ಜಾಗಿಂಗ್‌ಗಾಗಿ ಗೇಟಿನ ಬಳಿ ಬಂದಾಗ ಪೇಪರ್ ಹಾಕುವ ಹುಡುಗ ಬರುವುದು ಕಾಣಿಸಿತು. ಖುಷಿ ಖುಷಿಯಾಗಿದ್ದ. ‘ಏನು ವಿಶೇಷ’ ಎಂದು ಕೇಳಿದೆ. ನಿನ್ನೆ ಸೆಕೆಂಡ್ ಪಿಯು ಫಲಿತಾಂಶ ಬಂತಲ್ಲ? ನಂಗೆ ಶೇ.88 ಅಂಕ ಬಂದಿದೆ ಎಂದ.
‘ಹೋ ಕಂಗ್ರಾಟ್ಸ್’ ಎಂದು ಕೈ ಕುಲುಕಿದೆ. ಥ್ಯಾಂಕ್ಯೂ ಅಣ್ಣ. ಆಮೇಲೆ ಸಿಗ್ತೀನೆ. ಇನ್ನೂ ಕೆಲವು ಮನೆಗೆ ಪೇಪರ್ ಹಾಕುವುದು ಬಾಕಿ ಇದೆ’ ಎಂದು ಸೈಕಲ್ ಏರಿ ಹೊರಟ.
ಇಡೀ ಸಂಸಾರದ ನೊಗ ಹೊತ್ತು ಬೆಳಗ್ಗೆ, ರಾತ್ರಿ ಕೆಲಸ ಮಾಡುತ್ತಾ ಓದುವ ಹುಡುಗನದ್ದು ಅತ್ಯುತ್ತಮ ಸಾಧನೆ ಎನಿಸಿತು. ಹೌದು, ಆತನದ್ದು ಹೋರಾಟದ ಬದುಕು. ಅವನ ತಂದೆ 3 ವರ್ಷದ ಹಿಂದೆ ನಿಧನರಾದಾಗ ಅವನು ಒಂಬತ್ತನೇ ತರಗತಿಯಲ್ಲಿದ್ದ. 10 ಸೆಂಟ್ಸ್ ಹಿತ್ತಿಲು, ಚಿಕ್ಕ ಮನೆ ಅಷ್ಟೇ ಅವರಿಗಿದ್ದ ಆಸ್ತಿ. ಆದರೂ ಅವನು ಧೃತಿಗೆಡಲಿಲ್ಲ. ತಾನೇ ಮುಂದೆ ನಿಂತು ಮನೆಯ ಜವಾಬ್ದಾರಿ ಹೊತ್ತುಕೊಂಡ. ಅಕ್ಕ, ತಮ್ಮ ಜತೆಗೆ ತನ್ನ ಓದಿಗೆ ಕೆಲಸ ನಿರ್ವಹಿಸಲು ಮುಂದಾದ. ಜತೆಗೆ ತಾಯಿ ಬೀಡಿ ಕಟ್ಟಿ ಅವನ ನೆರವಿಗೆ ನಿಂತಳು. ಅಂದಿನಿಂದ ಅವನ ದಿನಚರಿಯೇ ಬದಲಾಗಿತ್ತು. ಮುಂಜಾನೆ 4 ಗಂಟೆಗೇ ಆತ ಎದ್ದೇಳುತ್ತಿದ್ದ. ಸ್ನಾನ ಮಾಡಿ ಸೈಕಲ್ ಏರಿ ಹೊರಟನೆಂದರೆ ಅಂದಿನ ಚಟುವಟಿಕೆ ಆರಂಭವಾದಂತೆ. 7 ಗಂಟೆವರೆಗೆ ಪೇಪರ್ ಹಾಕುತ್ತಿದ್ದ. ಮತ್ತೆ ಮನೆಗೆ ಬಂದು ಹೊಟೇಲ್ ಒಂದಕ್ಕೆ ಹೋಗುತ್ತಿದ್ದ. ಅಲ್ಲಿ ಅದು- ಇದು ಕೆಲಸ ಮಾಡಿ ಅಲ್ಲೇ ತಿಂಡಿ ತಿಂದು ಕಾಲೇಜಿಗೆ ತೆರಳುತ್ತಿದ್ದ. ಮತ್ತೆ ರಾತ್ರಿ 9.30ರಿಂದ ಬಸ್ ತೊಳೆಯುವ ಕೆಲಸವಿರುತ್ತಿತ್ತು. ಇಷ್ಟಾಗಿಯೂ ತರಗತಿಯಲ್ಲಿ ಶ್ರದ್ಧೆಯಿಂದ ಪಾಠ ಕೇಳುತ್ತಿದ್ದ. ಬಿಡುವಿನ ಸಮಯದಲ್ಲಿ ಏಕಾಗ್ರತೆಯಿಂದ ಅಧ್ಯಯನ ನಡೆಸುತ್ತಿದ್ದ. ಹೀಗೆ ಆತ ಎಸೆಸೆಲ್ಸಿಯಲ್ಲೂ ಉತ್ತಮ ಅಂಕ ಗಳಿಸಿದ್ದ ಪಿಯುನಲ್ಲೂ ಸಾಧನೆ ತೋರಿದ್ದ. ಮುಂದೆ ಲೆಕ್ಚರರ್ ಆಗಿ ಓದಲು ಕಷ್ಟ ಪಡುವ ವಿದ್ಯಾರ್ಥಿಗಳಿಗೆ ನೆರವಾಗಬೇಕು ಎನ್ನುವ ಕನಸು ಆತನದ್ದು.
ಇಷ್ಟೆಲ್ಲ ಕಷ್ಟಪಡುವ ಆತ ಒಂದು ದಿನವಾದರೂ ಗೊಣಗಿದ್ದಾಗಲೀ, ಸಾಕಪ್ಪ ಜೀವನ ಎಂದು ಹತಾಶೆ ಭಾವ ತೋರಿದ್ದಾಗಲಿ ನಾನು ಕಂಡಿಲ್ಲ. ಹೌದು, ಕೆಲವರೇ ಹಾಗೆ. ತಾವು ಬೇಗೆಯಲ್ಲಿ ಬೇಯುತ್ತಿದ್ದರೂ ತಮ್ಮ ಬಳಿಗೆ ಬರುವವರಿಗೆ ನ ಕೈ ತುಂಬಾ ಸಿಹಿ ಹಣ್ಣು ಕೊಡುವಂತಹವರು.
-ರಮೇಶ್ ಬಳ್ಳಮೂಲೆ