ಕೋಟ: ಸಾಲಿಗ್ರಾಮದಲ್ಲಿ ಕುಂದಾಪುರ- ಉಡುಪಿ ರಸ್ತೆಯ ಎಡ ಭಾಗದಲ್ಲಿ ಕಾರ್ಕಡ ತಿರುವಿನ ತನಕ ಹಾಗೂ ಬಲ ಭಾಗದಲ್ಲಿ ಪಾರಂಪಳ್ಳಿ ರಸ್ತೆ ತನಕ ಸರ್ವಿಸ್ ರಸ್ತೆ ಇದ್ದು ಇಲ್ಲಿಂದ ಮುಂದೆ ಗುಂಡ್ಮಿ ತನಕ 900 ಮೀಟರ್ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಯೋಜನೆ ಸಿದ್ಧಗೊಂಡಿದೆ. ಇದೇ ರೀತಿ ಜಿಲ್ಲೆಯ ಹಲವು ಕಡೆಗಳಲ್ಲಿ ಬ್ಲಾಕ್ ಸ್ಪಾಟ್ ಕಾಮಗಾರಿಯನ್ನು ಸರಿಪಡಿಸುವ ಕೆಲಸ ನಡೆಯಲಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಸಂಬಂಧಪಟ್ಟ ಜಾಗದ ಮಾಲಕರಿಗೆ ನೋಟಿಸ್ ನೀಡಲಾಗಿದ್ದು ಸಾಲಿಗ್ರಾಮ ಚತುಷ್ಪಥ ರಸ್ತೆಯ ಅನಧಿಕೃತ ಒತ್ತುವರಿ ತೆರವಿಗೆ ಅಂತಿಮ ಸಿದ್ಧತೆ ನಡೆಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಈಗಾಗಲೇ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಸರ್ವೇ ನಡೆಸಿ, ಕೋಟೇಶ್ವರ ಕುಂಭಾಶಿ, ತೆಕ್ಕಟ್ಟೆ ಸಾಲಿಗ್ರಾಮ ಗ್ರಾಮಗಳಲ್ಲಿ ಒತ್ತುವರಿ ಭೂಮಿಯನ್ನು ಗುರುತಿಸಲಾಗಿದೆ ಹಾಗೂ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡ ಸ್ಥಳಗಳನ್ನು ತೆರವುಗೊಳಿಸಲು ಸಂಬಂಧಪಟ್ಟ ಜಾಗದ ಮಾಲಕರಿಗೆ ನೋಟಿಸ್ ನೀಡಲಾಗಿದ್ದು, ಸೆ.23ರಿಂದ ತೆರವು ಕಾರ್ಯಾಚರಣೆ ಆರಂಭಗೊಂಡಿದೆ.
ಕುಂದಾಪುರ- ಸುರತ್ಕಲ್ ರಾ.ಹೆ.66 ಚತುಷ್ಪಥ ರಸ್ತೆಯಲ್ಲಿ ಕೋಟೇಶ್ವರ ಕುಂಭಾಶಿ, ತೆಕ್ಕಟ್ಟೆಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣದ ನಿಟ್ಟಿನಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ಸ್ಥಳಗಳ ತೆರವು ಕಾರ್ಯ ಆರಂಭಗೊಂಡಿದೆ. ಪ್ರಥಮ ಹಂತದಲ್ಲಿ ತೆಕ್ಕಟ್ಟೆಯಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ.
ತೆಕ್ಕಟ್ಟೆಯಲ್ಲಿ ತೆರವು ಕಾರ್ಯಾಚರಣೆಗೆ ತಯಾರಿ ನಡೆದಿದ್ದು, ಹಂತ-ಹಂತವಾಗಿ ಎಲ್ಲ ಕಡೆ ಕಾರ್ಯಾಚರಣೆ ನಡೆಯಲಿದ್ದು, ಜಿಲ್ಲಾ ಪೊಲೀಸ್, ಕುಂದಾಪುರ ಸಹಾಯಕ ಆಯುಕ್ತರಿಗೆ ಕಾರ್ಯಾಚರಣೆಯ ಸಂದರ್ಭ ರಕ್ಷಣೆ ಒದಗಿಸುವಂತೆ ಹೆದ್ದಾರಿ ಪ್ರಾಧಿಕಾರ ಮನವಿ ಮಾಡಿದೆ.
ಹಂತ-ಹಂತವಾಗಿ ತೆರವು
ತೆಕ್ಕಟ್ಟೆಯಿಂದ ಕಾಮಗಾರಿ ಆರಂಭಗೊಳ್ಳಲಿದೆ. ಅನಂತರ ಸಾಲಿಗ್ರಾಮ ಮೊದಲಾದ ಕಡೆ ತೆರವು ನಡೆಯಲಿದೆ. ಜಿಲ್ಲಾ ಪೊಲೀಸ್, ಕುಂದಾಪುರ ಸಹಾಯಕ ಆಯುಕ್ತರಿಗೆ ಮಾಹಿತಿ ಮಾಡಲಾಗಿದೆ. -ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿ