ಮಂಗಳೂರು: ರಾಜ್ಯದ ವಿವಿಧ ಸರಕಾರಿ ಪಾಲಿಟೆಕ್ನಿಕ್ ಮತ್ತು ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 1,200 ಅರೆಕಾಲಿಕ ಉಪನ್ಯಾಸಕರಿಗೆ ಕಳೆದ ಮಾರ್ಚ್‌ನಿಂದ ಜೂನ್ ವರೆಗಿನ ಒಂದು ಸೆಮಿಸ್ಟರ್‌ಗೆ ಸಂಬಂಧಿಸಿದ ವೇತನ ಪಾವತಿಯಾಗದೆ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಅಖಿಲ ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ.
ಸಂಘದ ಅಧ್ಯಕ್ಷ ಪ್ರಶಾಂತ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಿಂಗಳಿಗೆ ಕೇವಲ 12,500 ರೂ. ವೇತನಕ್ಕೆ ಕೆಲಸ ಮಾಡುತ್ತಿದ್ದು, ಫೆ. 27ರಿಂದ ಜೂ. 17ರ ವರೆಗಿನ ಸೆಮಿಸ್ಟರ್‌ನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಕೆಲಸ ಮಾಡಿದ್ದು, ಸೆಮಿಸ್ಟರ್ ಮುಗಿದು ತಿಂಗಳಾದರೂ ವೇತನ ಪಾವತಿಯಾಗಿಲ್ಲ. ಈ ಬಗ್ಗೆ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್ ಅವರನ್ನು ಭೇಟಿ ಮಾಡಿ, ಕಷ್ಟವನ್ನು ವಿವರಿಸಲಾಗಿದೆ. ಆದರೂ ಇದು ವರೆಗೆ ವೇತನ ಪಾವತಿಸಿಲ್ಲ ಎಂದರು.
14 ವರ್ಷಗಳಲ್ಲಿ ಒಂದು ಬಾರಿ ಮಾತ್ರ ವೇತನ ಪರಿಷ್ಕರಣೆಯಾಗಿದೆ. ರಾಜ್ಯದಲ್ಲಿ 89 ಸರಕಾರಿ ಪಾಲಿಟೆಕ್ನಿಕ್ ಹಾಗೂ 13 ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸುಮಾರು 1,200 ಅರೆಕಾಲಿಕ ಉಪನ್ಯಾಸಕರು ಕೆಲಸ ಮಾಡುತ್ತಿದ್ದು, ಖಾಯಂ ಹುದ್ದೆಯಲ್ಲಿ ಬೋಧನೆ ಮಾಡುವ ಉಪನ್ಯಾಸಕರ ಕಾರ್ಯಭಾರವನ್ನೂ ಹೊರುವ ಪರಿಸ್ಥಿತಿ ಇದೆ. ಆದರೆ ಕಾಲೇಜು ಶಿಕ್ಷಣ ಇಲಾಖೆಯಡಿ ಬರುವ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಶಿಕ್ಷಕರಿಗೆ ನೀಡುವಷ್ಟು ಸೌಲಭ್ಯವೂ ನಮಗೆ ಸಿಗುತ್ತಿಲ್ಲ.
ಯಾವುದೇ ಸೇವಾ ಭದ್ರತೆ ಇಲ್ಲದೆ ಕೆಲಸ ಮಾಡುವಂತಾಗಿದೆ. ಆದ್ದರಿಂದ ಮಾಸಿಕ 25,000 ರೂ. ವೇತನ, ಸೇವಾ ಭದ್ರತೆ, ಪಿಎಫ್, ಇಎಸ್‌ಐ, ರಜಾ ಸೌಲಭ್ಯ, ಉನ್ನತ ಶಿಕ್ಷಣ ಪಡೆಯಲು ರಜೆ ಮತ್ತು ವೇತನ ಸೌಲಭ್ಯ, ಐಡಿ ಕಾರ್ಡ್, ಸೇವಾ ಪ್ರಮಾಣ ಪತ್ರ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ವಿವಿಧ ಸರಕಾರಿ ಪಾಲಿಟೆಕ್ನಿಕ್‌ಗಳ ಅರೆಕಾಲಿಕ ಉಪನ್ಯಾಸಕರಾದ ವಿನಯ ಕುಮಾರ್, ಸಹನಾ, ಶಾಂತಾ, ಸಂಧ್ಯಾ, ನಯನಾ, ಮಮತಾ ಉಪಸ್ಥಿತರಿದ್ದರು.