Advertisement

ಪ್ರತಿಭಾ ಪಲಾಯನ ತಡೆಗೆ ‘ವೇತನ’ಯೋಜನೆ!

01:39 AM Jul 01, 2019 | Sriram |

ಹೊಸದಿಲ್ಲಿ: ಸಾಮಾನ್ಯವಾಗಿ ಉತ್ತಮ ಪ್ರತಿಭೆಯುಳ್ಳವರು ವಿದೇಶಕ್ಕೆ ತೆರಳಿ ಅಲ್ಲಿ ಉನ್ನತ ವ್ಯಾಸಂಗ ಮಾಡಿ, ಅಲ್ಲಿಯೇ ಉದ್ಯೋಗ ಪಡೆಯುತ್ತಾರೆ. ಇದಕ್ಕಾಗಿ ವಿದೇಶಿ ವಿವಿಗಳು ವಿದ್ಯಾರ್ಥಿ ವೇತನವನ್ನೂ ಒದಗಿಸುತ್ತವೆ. ಇದರಿಂದಾಗಿ ಭಾರತದ ಪ್ರತಿಭಾವಂತರು ವಿದೇಶದ ಪಾಲಾಗುತ್ತಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಮಹತ್ವದ ಯೋಜನೆ ರೂಪಿಸಿದೆ.


Advertisement

ಈ ಯೋಜನೆ ಅಡಿಯಲ್ಲಿ ಪ್ರತಿಭಾವಂತರಿಗೆ ಕೇಂದ್ರ ಸರಕಾರವೇ ವಿದ್ಯಾರ್ಥಿವೇತನ ನೀಡಲಿದೆ. ವಿದ್ಯಾರ್ಥಿವೇತನ ಪಡೆದು ವಿದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ನಡೆಸಬಹುದು. ಆದರೆ ವಿದ್ಯಾರ್ಥಿವೇತನ ಕೊಡುವ ಮುನ್ನ ಕೇಂದ್ರ ಸರಕಾರ ಒಂದು ಪ್ರಮುಖ ಷರತ್ತು ವಿಧಿಸುತ್ತದೆ. ಅದೇನೆಂದರೆ, ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಯು ವಿದೇಶದಲ್ಲಿ ವ್ಯಾಸಂಗ ಮುಗಿಸುತ್ತಿದ್ದಂತೆಯೇ ಭಾರತಕ್ಕೆ ವಾಪಸಾಗಬೇಕು ಮತ್ತು ಭಾರತದಲ್ಲೇ ಉದ್ಯೋಗ ಕೈಗೊಳ್ಳಬೇಕು! ಈ ಬಗ್ಗೆ ‘ದ ಹಿಂದುಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ.

ವಿಶ್ವದ 200ಕ್ಕೂ ಅಧಿಕ ಜನಪ್ರಿಯ ವಿವಿಗಳಲ್ಲಿ ಪಿಎಚ್‌ಡಿ ಮತ್ತು ಉನ್ನತ ಅಧ್ಯಯನಗಳಿಗೆ ಮಾತ್ರಇದು ಅನ್ವಯಿಸಲಿದೆ. ಅಲ್ಲದೆ, ಐದು ವರ್ಷಗಳ ವರೆಗೆ ವಿದ್ಯಾರ್ಥಿವೇತನವನ್ನು ಸರಕಾರ ನೀಡಲಿದೆ. ಇವರು ಇಷ್ಟೇ ಅವಧಿಗೆ ಭಾರತದಲ್ಲಿ ಕೆಲಸ ಮಾಡಬೇಕಿರುತ್ತದೆ. ಇವರನ್ನು ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳು ನೇಮಕ ಮಾಡಿಕೊಳ್ಳಬಹುದಾಗಿದ್ದು, ಪಿಎಂ ಯಂಗ್‌ ಅಕಾಡೆಮೀಶಿಯನ್‌ ಎಂಬ ಹುದ್ದೆಯನ್ನು ಇವರಿಗಾಗಿ ಸೃಷ್ಟಿಸಲಾಗುತ್ತದೆ. 40 ವರ್ಷಕ್ಕಿಂತ ಕೆಳಗಿನ ವಯೋಮಿತಿಯವರನ್ನು ಗುರಿಯಾಗಿರಿಸಿ ಈ ಯೋಜನೆ ಜಾರಿಗೆ ತೀರ್ಮಾನಿಸಲಾಗಿದೆ.

80 ಪರಿಣತರ ಸಮಿತಿ
ಈ ಯೋಜನೆಯು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಕನಸಿನ ಯೋಜನೆ ಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸೂಚನೆಯ ಮೇರೆಗೆ ಎಂಬತ್ತು ಪರಿಣತರನ್ನು ಒಳಗೊಂಡ ಸಮಿತಿ ರಚಿಸಲಾಗಿತ್ತು ಇದರಲ್ಲಿ ನೀತಿ ಆಯೋಗದ ಸಿಇಒ ಅಮಿತಾಭ್‌ ಕಾಂತ್‌, ಇಸ್ರೋ ಮಾಜಿ ಮುಖ್ಯಸ್ಥ ಕಸ್ತೂರಿ ರಂಗನ್‌ ಸಹಿತ ಹಲವು ಗಣ್ಯರು ಇದ್ದಾರೆ. ಇವರು ಈಗಾಗಲೇ ವರದಿ ಸಿದ್ಧಪಡಿಸಿ ಅನುಮೋದನೆಗಾಗಿ ಸಚಿವಾಲಯಕ್ಕೆ ಸಲ್ಲಿಸಿದ್ದಾರೆ.

ಕರೆತರಲೂ ಯೋಜನೆ: ಪ್ರತಿಭಾವಂತರ ಪಲಾಯನವನ್ನು ತಡೆಯು ವುದರ ಜತೆಗೆ, ವಿದೇಶದಲ್ಲಿ ಈಗಾಗಲೇ ನೆಲೆಸಿರುವ ಪ್ರತಿಭಾವಂತ ರನ್ನು ಭಾರತಕ್ಕೆ ಕರೆತರುವ ಯೋಜನೆ ಯನ್ನೂ ಈ ಸಮಿತಿ ಸಿದ್ಧಪಡಿಸಿದೆ. ಸಮಿತಿ ನೀಡಿದ ವರದಿಯ ಪ್ರಕಾರ, ವಿದೇಶದ ಉನ್ನತ ಸಂಸ್ಥೆಗಳಲ್ಲಿರುವ ಪ್ರತಿಭಾವಂತರಿಗೆ ಭಾರತದಲ್ಲೂ ಉದ್ಯೋಗ ಕೈಗೊಳ್ಳಲು ಅವಕಾಶ ಮಾಡಿ ಕೊಡಲಾಗುತ್ತದೆ. ಅಂದರೆ ವಿದೇಶದಲ್ಲಿ ಉದ್ಯೋಗದಲ್ಲಿದ್ದುಕೊಂಡೇ ಭಾರತದಲ್ಲೂ ಅವರು ಉದ್ಯೋಗ ನಡೆಸಬಹುದು. ಇವರು ಭಾರತದ ಶೈಕ್ಷಣಿಕ ಸಂಸ್ಥೆಗಳಲ್ಲಿ ಕನಿಷ್ಠ ಮೂರು ತಿಂಗಳು ಇರಬೇಕಾಗುತ್ತದೆ. ಅಷ್ಟೇ ಅಲ್ಲ, ಕನಿಷ್ಠ ಇಬ್ಬರು ಭಾರತೀಯ ಪಿಎಚ್‌ಡಿ ವಿದ್ಯಾರ್ಥಿಗಳನ್ನು ಮಾರ್ಗದರ್ಶಕ ರಾಗಿ ಇರಬೇಕು. ಅಷ್ಟೇ ಅಲ್ಲ, ಅವರು ಪೂರ್ಣಾವಧಿಗೆ ಭಾರತಕ್ಕೆ ಆಗಮಿಸಲು ಬಯಸುವುದಾದರೆ ಸರಕಾರವೇ ಒಂದಷ್ಟು ಹಣವನ್ನು ಸ್ಥಳಾಂತರ ವೆಚ್ಚವನ್ನಾಗಿ ನೀಡಲಿದೆ. ಅವರ ವೀಸಾ ಹಾಗೂ ಸಾಗರೋತ್ತರ ಪೌರತ್ವ ಕಾರ್ಡ್‌ ನೀಡಿಕೆ ಕೂಡ ತ್ವರಿತ ಗತಿಯಲ್ಲಿ ನಡೆಯಲಿದೆ ಅವರ ಸಂಗಾತಿಗೂ ಭಾರತದಲ್ಲಿ ಉದ್ಯೋಗ ಹುಡುಕಲು ಸರಕಾರ ನೆರವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next