Advertisement
ಕಂದಾಯ ಸಚಿವರು, ಭೂ ದಾಖಲೆಗಳ ಆಯುಕ್ತರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಉಡುಪಿ ಜಿಲ್ಲೆಯ 41 ಮಂದಿ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳ ಬಾಂದು ಜವಾನರದ್ದೂ ಇದೇ ಪರಿಸ್ಥಿತಿ. ಭೂ ಮಾಪಕರೊಂದಿಗೆ ಸರ್ವೇ ಕಾರ್ಯಕ್ಕೆ ತೆರಳುವ ಬಾಂದು ಜವಾನರು ಅಳತೆಗೆ ಚೈನ್ ಹಿಡಿಯುವ ಕೆಲಸ ಮಾಡುತ್ತಾರೆ. ಇದರ ಜತೆಗೆ ಸರ್ವೇ ಸಂಬಂಧ ಅರ್ಜಿದಾರರಿಗೆ ಮತ್ತು ಸಂಬಂಧಪಟ್ಟವರಿಗೆ ತಿಳಿವಳಿಕೆ ಪತ್ರ ನೀಡುವುದು ಸಹಿತ ಇತರ ಕಚೇರಿ ಕೆಲಸಗಳನ್ನೂ ಮಾಡುತ್ತಾರೆ. ಬಾಂದು ಜವಾನರನ್ನು ಗುತ್ತಿಗೆ ಕಂಪೆನಿಗಳಿಂದ ನೇಮಿಸಲಾಗುತ್ತದೆ. ಒಪ್ಪಂದದ ಅವಧಿ ಇರುವ ವರೆಗೆ ಅವರು ನಿಗದಿತ ಜಿಲ್ಲೆಗಳಲ್ಲಿ ಭೂ ದಾಖಲೆಗಳ ಉಪ ನಿರ್ದೇಶಕರ ಅಧೀನದಲ್ಲಿ ತಾಲೂಕುಗಳಲ್ಲಿರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ.
ಭೂಮಾಪನ ಇಲಾಖೆ ಆಯುಕ್ತಾಲಯದಿಂದ ಗುತ್ತಿಗೆದಾರ ಏಜಿನ್ಸಿಗಳಿಗೆ ಬಾಂದು ಜವಾನರ ವೇತನಾ ನುದಾನ ಬಿಡುಗಡೆಯಾಗುತ್ತಿತ್ತು. ಸಂಸ್ಥೆ ಯವರು ಇಎಸ್‌ಐ/ಪಿಎಫ್ ಹಾಗೂ ತಮ್ಮ ನಿರ್ವಹಣಾ ಶುಲ್ಕವನ್ನು ಕಡಿತ ಮಾಡಿ ವೇತನ ನೀಡುತ್ತಿದ್ದರು. ಆದರೆ ಈ ಸಂಸ್ಥೆಗಳು ವೇತನ ಬಟವಾಡೆ ಮಾಡುವಲ್ಲಿ ಅಸಮರ್ಪಕತೆ ತೋರಿದ್ದರ ಜತೆಗೆ ನಿಯಮಿತವಾಗಿ ನೀಡುತ್ತಿರಲಿಲ್ಲ. ಎಂಟು ತಿಂಗಳಿಂದ ಬಾಕಿ ಇರಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಆಯುಕ್ತಾಲಯವು, ಇಎಸ್‌ಐ/ಪಿಎಫ್ ಮೊತ್ತ ಮತ್ತು ಶೇ. 10 ನಿರ್ವಹಣಾ ಶುಲ್ಕವನ್ನು ಬಾಂದು ಜವಾನರ ವೇತನದಿಂದ ಕಡಿತಗೊಳಿಸಿ ಅದನ್ನು ಏಜೆನ್ಸಿಗೆ ಪಾವತಿ ಮಾಡಿ, ವೇತನವನ್ನು ನೇರವಾಗಿ ಬಾಂದು ಜವಾನರ ಖಾತೆಗೆ ಸಂದಾಯ ಮಾಡಲು ನಿರ್ಧರಿಸಿತು. ಈ ಕ್ರಮ ಡಿಸೆಂಬರ್‌ನಿಂದ ಅನುಷ್ಠಾನವಾಗಿದ್ದರೂ, 2 ತಿಂಗಳ ವೇತನ ಪಾವತಿಯಾಗಿಲ್ಲ. ಹಾಗಾಗಿ ಒಟ್ಟು 10 ತಿಂಗಳಿಂದ ಬಾಂದು ಜವಾನರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
Related Articles
ಸರಕಾರದಿಂದ ಹಣ ಬಂದಿಲ್ಲ ಎಂಬ ಕಾರಣಕ್ಕೆ ಗುತ್ತಿಗೆದಾರ ಸಂಸ್ಥೆಯು ಬಾಂದು ಜವಾನರ ಇಎಸ್‌ಐ, ಪಿಎಫ್ ನಿಯಮಿತವಾಗಿ ಪಾವತಿಸುತ್ತಿಲ್ಲ. ಇದರಿಂದ ಕ್ಲೇಮಿಗೆ ಸಮಸ್ಯೆಯಾಗುತ್ತಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ಓರ್ವ ಬಾಂದು ಜವಾನ ಸರ್ವೇ ವೇಳೆ ಬಿದ್ದು ಮೊಣಕಾಲು ಮುರಿದುಕೊಂಡಿದ್ದರು. ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು. ಇಎಸ್‌ಐ ಪಾವತಿ ಸರಿಯಾಗಿ ಇಲ್ಲದ ಕಾರಣ ಕ್ಲೇಮಿಗೆ ತೊಂದರೆಯಾಗಿ ಏಜೆನ್ಸಿಗೆ ತೆರಳಿ ಪಾವತಿ ಮಾಡಿಸ ಬೇಕಾಯಿತು.
Advertisement
ಬಾಂದು ಜವಾನರ ಹಾಜರಾತಿ ಅಪ್ಡೆಟ್ ಮಾಡಿ ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ. ವೇತನ ಬಾಕಿಯ ಮಾಹಿತಿಯನ್ನೂ ರವಾನಿಸಲಾಗಿದೆ. ಶೀಘ್ರ ಸಮಸ್ಯೆ ಬಗೆಹರಿಯಲಿದೆ. ಕುಸುಮಾಧರ್, ಡಿಡಿಎಲ್‌ಆರ್, ಉಡುಪಿ ಜಿಲ್ಲೆ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ