ಬೆಂಗಳೂರು: ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಐವರು ಆರೋಪಿಗಳನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶ್ರೇಯಸ್, ಆಂಧ್ರ ಮೂಲದ ಮಣಿಕಂಠ, ಲಕ್ಷ್ಮಣ್, ನಗರದ ಶಿವಪ್ರಸಾದ್ ಹಾಗೂ ಜುಬೇರ್ ಬಂಧಿತರು.
ನಾಲ್ಕು ದಿನಗಳ ಹಿಂದೆ ಜ್ಯೋತಿನಿವಾಸ ಕಾಲೇಜು ಸಮೀಪ ಗಾಂಜಾ ಖರೀದಿಸಲು ಬಂದ ವ್ಯಕ್ತಿಯನ್ನು ವಶಕ್ಕೆ ಪಡೆದಾಗ ಆತ ನೀಡಿದ ಮಾಹಿತಿ ಆಧರಿಸಿ ಆರೋಪಿಗಳ ಬೆನ್ನಟ್ಟಿದ ಪೊಲೀಸರು, ನಗರಕ್ಕೆ ಗಾಂಜಾ ಪೂರೈಕೆಯಾಗುತ್ತಿದ್ದ ವಿಶಾಖಪಟ್ಟಣ ಸಮೀಪದ ಅರಕು ಕಣಿವೆ ಮೂಲ ಪತ್ತೆಹಚ್ಚಿದ್ದು, ಅಲ್ಲಿಂದಲೇ ಲಕ್ಷ್ಮಣ್ ಹಾಗೂ ಮಣಿಕಂಠನನ್ನು ಬಂಧಿಸಿ ಕರೆತಂದಿದ್ದಾರೆ.
ಇಬ್ಬರೂ ಆರೋಪಿಗಳು ರಾಜಧಾನಿಯಲ್ಲಿ ಸಕ್ರಿಯವಾಗಿರುವ ಮಾದಕ ವಸ್ತು ಮಾರಾಟ ಜಾಲಕ್ಕೆ ಗಾಂಜಾ ಪೂರೈಕೆ ಮಾಡುತ್ತಿದ್ದರು. ಆರೋಪಿಗಳಿಂದ 3.5 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಂಜಾ ಚಟದಿಂದ ಜಾಲ ಸೇರಿದ: ಪ್ರತಿಷ್ಠಿತ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ಸ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಶ್ರೇಯಸ್, ಆರಂಭದಲ್ಲಿ ಶಿವಪ್ರಸಾದ್‌ನಿಂದ ಗಾಂಜಾ ಖರೀದಿಸಿ ಸೇವಿಸುತ್ತಿದ್ದ. ಕ್ರಮೇಣ ಚಟಕ್ಕೆ ಬಿದ್ದು 2016ರಲ್ಲಿ ವಿಧ್ಯಾಭ್ಯಾಸ ಮೊಟಕುಗೊಳಿಸಿದ್ದ. ನಂತರ ಖರ್ಚಿಗೆ ಹಣ ಹೊಂದಿಸಲು ಶಿವಪ್ರಸಾದ್‌ನಿಂದ ಗಾಂಜಾ ಖರೀದಿಸಿ, ಸ್ನೇಹಿತರಿಗೆ ಮಾರಾಟ ಮಾಡಲು ಆರಂಭಿಸಿ, ಬಳಿಕ ಜಾಲದಲ್ಲಿ ಸಕ್ರಿಯನಾಗಿದ್ದ.
ನಗರದ ಹಲವು ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಸುತ್ತಿದ್ದ. ಈ ನಡುವೆ ಬಿಬಿಎ ಪದವಿಗೆ ಸೇರಿಕೊಂಡಿದ್ದು, ಅದನ್ನೂ ಪೂರ್ಣಗೊಳಿಸಿಲ್ಲ. ಮತ್ತೋರ್ವ ಆರೋಪಿ ಜುಬೇರ್ ಎಚ್‌ಎಎಲ್, ಮಾರತ್‌ಹಳ್ಳಿ ಪ್ರದೇಶಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದು, ಶಿವಪ್ರಸಾದ್ ಬಸವೇಶ್ವರನಗರ, ಮಾಗಡಿ ರಸ್ತೆ, ಸೇರಿ ಪಶ್ಚಿಮ ವಿಭಾಗದಲ್ಲಿ ಈ ದಂಧೆ ನಡೆಸುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.