Advertisement

ವೇತನವಿಲ್ಲದೇ ಕೆಲಸ ಬಿಟ್ಟ ನೌಕರರು!

03:25 PM Dec 26, 2020 | Adarsha |

ಗಂಗಾವತಿ: ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸರ್ಕಾರದ ನಿರ್ಲಕ್ಷ್ಯ ದಿಂದಾಗಿ ಕಳೆದೆರಡು ವರ್ಷಗಳಿಂದ ಅನುದಾನದ ಕೊರತೆಯ ಪರಿಣಾಮ ವಿವಿಯ ಸಂಶೋಧನಾ ವಿದ್ಯಾರ್ಥಿಗಳು ಫೆಲೋಶಿಫ್‌ ಇಲ್ಲದೆ, ಗುತ್ತಿಗೆ ನೌಕರರು ವೇತನವಿಲ್ಲದೆ ಕೆಲಸ ಬಿಟ್ಟು ತಮ್ಮ ಊರುಗಳಿಗೆ ವಲಸೆ ಹೋಗಿದ್ದಾರೆ.

Advertisement

ಕಳೆದೆರಡು ವರ್ಷಗಳಿಂದ ವಿವಿಯ ಮೂಲ ಉದ್ದೇಶವಾಗಿರುವ ಸಂಶೋಧನೆ ಮತ್ತು ಪುಸ್ತಕ ಪ್ರಸಾರದ ಕಾರ್ಯ ಸ್ಥಗಿತವಾಗಿದೆ. ಈಗಾಗಲೇ ವಿವಿಯ ಹಾಲಿ ಮತ್ತು ಮಾಜಿ ವಿದ್ಯಾರ್ಥಿಗಳು, ಕನ್ನಡದ ವಿದ್ವಾಂಸರು, ಲೇಖಕರು ಅನುದಾನದ ಕೊರತೆ ಕುರಿತು ಹೋರಾಟದ ಹೇಳಿಕೆ ಮೂಲಕ ಸರ್ಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಕನ್ನಡ ನಾಡು-ನುಡಿ, ಭಾಷೆ, ಸಂಸ್ಕೃತಿ ಜನಜೀವನದ ಬದುಕು ಕುರಿತು ನಿರಂತರ ಅಧ್ಯಯನ, ಸಂಶೋಧನೆ ಮತ್ತು ಕನ್ನಡ ಪುಸ್ತಕಗಳ ಪ್ರಸಾರದ ಉದ್ದೇಶದಿಂದ ಹಂಪಿ ಕನ್ನಡ ವಿವಿ ಸ್ಥಾಪನೆಯಾಗಿದೆ. ಕಳೆದೆರಡು ವರ್ಷಗಳಿಂದ ಸಂಶೋಧನೆ, ಪುಸ್ತಕ ಪ್ರಸಾರ ನಿಂತು ಹೋಗಿದೆ. ವಿವಿಯಲ್ಲಿ ಶೇ.30ರಷ್ಟು ಹೊರಗುತ್ತಿಗೆ ನೌಕರರು ಕಾರ್ಯ ನಿರ್ವಹಿಸುತ್ತಿದ್ದು, ಅವರಿಗೆ ಕೋವಿಡ್ ಸೇರಿ ಇತರೆ ಸಂದರ್ಭದಲ್ಲಿ ಸರಿಯಾಗಿ ವೇತನ ಪಾವತಿಸದ ಕಾರಣ ಬಹುತೇಕರು ಕೆಲಸ ಬಿಟ್ಟು ಸ್ವಂತ ಊರಿಗೆ ತೆರಳಿ ಕೃಷಿ ಮಾಡಿ ಬದುಕು ನಡೆಸುತ್ತಿದ್ದಾರೆ.

ಸಂಶೋಧನಾ (ಪಿಎಚ್‌ಡಿ) ವಿದ್ಯಾರ್ಥಿಗಳಿಗೆ ಫೆಲೋಶಿಪ್‌ ಕೊಡಲು ವಿವಿಯಲ್ಲಿ ಹಣವಿಲ್ಲ. ಇನ್ನು ಪ್ರಾಧ್ಯಾಪಕರು, ಉಪನ್ಯಾಸಕರು ಹಾಗೂ ಕಾಯಂ ನೌಕರರಿಗೆ ತಡವಾಗಿ ವೇತನ ಪಾವತಿಯಾಗುತ್ತಿದೆ.

ಇದನ್ನೂ ಓದಿ:ಸರಳ ವ್ಯಕ್ತಿತ್ವದ ಸಜ್ಜನ ವ್ಯಕ್ತಿ ನಾ.ಸು. ಭರತನಹಳ್ಳಿ

Advertisement

ಸ್ವಂತ ಸಂಪನ್ಮೂಲವಿಲ್ಲ

ಹಂಪಿ ಕನ್ನಡ ವಿವಿ ಕಳೆದೆರಡು ವರ್ಷಗಳಿಂದ ಅನುದಾನದ ಕೊರತೆಯಿಂದ ಉದ್ದೇಶಿತ ಕೆಲಸ ಕಾರ್ಯಗಳನ್ನು ಮಾಡಲು ಆಗುತ್ತಿಲ್ಲ. ವಿವಿಯ ಮೂಲ ಉದ್ದೇಶ ಕನ್ನಡ ನಾಡಿನ ಜನರ ಜೀವನ ಭಾಷೆ ಬದಲಾವಣೆ ಕುರಿತು ನಿರಂತರ ಸಂಶೋಧನೆ ಹಣಕಾಸಿನ ತೊಂದರೆಯಿಂದ ಈ ಕಾರ್ಯಗಳು ಆಗುತ್ತಿಲ್ಲ. ಬೇರೆ ವಿವಿಗಳಲ್ಲಿ ಪ್ರವೇಶ ಪರೀಕ್ಷೆ ಸೇರಿದಂತೆ ವಿದ್ಯಾರ್ಥಿಗಳಿಂದ ಶುಲ್ಕದ ರೂಪದಲ್ಲಿ ಸಂಗ್ರಹವಾಗುವ ಹಣ ಕೋಟ್ಯಂತರ ರೂ. ಗಳಾಗುತ್ತದೆ. ಕನ್ನಡ ವಿವಿಗೆ ಸ್ವಂತ ಸಂಪನ್ಮೂಲವಿಲ್ಲ. ಸರ್ಕಾರವೇ ಪ್ರತಿವರ್ಷ ಬಜೆಟ್‌ನಲ್ಲಿ ಹಣ ನಿಗದಿ ಮಾಡಬೇಕಿದ್ದು, ಕಳೆದ ಎರಡು ವರ್ಷಗಳಿಂದ ಸರ್ಕಾರದ ನಿರ್ಲಕ್ಷ್ಯದ ಫಲವಾಗಿ ಕನ್ನಡ ವಿವಿ ಸೊರಗಿದೆ.

ಆರ್ಥಿಕ ಮುಗ್ಗಟ್ಟಿನಿಂದ ವಿವಿಯ ನಿತ್ಯ ಕಾರ್ಯಗಳಿಗೆ ತೊಂದರೆಯಾಗಿದೆ. ಸಂಶೋಧನಾ ವಿದ್ಯಾರ್ಥಿಗಳ ಫೆಲೋಶೀಪ್‌ ಸೇರಿ 140 ಜನ ಗುತ್ತಿಗೆ ನೌಕರರ ವೇತನ ನೀಡಿಲ್ಲ. ಪುಸ್ತಕ ಪ್ರಕಟಣೆ ನಿಲುಗಡೆಯಾಗಿದ್ದು, ಸರ್ಕಾರಕ್ಕೆ ವಿವಿ ಆವರಣದಲ್ಲಿ ಅಭಿವೃದ್ಧಿ ಮತ್ತು ಸಂಶೋಧನಾ ಪುಸ್ತಕಗಳ ಪ್ರಕಟಣೆಗಾಗಿ ಸುಮಾರು 25 ಕೋಟಿ ರೂ.ಗಳ ಅನುದಾನ ಮಂಜೂರು ಮಾಡುವಂತೆ ಪತ್ರ ಬರೆಯಲಾಗಿದೆ. ಉನ್ನತ ಶಿಕ್ಷಣ ಸಚಿವ ಡಾ| ಅಶ್ವಥನಾರಾಯಣ ಸ್ಪಂದಿಸಿ ಹಣಕಾಸು ಇಲಾಖೆಗೆ ಶಿಫಾರಸು ಮಾಡಿದ್ದಾರೆ. ಶೀಘ್ರ ಅನುದಾನ ಬರುವ ಭರವಸೆ ಇದೆ.

ಸ.ಚೀ. ರಮೇಶ, ಹಂಪಿ ಕನ್ನಡ ವಿವಿ ಕುಲಪತಿ

ಕೆ. ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next