ಬೆಂಗಳೂರು: ಆಹಾರ ಸುರಕ್ಷತೆ ಕುರಿತು ಜಾಗೃತಿ ಮೂಡಿಸು ವುದರ ಜತೆಗೆ ಅಸುರಕ್ಷಿತ ಆಹಾರ ಮಾರಾಟ ತಡೆಗಟ್ಟಲು ಆಹಾರ ಸುರಕ್ಷತಾ ಇಲಾಖೆಯಿಂದ ಕೈಗೊಂಡಿದ್ದ 2 ದಿನ ವಿಶೇಷ ಅಭಿಯಾನದಲ್ಲಿ ರಾಜ್ಯಾದ್ಯಂತ 2,820 ಕಡೆಗಳಲ್ಲಿ ತಪಾಸಣೆ ನಡೆಸಿ, 6.31ಲಕ್ಷ ರೂ ದಂಡ ವಿಧಿಸಲಾಗಿದೆ.
ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಅಧಿಕಾರಿಗಳು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿರುವ ಬೀದಿ ಬದಿಯ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳನ್ನು ತಪಾಸಣೆ ನಡೆಸಿದರು.
ಈ ಪೈಕಿ ಬಾಗಲಕೋಟೆಯಲ್ಲಿ 298 ಕಡೆಗಳಲ್ಲಿ ತಪಾಸಣೆ ಕೈಗೊಂಡು, ಪರವಾನಗಿ ರಹಿತ ಹಾಗೂ ಸ್ವತ್ಛತೆಯಿಲ್ಲದ 277 ಹೋಟೆಲ್‌ಗಳಿಗೆ ನೋಟಿಸ್ ನೀಡಲಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ 23 ಹೋಟೆಲ್‌ಗಳಿಗೆ ನೋಟಿಸ್ ಜಾರಿಗೊ ಳಿಸಿ 20 ಸಾವಿರ ರೂ. ದಂಡ ವಿಧಿಸಲಾಗಿದೆ. ಗದಗದಲ್ಲಿ 82 ಕಡೆಗಳಲ್ಲಿ ತಪಾಸಣೆ ನಡೆಸಿ 67 ಉದ್ದಿಮೆದಾರರಿಗೆ ನೋಟಿಸ್ ನೀಡಿ, 32 ಸಾವಿರ ರೂ. ದಂಡವನ್ನು ಇಲಾಖೆ ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಬಳ್ಳಾರಿಯಲ್ಲಿ ಪರವಾನಗಿ ರಹಿತ 8 ಮಳಿಗೆ ಗಳಿಂದ 18 ಸಾವಿರ ರೂ. ದಂಡ ಸಂಗ್ರಹ ಮಾಡಲಾಗಿದೆ.
ಚಿಕ್ಕಬಳ್ಳಾಪುರದಲ್ಲಿ 27ಸಾವಿರ ರೂ, ದಕ್ಷಿಣ ಕನ್ನಡದಲ್ಲಿ 10 ಸಾವಿರ ರೂ, ಕೊಪ್ಪಳದಲ್ಲಿ 35 ಸಾವಿರ ರೂ, ಮಂಡ್ಯದಲ್ಲಿ 20 ಸಾವಿರ, ರಾಮನಗರದಲ್ಲಿ 27ಸಾವಿರ ರೂ, ಮೈಸೂರು (ಎಂಸಿಸಿಎ)ನಲ್ಲಿ 1.14 ಲಕ್ಷ ರೂ, ಧಾರವಾಡದಲ್ಲಿ 53ಸಾವಿರ ರೂ, ಬೆಂಗಳೂರಿನ ಬಿಬಿಎಂಪಿ(ಪೂರ್ವ) ವ್ಯಾಪ್ತಿಯಲ್ಲಿ 22 ಸಾವಿರ ರೂ, ಬೆಂಗಳೂರಿನ ಬಿಬಿಎಂಪಿ(ದಕ್ಷಿಣ)ದಿಂದ 5 ಸಾವಿರ ದಂಡ ಸಂಗ್ರಹಿಸಲಾಗಿದೆ.
ರಾಜ್ಯಾದ್ಯಂತ ಒಟ್ಟಾರೆ 2,820 ಸಾವಿರ ಕಡೆಗಳಲ್ಲಿ ತಪಾಸಣೆ ನಡೆಸಿದಾಗ ಪರವಾನಗಿ ರಹಿತವಾಗಿ ಕಾರ್ಯಾಚರಿಸುತ್ತಿದ್ದ 666 ಹೋಟೆಲ್‌ಗಳು, ಶುಚಿತ್ವ ಇಲ್ಲದ 1,080 ಹೋಟೆಲ್‌ಗಳಿಗೆ ನೋಟಿಸ್ ನೀಡಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಇಲಾಖೆ ತಿಳಿಸಿದೆ.