ಬೆಂಗಳೂರು: ಗಿಫ್ಟ್ ಸೆಂಟರ್‌ಗಳಲ್ಲಿ ಇ-ಸಿಗರೇಟ್ ಶೇಖರಿಸಿ ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಕೇರಳ ಮೂಲದ ಐವರನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಮುಜಾಮಿಲ್(35), ಅಬ್ದುಲ್ ಅಜೀಜ್(37), ಮೊಹಮ್ಮದ್ ಅಫ್ಜಲ್(30), ಅಬ್ದುಲ್ ಸಮೀರ್ (32), ಮೊಹಮ್ಮದ್ ಮುತಾಸದ್ದಿಕ್ (34) ಬಂಧಿತರು. ಆರೋಪಿಗಳಿಂದ 26 ಲಕ್ಷ ರೂ. ಮೌಲ್ಯದ ವಿದೇಶಿ ಹಾಗೂ ಇ-ಸಿಗರೇಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ನಾಲ್ಕೈದು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿ ರುವ ಆರೋಪಿಗಳು, ಕೊತ್ತನೂರು ಠಾಣೆ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆರಂಭದಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದರು. ಈ ಮಧ್ಯೆ ಮುಜಾಮಿಲ್ ವಿದೇಶದಲ್ಲಿರುವ ತನ್ನ ಸ್ನೇಹಿತರ ಮೂಲಕ ಅಕ್ರಮವಾಗಿ ಇ-ಸಿಗರೇಟ್ ಹಾಗೂ ವಿದೇಶಿ ಸಿಗರೇಟ್‌ಗಳನ್ನು ಕಡಿಮೆ ಬೆಲೆಗೆ ತರಿಸಿಕೊಂಡು ಕೋರಮಂಗಲದಲ್ಲಿರುವ ತನ್ನ ಗೋಡೌನ್‌ನಲ್ಲಿ ಸಂಗ್ರಹಿಸಿಟ್ಟಿದ್ದ. ಈತನ ಸೂಚನೆ ಮೇರೆಗೆ ಇತರೆ ನಾಲ್ವರು ಆರೋಪಿಗಳು ಕೊತ್ತನೂರಿನಲ್ಲಿ ಎರಡು ಗಿಫ್ಟ್ ಸೆಂಟರ್ ಗಳನ್ನು ತೆರೆದು, ಅಲ್ಲಿಯೇ ಇ-ಸಿಗರೇಟ್‌ಗಳನ್ನು ಗ್ರಾಹಕರಿಗೆ ಮಾರುತ್ತಿದ್ದರು. ಪ್ರತಿ ಸಿಗರೇಟ್‌ಗೆ 300-400 ರೂ.ಗೆ ಮಾರುತ್ತಿದ್ದರು ಎಂದು ಪೊಲೀಸರು ಹೇಳಿದರು.
ಗೋಡೌನ್‌ನಲ್ಲಿದ್ದ ಸಿಗರೇಟ್ ಬಂಡಲ್‌ಗಳು: ಠಾಣೆ ವ್ಯಾಪ್ತಿಯಲ್ಲಿ ಗಿಫ್ಟ್ ಸೆಂಟರ್‌ಗಳಲ್ಲಿ ಇ-ಸಿಗರೇಟ್ ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ಡಿ.8ರಂದು ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದ್ದರು. ಆಗ 2.30 ಲಕ್ಷ ರೂ. ಮೌಲ್ಯದ ಇ-ಸಿಗರೇಟ್‌ಗಳು ಪತ್ತೆಯಾಗಿವೆ. ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣ ದಾಖಲಿ ಸಿಕೊಂಡು ನಾಲ್ವರನ್ನು ಬಂಧಿಸಲಾಗಿತ್ತು. ಈ ಆರೋಪಿಗಳು ವಿಚಾರಣೆಯಲ್ಲಿ ಕೋರಮಂಗಲ ಸಮೀಪದಲ್ಲಿರುವ ಸಣ್ಣ ಗೋಡೌನ್‌ನಿಂದ ಇ-ಸಿಗರೇಟ್ ಸರಬರಾಜು ಆಗುತ್ತಿದೆ ಎಂಬ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಡಿ.10ರಂದು ಗೋಡೌನ್ ಮೇಲೆ ದಾಳಿ ನಡೆಸಿದಾಗ 23.67 ಲಕ್ಷ ರೂ. ಮೌಲ್ಯದ ವಿದೇಶಿ ಸಿಗರೇಟ್‌ಗಳು ಪತ್ತೆಯಾಗಿವೆ.
ಕೊತ್ತನೂರು ಠಾಣೆ ಇನ್ ಸ್ಪೆಕ್ಟರ್ ಅಶ್ವತ್ಥನಾರಾಯಣಸ್ವಾಮಿ ನೇತೃತ್ವದಲ್ಲಿ ಪಿಎಸ್‌ಐ ಜೇಸುದಾಸ್ ಮತ್ತು ಮಹೇಶ್ ಬ್ಯಾಕೂಡ, ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.