Advertisement

ನಕಲಿ ರಸಗೊಬ್ಬರ ಜಾಲ ಭೇದಿಸಿ

11:20 AM Nov 11, 2021 | Team Udayavani |

ಮೈಸೂರು: ಹಳೇ ಮೈಸೂರು ಭಾಗದಲ್ಲಿ ನಕಲಿ ರಸಗೊಬ್ಬರ ಮಾರಾಟ ಹಾವಳಿ ಹೆಚ್ಚಾಗಿದ್ದು, ಇದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಹೀಗಿದ್ದರೂ ಕೃಷಿ, ತೋಟಗಾರಿಕೆ ಮತ್ತು ಪೊಲೀಸರು ಮೌನವಹಿಸಿದ್ದಾರೆ ಎಂದು ಅಖೀಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘ ಕೆ.ಆರ್‌. ಪೇಟೆ ತಾಲೂಕು ಘಟಕದ ಅಧ್ಯಕ್ಷ ಸಿದ್ದೇಗೌಡ ಆರೋಪಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ನಕಲಿ ಹಾಗೂ ಕಲಬೆರಕೆ ರಸಗೊಬ್ಬರ ಮಾರಾಟ ಜಾಲವಿದ್ದು, ಸಾವಿರಾರು ರೈತರನ್ನು ವಂಚಿಸಲಾಗುತ್ತಿದೆ.

ಈ ಬಗ್ಗೆ ಪೊಲೀಸರು ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದರು. ರೈತರಿಗೆ ಅಗತ್ಯವಾಗಿ ಬೇಕಿರುವ ದುಬಾರಿ ಬೆಲೆಯ ಪೋಟಾಶ್‌, 17-17-17, ಡಿಎಪಿ, ಎಂಒಪಿ, ಯೂರಿಯಾ ರಸಗೊಬ್ಬರಗಳನ್ನು ಹೋಲುವ ನಕಲಿ ಮತ್ತು ಕಲಬೆರಕೆ ಮಾಡಿ ಮಾರಾಟ ಮಾಡಲಾಗುತ್ತಿದೆ. ದೃಢೀಕೃತ ಕಂಪನಿಗಳ ಮೊಹರಿರುವ ಚೀಲಗಳನ್ನು ನಕಲು ಮಾಡಿ, 20 ಕೆ.ಜಿ. ನೈಜ್ಯ ರಸಗೊಬ್ಬರ ಹಾಕಿ ಉಳಿದ 30 ಕೆ.ಜಿ.ಯಷ್ಟು ನಕಲಿ ಪದಾರ್ಥವನ್ನು ಮಿಶ್ರಣ ಮಾಡಲಾಗುತ್ತಿದೆ. ಈಗಾಗಲೇ ಮೈಸೂರಿನ ಕೆ.ಆರ್‌. ನಗರ ತಾಲೂಕು, ಎಚ್‌ .ಡಿ. ಕೋಟೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ:- ಸರ್ವ ಜನಾಂಗವನ್ನು ಒಗ್ಗೂಡಿಸಿ ಆಡಳಿತ ನಡೆಸಿದ್ದರು ಟಿಪ್ಪು: ಸೈಯದ್‌ ನಾಸೀರ್‌ ಹುಸೇನ್‌

ಈ ಬಗ್ಗೆ ರೈತರು ಎಚ್ಚರಿಕೆಯಿಂದ ಇರಬೇಕು. ಕೂಡಲೇ ಅಧಿಕಾರಿಗಳು ಈ ಜಾಲವನ್ನು ಭೇದಿಸಿ ನಿಯಂತ್ರಣದಲ್ಲಿಡುವಂತೆ ಆಗ್ರಹಿಸಿದರು. ಜಿಲ್ಲಾಧ್ಯಕ್ಷ ಅಂಕನಹಳ್ಳಿ ತಿಮ್ಮಪ್ಪ ಮಾತನಾಡಿ, ಈಗಾಗಲೇ ತರಕಾರಿ, ಶುಂಠಿ ಬೆಳೆ ಬೆಳೆದು ಉತ್ತಮ ಬೆಲೆ ಸಿಗದೆ ರೈತರು ಕಂಗಾಲಾಗಿದೆ. ಜೊತೆಗೆ ಎಲ್ಲಾ ಕಡೆ ಭತ್ತ ಕಟಾವಿಗೆ ಬಂದಿದ್ದು, ಸರ್ಕಾರ ಸಕಾಲದಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು.

Advertisement

ಡಿಸೆಂಬರ್‌ ಮೊದಲ ವಾರದಲ್ಲಿ ರೈತರಿಂದ ಭತ್ತ, ರಾಗಿ, ಜೋಳ ಖರೀದಿ ಮಾಡಲು ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿದರು. ಜೊತೆಗೆ ಕೆ.ಆರ್‌. ನಗರದ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ತೆರೆಯುವಂತೆ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಪತ್ರಿಕಾ ಕಾರ್ಯದರ್ಶಿ ಎಂ.ಎಸ್‌. ರಾಜೇಂದ್ರ, ಜಿಲ್ಲಾ ಉಪಾಧ್ಯಕ್ಷ ಎಚ್‌.ಎಸ್‌. ವಿಶ್ವಾಸ್‌, ಮೈಸೂರು ತಾಲೂಕು ಅಧ್ಯಕ್ಷ ಕೆ.ಪಿ. ಶಿವರಾಜು, ಮಹಿಳಾ ಘಟಕದ ಅಧ್ಯಕ್ಷೆ ಸುಭಾಷಿಣಿ, ಉಪಾಧ್ಯಕ್ಷೆ ಲೀಲಾವತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next