Advertisement

ಮುಜರಾಯಿ ದೇವಸ್ಥಾನದ ನೌಕರರಿಗೆ ವೇತನ ಶ್ರೇಣಿ ನಿಗದಿ

06:00 AM Dec 18, 2018 | |

ವಿಧಾನಪರಿಷತ್ತು: ರಾಜ್ಯದ ಮಜರಾಯಿ ಇಲಾಖೆಯ ವಿವಿಧ ದೇವಾಲಯಗಳಲ್ಲಿ ತಾತ್ಕಾಲಿಕವಾಗಿ ಸೇವೆ ಸಲ್ಲಿಸುತ್ತಿರುವ ಸುಮಾರು
2,568 ನೌಕರರಿಗೆ ವೇತನ ಶ್ರೇಣಿ ನಿಗದಿಪಡಿಸಲು ಕ್ರಮ ಕೈಗೊಳ್ಳ ಲಾಗುತ್ತದೆ ಎಂದು ಮುಜರಾಯಿ, ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ ಪಾಟೀಲ ತಿಳಿಸಿದ್ದಾರೆ.

Advertisement

ಬಿಜೆಪಿ ಸದಸ್ಯ ಕೆ.ಪಿ. ನಂಜುಂಡಿ ಮಾತನಾಡಿ, ಮೈಸೂರಿನ ಚಾಮುಂಡೇಶ್ವರಿ ದೇವಾಲಯದ ಅರ್ಚಕರ ಪ್ರತಿಭಟನೆ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಲಿಖೀತ ಉತ್ತರ ನೀಡಿದ ಸಚಿವರು, ಒಟ್ಟು 2,568 ತಾತ್ಕಾಲಿಕ ನೌಕರರಿಗೆ ವೇತನ ತಾರತಮ್ಯ
ನಿವಾರಿಸುವ ನಿಟ್ಟಿನಲ್ಲಿ ವೇತನ ಶ್ರೇಣಿ ನಿಗದಿಗೆ ತಿದ್ದುಪಡಿ ತರಲು ರಚಿಸಿದ್ದ ಸಮಿತಿ ತನ್ನ ವರದಿ ಸಲ್ಲಿಸಿದೆ. ವರದಿಯನ್ನು ಪರಿಶೀಲಿಸಿ ವೇತನ ನಿಯಮಕ್ಕೆ ತಿದ್ದುಪಡಿ ತರಲಾಗುವುದು. ಈಗಾಗಲೇ 5ನೇ ವೇತನ ಶ್ರೇಣಿ ಪಡೆದಿರುವ ಸುಮಾರು 1,111 ನೌಕರರಿಗೆ ದೇವಾಲಯಗಳ ಆದಾಯ/ವೆಚ್ಚದ ಪೂರ್ಣವಾದ ಅಂಕಿ- ಅಂಶಗಳನ್ನು ಪಡೆದು ಪರಿಷ್ಕೃತ/ಹೆಚ್ಚುವರಿ ವೇತನ ಸವಲತ್ತುಗಳನ್ನು ನೀಡುವ ಕುರಿತಾಗಿ ಪರಿಶೀಲಿಸಲಾಗುವುದು. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮಾದಾಯ ದತ್ತಿಗಳ ನಿಯಮ-2002ರ ಪ್ರಕಾರ ದೇವಾಲಯಗಳ ಆದಾಯದಲ್ಲಿ ಸಿಬ್ಬಂದಿ ವೆಚ್ಚ ಶೇ.35ರಷ್ಟು ಮೀರಬಾರದು. ಹೀಗಾಗಿ, ಸಿಬ್ಬಂದಿ ವೆಚ್ಚ ಶೇ.35ರಷ್ಟು ಮೀರದಂತೆ ವೇತನ, ಸವಲತ್ತು ಕಲ್ಪಿಸಬೇಕಾಗಿದೆ. 5ನೇ ವೇತನ ಶ್ರೇಣಿಗೆ ಒಳಪಟ್ಟ 1,111 ನೌಕರರಲ್ಲಿ
ಚಾಮುಂಡೇಶ್ವರಿ ದೇವಸ್ಥಾನದ 95 ಸಿಬ್ಬಂದಿ ಇದ್ದಾರೆ. ಅದೇ ರೀತಿ ವೇತನ ಶ್ರೇಣಿ ನಿಗದಿಪಡಿಸಬೇಕಾದ 2,568 ನೌಕರರಲ್ಲಿ
ಚಾಮುಂಡೇಶ್ವರಿ ದೇವಸ್ಥಾನದ 76 ಸಿಬ್ಬಂದಿ ಇದ್ದಾರೆ ಎಂದು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next