Advertisement

4 ತಿಂಗಳುಗಳಿಂದ ವೇತನ ಬಾಕಿ: “108 ಆರೋಗ್ಯ ಕವಚ’ ಸಿಬಂದಿಯಿಂದ ಮುಷ್ಕರದ ಎಚ್ಚರಿಕೆ

12:24 AM Mar 23, 2024 | Team Udayavani |

ಮಂಗಳೂರು: ಕಳೆದ ನಾಲ್ಕು ತಿಂಗಳಿಂದ ವೇತನ ಪಾವತಿಯಾಗದೆ “ಸುವರ್ಣ ಕರ್ನಾಟಕ ಆರೋಗ್ಯ ಕವಚ (108)’ ನೌಕರರು ಸಂಕಷ್ಟಕ್ಕೆ ಸಿಲುಕಿದ್ದು ಕೂಡಲೇ ವೇತನ ಪಾವತಿ ಮಾಡಬೇಕು ಎಂದು 108 ನೌಕರರ ಸಂಘ ಒತ್ತಾಯಿಸಿದೆ.

Advertisement

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ನರಸಿಂಹ ನಾಯಕ್‌ ಅವರು, ವೇತನ ವಿಚಾರವಾಗಿ “108 ಆರೋಗ್ಯ ಕವಚ’ದ ಸಿಬಂದಿ ನಿರಂತರವಾಗಿ ತೊಂದರೆ ಅನುಭವಿಸುತ್ತ ಬಂದಿದ್ದಾರೆ. ವೇತನ ಬಾಕಿ ಜತೆಗೆ ವೇತನ ಕಡಿತದಿಂದಲೂ ಸಮಸ್ಯೆಯಾಗಿದೆ. ಸರಕಾರ ಮತ್ತು ಜಿವಿಕೆ ಸಂಸ್ಥೆಯ ಒಡಂಬಡಿಕೆ ಪ್ರಕಾರ ಆಗಬೇಕಾಗಿದ್ದ ವಾರ್ಷಿಕ ವೇತನ ಹೆಚ್ಚಳವೂ ಆಗಿಲ್ಲ. ಸಿಬಂದಿಗೆ ಕನಿಷ್ಠ ವೇತನ 36,008 ರೂ. ನಿಗದಿ ಮಾಡಲಾಗಿತ್ತು.

ಈ ವೇತನವನ್ನು ಸುಮಾರು 6 ತಿಂಗಳ ಕಾಲ ಮಾತ್ರ ನೀಡಿ ಅನಂತರ ಏಕಾಏಕಿ 6,000 ರೂ. ಕಡಿತಗೊಳಿಸಲಾಯಿತು. ಇದೀಗ ಮತ್ತಷ್ಟು ವೇತನ ಕಡಿಮೆ ಮಾಡುವ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಿಬಂದಿ ಆತಂಕಿತರಾಗಿದ್ದಾರೆ ಎಂದರು.

ಸೇವೆ ಸ್ಥಗಿತ ಎಚ್ಚರಿಕೆ
ಸರಕಾರ 108 ಸಿಬಂದಿಯ ಸಮಸ್ಯೆಯನ್ನು 10 ದಿನಗಳೊಳಗೆ ಬಗೆಹರಿಸಬೇಕು. ಇಲ್ಲವಾದರೆ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ನರಸಿಂಹ ನಾಯಕ್‌ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಕೇಶವ ಕೆ., ಜಿಲ್ಲಾ ಖಜಾಂಚಿ ಮನೋಜ್‌ ಕುಮಾರ್‌ ಉಪಸ್ಥಿತರಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next