ನವದೆಹಲಿ: ಭಾರತದ ವಿವಿಧ ಕಂಪನಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳು ಮುಂದಿನ ಆರ್ಥಿಕ ವರ್ಷದಲ್ಲಿ ಶೇ. 8ರಷ್ಟು ವೇತನ ಹೆಚ್ಚಳವಾಗಲಿದೆ ಎಂದು ವಿವಿಧ ಕಂಪನಿಗಳಲ್ಲಿ ನಡೆಸಲಾಗಿರುವ ಸಮೀಕ್ಷೆ ಹೇಳಿದೆ. ಮೈಕಲ್ ಪೇಜ್ ಹಾಗೂ ಅಯೊನ್ ಪಿಎಸ್‌ಸಿ ಕಂಪನಿಗಳ ಜಂಟಿ ಸಮೀಕ್ಷಾ ವರದಿಯಲ್ಲಿ ಈ ವಿಚಾರ ಉಲ್ಲೇಖೀಸಲಾಗಿದೆ.
ಕೊರೊನಾ ಲಾಕ್‌ಡೌನ್ ಮುಗಿದು, ದೇಶದ ಎಲ್ಲಾ ಆರ್ಥಿಕ ವ್ಯವಸ್ಥೆಗಳು ಸರಿದಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷದಲ್ಲಿ ಉದ್ಯೋಗಿಗಳು ವೇತನ ಹೆಚ್ಚಳ ನಿರೀಕ್ಷಿಸಬಹುದು ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
2022ರ ಏ. 1ರಿಂದ ಆರಂಭವಾಗಲಿರುವ ಹೊಸ ಆರ್ಥಿಕ ವರ್ಷದಲ್ಲಿ ಶೇ. 6ರಿಂದ 8ರಷ್ಟು ವೇತನ ಹೆಚ್ಚಳವಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ವಿವಿಧ ಕಂಪನಿಗಳ ಆಡಳಿತ ಮಂಡಳಿಗಳು ತಮ್ಮ ಉದ್ಯೋಗಿಗಳಿಗೆ ಕನಿಷ್ಠ ಶೇ. 8ರಷ್ಟು ಹೆಚ್ಚುವರಿ ವೇತನ ಕೊಡುವ ಮನಸ್ಸು ಮಾಡಿವೆ.
ಇದನ್ನೂ ಓದಿ :ಬ್ಯಾಂಕ್ ನಿರ್ದೇಶಕರ ಸಾಲ ಮಿತಿ 5 ಕೋಟಿಗೆ ಏರಿಕೆ : ಆರ್ ಬಿಐ ಆದೇಶ
ಇ-ಕಾಮರ್ಸ್, ಫಾರ್ಮಾಸುಟಿಕಲ್ಸ್, ಮಾಹಿತಿ ತಂತ್ರಜ್ಞಾನ ಹಾಗೂ ಆರ್ಥಿಕ ಸೇವೆಗಳನ್ನು ನೀಡುವ ಕಂಪನಿಗಳಲ್ಲಿ ಉತ್ತಮ ವೇತನ ಹೆಚ್ಚಳ ನಿರೀಕ್ಷಿಸಬಹುದಾಗಿದೆ. ಚಿಲ್ಲರೆ ಮಾರಾಟ, ಏರೋಸ್ಪೇಸ್, ಹೋಟೆಲ್ ಹಾಗೂ ಆತಿಥ್ಯ ಉದ್ಯಮಗಳಲ್ಲೂ ಉತ್ತಮ ಮಟ್ಟದ ವೇತನ ಹೆಚ್ಚಳವಾಗಬಹುದು ಎಂದು ಸಮೀಕ್ಷೆ ತಿಳಿಸಿದೆ.