸಚಿವರಿಂದ ಪೂರಕ ಪ್ರತಿಕ್ರಿಯೆ
ಈ ಸಂದರ್ಭ ಕಲಾವಿದ ಕಾರ್ಯಕ್ರಮದ ಸಂಘಟಕರಾದ ಕೆ.ಪಿ. ಶೇಖರ್‌, ರಾಘವೇಂದ್ರ ಮಯ್ಯ, ಸದಾಶಿವ ಅಮೀನ್‌ ಮತ್ತು ಒಕ್ಕೂಟದ ಪ್ರಮುಖರು ಜತೆಯಾಗಿ, ಕಲಾವಿದರನ್ನು ಕಾರ್ಮಿಕರನ್ನಾಗಿ ಪರಿಗಣಿಸುವ ಹಾಗೂ ಭವಿಷ್ಯನಿಧಿ, ಇ.ಎಸ್‌.ಐ., ಜೀವವಿಮೆ, ಪಿಂಚಣಿ, ಸರಕಾರದಿಂದ ಪ್ರಶಸ್ತಿ ನೀಡಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಸಚಿವರು, ಮುಜರಾಯಿ ಇಲಾಖೆ ಯಿಂದ ಕಲಾವಿದರಿಗೆ ಎಲ್ಲ ಸೌಲಭ್ಯ ಗಳನ್ನು ನೀಡುವ ಭರವಸೆ ನೀಡಿದರು.

ಕಲಾವಿದರು ಕೋಲ ಮಾಡುವುದು ನಿಲ್ಲಿಸಿ
ಕಲಾವಿದ ಭಾಸ್ಕರ ತುಂಬ್ರಿ ಮಾತನಾಡಿ, ಕಲಾವಿದರಿಗೆ ವೃತ್ತಿಯ ಕುರಿತು ಬದ್ಧತೆ ಅಗತ್ಯ. ಇಂದು ಮಿತಿಮೀರಿದ ಪ್ರಸಂಗಕರ್ತರ ಹಾವಳಿಯಿಂದ ಯಕ್ಷಗಾನ ಪ್ರದರ್ಶನ ದೊಂದಿಯಾಟ, ಭೂತದ ಕೋಲಮಯವಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬ ಕಲಾವಿದ ಯಕ್ಷಗಾನದಲ್ಲಿ ಭೂತದ ಕೋಲ, ದೊಂದಿಯಾಟಕ್ಕೆ ಪ್ರೋತ್ಸಾಹ ನೀಡುವುದಿಲ್ಲ. ಅಂತಹ ವೇಷ ಮಾಡುವುದಿಲ್ಲ ಎನ್ನುವ ಸಂಕಲ್ಪ ಮಾಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next