Advertisement
ನಿಯಮ 330ರಡಿ ಬಿಜೆಪಿ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ವಿಷಯ ಪ್ರಸ್ತಾಪಿಸಿ, ವಿಧಾನಸಭೆ, ವಿಧಾನಪರಿಷತ್ ಸದಸ್ಯರು, ಲೋಕಸಭೆ, ರಾಜ್ಯಸಭೆ ಸದಸ್ಯರಿಗೆ ಜಿಲ್ಲಾಧಿಕಾರಿಗಳ ಮೂಲಕ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಆಪ್ತ ಸಹಾಯಕರಿಗೆ ವೇತನ ನೀಡಲು ಸರಕಾರಕ್ಕೆ ಸಾಧ್ಯವಾಗಿಲ್ಲ. ಅನುದಾನ ಇಲ್ಲ ಎಂದು ಏಪ್ರಿಲ್‌ನಿಂದ ವೇತನ ನೀಡಿಲ್ಲ ಎಂದು ಆರೋಪಿಸಿದರು.
ನೀಡುವುದು ಮಾಸಿಕ 14,500ರೂ.. ಅದು ಹೊರತಾಗಿ ಬೇರೆ ಭತ್ಯೆ ಇಲ್ಲ. ಆದರೂ ವೇತನ ಇಲ್ಲ ಎಂದರು. ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸೇರಿದಂತೆ ಹಲವು ಸದಸ್ಯರು ಇದಕ್ಕೆ ದನಿಗೂಡಿಸಿ, ಶಾಸಕರ ಆಪ್ತ ಸಹಾಯಕರಿಗೆ ವೇತನ ಇಲ್ಲವೆಂದಾದರೆ ಏನು ಸಂದೇಶ ಹೋಗುತ್ತದೆ? ಇದಕ್ಕಾಗಿ ಚರ್ಚೆ ಅವಶ್ಯಕ ಎಂದರು. ಕ್ಷಮೆಯಾಚಿಸಿದ ಸಚಿವರು: ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಪ್ರತಿಕ್ರಿಯಿಸಿ, ಪ್ರಸ್ತುತ ಅಗತ್ಯವಿರುವ ಅನುದಾನ 28.80 ಲಕ್ಷ ರೂ. ಆದ್ಯತೆ ಮೇರೆಗೆ ಮರು ಹಂಚಿಕೆಗೆ ಸೂಚಿಸಲಾಗಿದೆ. ಅಲ್ಲದೆ, ಶಾಸಕರ ಆಪ್ತ ಸಹಾಯಕರಿಗೆ ಇದುವರೆಗೆ ವೇತನ ನೀಡದಿರುವುದಕ್ಕೆ ಕ್ಷಮೆ ಯಾಚಿಸುತ್ತೇನೆ ಬಾಕಿ ಇರುವ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.