ಬೆಂಗಳೂರು: ಬ್ಯಾಂಕ್ ಅಥವಾ ಫೈನಾನ್ಸ್‌ಗಳಲ್ಲಿ ಬಾಕಿ ಇರುವ ಕಾರುಗಳು ಹಾಗೂ ಟೆಂಪೋ ಟ್ರಾವೆಲ್ಲರ್‌ಗಳನ್ನು ಖರೀದಿಸಿ, ಅದೇ ಬ್ಯಾಂಕ್ ಮತ್ತು ಫೈನಾನ್ಸ್‌ಗಳ ಹೆಸರಿನಲ್ಲಿ ನಕಲಿ ಎನ್‌ಒಸಿ ಸೃಷ್ಟಿಸಿ ವಾಹನಗಳ ಮಾರಾಟ ಮಾಡು ತ್ತಿದ್ದ ಮೂವರು ವಂಚಕರು ಬನಶಂಕರಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಸೋಲದೇವನಹಳ್ಳಿ ನಿವಾಸಿ ಸಿ.ಪ್ರಭಾಕರ (40), ಚಾಮರಾಜಪೇಟೆಯ ಆರ್. ಕಿರಣ್ (44) ಮತ್ತು ಮಂಡ್ಯ ಜಿಲ್ಲೆ ನಾಗಮಂಗಲ ನಿವಾಸಿ ಎಸ್.ಪ್ರಕಾಶ ಅಲಿಯಾಸ್ ಚೀಟಿ ಪ್ರಕಾಶ (33) ಬಂಧಿತರು.
ಆರೋಪಿಗಳಿಂದ 90 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ 7 ಕಾರುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ಪೈಕಿ ಪ್ರಭಾಕರ ಮತ್ತು ಪ್ರಕಾಶ್ ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟ ವ್ಯವಹಾರ ಮಾಡುತ್ತಿದ್ದರು. ಹೀಗಾಗಿ ಬ್ಯಾಂಕ್ ಮತ್ತು ಫೈನಾನ್ಸ್‌ಗಳಲ್ಲಿ ಸಾಲ ಬಾಕಿ ಉಳಿಸಿಕೊಂಡ ಮಾಲೀಕರ ಪರಿಚಯವಾಗುತ್ತಿತ್ತು. ಆಗ ಬಾಕಿ ಸಾಲ ತಾವೇ ತೀರಿಸುತ್ತೇವೆ ಎಂದು ವಾಹನಗಳ ಖರೀದಿಸುತ್ತಿದ್ದರು. ಬಳಿಕ ಪ್ರಭಾಕರ ತನ್ನ ಜೆರಾಕ್ಸ್ ಅಂಗಡಿಯಲ್ಲಿ ಅದೇ ಬ್ಯಾಂಕ್ ಗಳ ಹೆಸರಿನಲ್ಲಿ ನಕಲಿ ಎನ್‌ಒಸಿ ಮತ್ತು ಲೋನ್ ಅಗ್ರಿಮೆಂಟ್ ಟರ್ಮಿನೇಷನ್ ಪತ್ರ ಸಿದ್ಧಪಡಿಸಿ ಇತರೆ ಇಬ್ಬರು ಆರೋಪಿಗಳಿಗೆ ನೀಡುತ್ತಿದ್ದ. ಈ ನಕಲಿ ದಾಖಲೆಗಳ ಮೂಲಕ ಬೇರೆ ಬೇರೆ ಗ್ರಾಹಕರಿಗೆ ವಾಹನಗಳ ಮಾರಾಟ ಮಾಡುತ್ತಿದ್ದರು. ಕೆಲವೊಮ್ಮೆ ಹಣಕಾಸಿನ ಸಂಸ್ಥೆಗಳು ಎಲ್ಲೆಂದರಲ್ಲಿ ವಾಹನಗಳ ಜಪ್ತಿ ಮಾಡುವ ಸಾಧ್ಯತೆಯಿದೆ ಎಂದು ಭಾವಿಸಿ, ವಾಹನಗಳಿಗೆ ನಕಲಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸಿ ವಂಚಿಸು ತ್ತಿದ್ದರು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಇತ್ತೀಚೆಗೆ ದೂರುದಾರ ಕುಮಾರ ನಾಯ್ಕ ಎಂಬುವರು ತಮ್ಮ ಸುಜುಕಿ ಸಿಯಾಜ್ ಕಾರಿನ ನೋಂದಣಿ ಸಂಖ್ಯೆ ಯನ್ನು ಬೇರೊಂದು ಕಾರಿಗೆ ಅಳವಡಿಸಿ, ತುಮಕೂರು ಆರ್‌ಟಿಒ ಕಚೇರಿಯಲ್ಲಿ ಮಾಲೀಕತ್ವ ಬದಲಾವಣೆ ಮಾಡಿ ವಂಚಿಸಿದ್ದರು. ಈ ಸಂಬಂಧ ಬನಶಂಕರಿ ಠಾಣೆಯಲ್ಲಿ ದೂರು ದಾಖ ಲಾಗಿತ್ತು. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳ ವಿಚಾರಣೆ ವೇಳೆ ಕಳೆದ ಐದು ವರ್ಷಗಳಿಂದ ಸಾಲ ಬಾಕಿಯಿರುವ ಕಾರುಗಳನ್ನು ಖರೀದಿಸಿ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ ಎಂಬುದು ಗೊತ್ತಾಗಿದೆ. ಆರೋಪಿ ಪ್ರಭಾಕರ 2017ರಲ್ಲಿ ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ. ಜಾಮೀನು ಪಡೆದು ಹೊರಬಂದ ಬಳಿಕ ಉಳಿದ ಆರೋಪಿಗಳ ಜತೆ ಸೇರಿ ದಂಧೆ ಮುಂದುವರಿೆಸಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
ಮತ್ತೂಂದೆಡೆ ಸಾಲ ಬಾಕಿಯಿರುವ ಕಾರುಗಳಿಗೆ ನಕಲಿ ಎನ್‌ಒಸಿ ಮತ್ತು ಲೋನ್ ಅಗ್ರಿಮೆಂಟ್ ಟರ್ಮಿನೇಷನ್ ಪ್ರಮಾಣ ಪತ್ರಗಳನ್ನು ಸೃಷ್ಟಿಸಿ ಆರ್‌ಟಿಒ ಕಚೇರಿಗೆ ನೀಡಿ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಾಡಿದ್ದರು ಎಂಬ ಮಾಹಿತಿ ಮೇರೆಗೆ ಸಾರಿಗೆ ಇಲಾಖೆಗೆ ಪತ್ರ ಬರೆದು ಮಾಹಿತಿ ಕೇಳಲಾಗಿದೆ ಎಂದು ಪೊಲೀಸರು ಹೇಳಿದರು.