Advertisement

ಸಾಲಿಗ್ರಾಮ ಕಾರಂತ ಬೀದಿ ಟ್ರಾಫಿಕ್‌ ಸಮಸ್ಯೆ

06:45 AM May 17, 2018 | Team Udayavani |

ಕೋಟ:  ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ  ಪ್ರಮುಖ ವಾಣಿಜ್ಯ ಕೇಂದ್ರ ಕಾರಂತ ಬೀದಿಯಲ್ಲಿ ಟ್ರಾಫಿಕ್‌ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶವಿಲ್ಲದಿರುವುದರಿಂದ ಸಾರ್ವಜನಿಕರಿಗೆ ನಿತ್ಯ ಕಿರಿಕಿರಿಯಾಗಿದೆ.  

Advertisement

ಪಾರ್ಕಿಂಗ್‌ಗೆ ಸ್ಥಳವಿಲ್ಲ
ಮೀನು ಮಾರುಕಟ್ಟೆಯಿಂದ ಪ.ಪಂ. ಕಚೇರಿ ತನಕದ ರಸ್ತೆಗೆ ಕಾರಂತ ಬೀದಿ ಎಂದು ಹೆಸರು. ಇಲ್ಲಿ 4 ರಾಷ್ಟ್ರೀಕೃತ ಬ್ಯಾಂಕ್‌ ಶಾಖೆ, 7 ಸಹಕಾರಿ ಸಂಘದ ಶಾಖೆ, 4 ಕ್ಲಿನಿಕ್‌, 8 ಮೆಡಿಕಲ್‌ ಶಾಪ್‌, 2 ಲ್ಯಾಬ್‌,  1 ವೈನ್‌ಶಾಪ್‌ ಹಾಗೂ 65ಕ್ಕೂ ಹೆಚ್ಚು  ವಾಣಿಜ್ಯ ಕಟ್ಟಡಗಳು, ಹಲವಾರು ಬೀದಿ ವ್ಯಾಪಾರಿಗಳು, ಹೊಟೇಲ್‌, ಜವಳಿ ಮಳಿಗೆ, ಜನರಲ್‌ ಸ್ಟೋರ್‌, ತರಕಾರಿ ಅಂಗಡಿ, ಮೀನು ಮಾರುಕಟ್ಟೆ, ಆಟೋ ನಿಲ್ದಾಣ ಮುಂತಾದವುಗಳಿವೆ. ಪ್ರತಿ ನಿತ್ಯ ಇಲ್ಲಿಗೆ ಸಾವಿರಾರು ಮಂದಿ  ವ್ಯವಹಾರಕ್ಕಾಗಿ ಆಗಮಿಸುತ್ತಾರೆ. ಹೆಚ್ಚಿನ ಕಟ್ಟಡಗಳು ರಸ್ತೆಗೆ ತಾಗಿಕೊಂಡೇ ನಿರ್ಮಾಣಗೊಂಡಿರುವುದರಿಂದ  ಪಾರ್ಕಿಂಗ್‌ಗೆ ಸ್ಥಳವಿಲ್ಲ. ಹೀಗಾಗಿ ರಸ್ತೆ ಮೇಲೆ ವಾಹನ ಪಾರ್ಕ್‌ ಮಾಡುವುದು ಅನಿವಾರ್ಯ ಎನ್ನುವಂತಾಗಿದೆ.

ಶನಿವಾರ ಇಲ್ಲಿನ ಸಂತೆ ನಡೆಯುತ್ತದೆ ಹಾಗೂ ಆಂಜನೇಯ ದೇವಸ್ಥಾನಕ್ಕೆ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಾರೆ. ಅಂದು ಟ್ರಾಫಿಕ್‌ ಸಮಸ್ಯೆ ವಿಪರೀತವಾಗಿರುತ್ತದೆ. ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತದೆ. ಪಾದಚಾರಿಗಳು, ವಾಹನ ಸವಾರರಿಗೆ ಸಂಚರಿಸಲು ಅಸಾಧ್ಯವಾದಂತಹ ಸ್ಥಿತಿ ನಿರ್ಮಾಣವಾಗುತ್ತದೆ.
 
ವಾಹನ ನಿಲುಗಡೆ ಮಾರ್ಕ್‌ ಇತ್ತು!
ಪಾರ್ಕಿಂಗ್‌ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ  ಹಿಂದೊಮ್ಮೆ ಕೋಟ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದರು. ಆಗ  ಪ.ಪಂ. ವತಿಯಿಂದ  ವಾಹನ ನಿಲುಗಡೆ ಮಾರ್ಕಿಂಗ್‌ ಮಾಡಲಾಗಿತ್ತು. 

ಎಲ್ಲೆಂದರಲ್ಲಿ ಪಾರ್ಕ್‌ ಮಾಡುವವರಿಗೆ ದಂಡ ವಿಧಿಸಲಾಗಿತ್ತು. ಆದರೆ ಕ್ರಮೇಣ ಇದು  ಮಾಯವಾಗಿದ್ದು, ಸಮಸ್ಯೆ ಉಲ್ಬಣಕ್ಕೆ  ಕಾರಣವಾಗಿದೆ. 

ಅನುಷ್ಠಾನಕ್ಕೆ ಬಾರದ ಒತ್ತುವರಿ ತೆರವು ಕಾರಂತ ಬೀದಿಯಲ್ಲಿ ಹಲವು ಎಕರೆ ಸರಕಾರಿ ಜಾಗ ಅತಿಕ್ರಮಣವಾಗಿದ್ದು, ಇದನ್ನು ತೆರವುಗೊಳಿಸಿದರೆ ಪಾರ್ಕಿಂಗ್‌ ಸಮಸ್ಯೆ ದೂರವಾಗಲಿದೆ ಎನ್ನುವ ಅಭಿಪ್ರಾಯ ಹತ್ತಾರು ವರ್ಷದಿಂದ ವ್ಯಕ್ತವಾಗುತ್ತಿದೆ. ಒತ್ತುವರಿ  ತೆರವಿಗೆ ಮನವಿ ಸಲ್ಲಿಸಿದ್ದೇವೆ ಎನ್ನುವ ಮಾತು ಅಧಿಕಾರಿಗಳಿಂದ ಕೇಳಿಬರುತ್ತಿದೆ. ಆದರೆ ಈ ಕುರಿತು ಸಮರ್ಪಕ ಕ್ರಮ ಇದುವರೆಗೆ ಆಗಿಲ್ಲ.

Advertisement

ಸಮಸ್ಯೆಗೇನು ಪರಿಹಾರ?  
ಮೀನು ಮಾರುಕಟ್ಟೆಯಿಂದ, ಪ.ಪಂ. ತನಕ ಯಾವುದಾದರೂ ಒಂದು ಕಡೆಯಲ್ಲಿ  ವಾಹನ ನಿಲುಗಡೆಗೆ ಸೂಕ್ತ ಸ್ಥಳ ನಿಗದಿಪಡಿಸುವುದು. ಪೊಲೀಸ್‌ ಸಿಬಂದಿಯನ್ನು ನಿಯೋಜಿಸಿ ಎಲ್ಲೆಂದರಲ್ಲಿ ಪಾರ್ಕ್‌ ಮಾಡುವ ವಾಹನಗಳ ವಿರುದ್ಧ ಕ್ರಮ,  ಶನಿವಾರದಂದು ಘನವಾಹನಗಳ ಪ್ರವೇಶಕ್ಕೆ ನಿಷೇಧ, ಒತ್ತುವರಿಗಳನ್ನು  ತೆರವುಗೊಳಿಸಿ ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸುವುದು ಸಮಸ್ಯೆಗೆ ಪರಿಹಾರ ಎನ್ನುವ ಅಭಿಪ್ರಾಯವಿದೆ.

ಮನವಿ ಮಾಡಲಾಗಿದೆ
ಟ್ರಾಫಿಕ್‌ ಸಮಸ್ಯೆ ನಿವಾರಣೆಗಾಗಿ ಕಾರಂತ ಬೀದಿಯ ಒತ್ತುವರಿ ತೆರವಿಗೆ ಸರ್ವೆ ನಡೆಸುವಂತೆ ನಗರ ಯೋಜನೆ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ. ಆದರೆ ಇದುವರೆಗೆ ಸರ್ವೆ ನಡೆಸುವ ಕುರಿತು ಕ್ರಮ ಕೈಗೊಂಡಿಲ್ಲ. ಪೊಲೀಸರ ನೆರವು ಪಡೆದು ಈಗಿನ ಸಮಸ್ಯೆಯನ್ನು ತಾತ್ಕಾಲಿಕವಾಗಿ ನಿವಾರಿಸುವ  ಕುರಿತು ಕ್ರಮ ಕೈಗೊಳ್ಳಲಿದ್ದೇವೆ
.
– ಶ್ರೀಪಾದ್‌ ಪುರೋಹಿತ್‌, ಮುಖ್ಯಾಧಿಕಾರಿಗಳು  ಸಾಲಿಗ್ರಾಮ ಪ.ಪಂ.

ಸಮಸ್ಯೆ ಪ್ರತಿದಿನ ಹೆಚ್ಚುತ್ತಿದೆ
ಸ್ಥಳಾವಕಾಶದ ಕೊರತೆ, ರಸ್ತೆ ಮೇಲೆ ವಾಹನ ಪಾರ್ಕ್‌ ಮಾಡುವುದರಿಂದ ಕಾರಂತ ಬೀದಿಯಲ್ಲಿ   ಟ್ರಾಫಿಕ್‌ ಸಮಸ್ಯೆ ಪ್ರತಿದಿನ ಹೆಚ್ಚುತ್ತಿದೆ. ಶನಿವಾರ ದೇವಸ್ಥಾನಕ್ಕೆ ಆಗಮಿಸುವವರಿಗೂ ಇದರಿಂದ ದೊಡ್ಡ ಸಮಸ್ಯೆಯಾಗುತ್ತಿದೆ. ಸ್ಥಳೀಯಾಡಳಿತ, ಆರಕ್ಷಕರು ಜತೆಯಾಗಿ ಈ ಕುರಿತು ಕ್ರಮ ಕೈಗೊಳ್ಳಬೇಕಿದೆ. ದೇವಸ್ಥಾನದ ವತಿಯಿಂದ ಸೂಕ್ತ ಸಹಕಾರ ನೀಡುತ್ತೇವೆ
.
– ಅನಂತಪದ್ಮನಾಭ ಐತಾಳ, 
ಅಧ್ಯಕ್ಷರು ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ

– ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next