ದುನಿಯಾ ವಿಜಯ್ ನಟನೆ, ನಿರ್ದೇಶನದ “ಸಲಗ’ ಚಿತ್ರ ಬಿಡುಗಡೆಗ ಅಣಿಯಾಗಿದೆ. ಎಲ್ಲವ ಅಂದುಕೊಂಡಂತೆ ಆದರೆ, ಚಿತ್ರ ಆಗಸ್ಟ್ 20ರಂದು ಬಿಡುಗಡೆಯಾಲಿದೆ. ಮೊದಲ ಹಂತವಾಗಿ ಚಿತ್ರ ತಂಡ ಪ್ರಮೋಶನ್ ಶುರುವಿಟ್ಟುಕೊಂಡಿದ್ದು, ಈಗ ಚಿತ್ರದ ಪ್ರಮೋಶನಲ್ ಸಾಂಗ್ ಬಿಡುಗಡೆಯಾಗಿದೆ.
ಚರಣ್ ರಾಜ್ ಸಂಗೀತದಲ್ಲಿ ಮೂಡಿಬಂದಿರುವ ಈ ಹಾಡು ವಿಭಿನ್ನವಾಗಿದ್ದು, ಚಿತ್ರದ ಕಥಾಹಂದರದ ಸುತ್ತವೇ ಸಾಗುತ್ತದೆ. ಬಿಡುಗಡೆಯಾಗಿರುವ ಈ ಹಾಡಿಗೆ ಮಾಸ್ ಪ್ರಿಯರು ಫಿದಾ ಆಗಿದ್ದಾರೆ. ರೆಗ್ಯುಲರ್ ಕಾನ್ಸೆಪ್ಟ್ ಬಿಟ್ಟು, ಈ ಹಾಡನ್ನು ವಿಭಿನ್ನವಾಗಿ ಚಿತ್ರಿಸಲಾಗಿದೆ.
ಅಂದಹಾಗೆ, ಇದು ವಿಜಯ್ ನಿರ್ದೇಶನದ ಚೊಚ್ಚಲ ಸಿನಿಮಾ. ಸಹಜವಾಗಿಯೇ ಮೊದಲ ಸಲ ನಿರ್ದೇಶನ ಮಾಡಿರುವುದರಿಂದ ಎಲ್ಲರಿಗೂ “ಸಲಗ ‘ ಮೇಲೆ ಕಣ್ಣು ಇಟ್ಟಿದ್ದಾರೆ. ಎಲ್ಲರೂ ಕೂಡ ವಿಜಯ್ ಏನು ಮಾಡಿರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಆ ಬಗ್ಗೆ ಹೇಳುವ ವಿಜಯ್, “ನನಗೆ ಗೊತ್ತಿದೆ. ಬಹುತೇಕರು ನನ್ನ ಮೇಲೆ ಗಮನ ಇರಿಸಿದ್ದಾರೆ. ಯಾಕೆಂದರೆ, ವಿಜಯ್ ಮೊದಲ ಸಲ ನಿರ್ದೇಶನ ಮಾಡಿದ್ದಾನೆ. ಹೇಗೆಲ್ಲಾ ಮಾಡಿರಬಹುದು ಎಂಬ ನಿರೀಕ್ಷೆ ಇದೆ. ಆ ನಿರೀಕ್ಷೆಗೆ ಕಾರಣ, ಈಗಾಗಲೇ ಸದ್ದು ಮಾಡಿರುವ ಹಾಡು, ಟೀಸರ್, ಪೋಸ್ಟರ್‌ಗಳು. ಹಾಗಾಗಿ ನಿರ್ದೇಶಕರಿಂದ ಹಿಡಿದು ನಟರು, ನಿರ್ಮಾಪಕರವರೆಗೂ “ಸಲಗ ‘ನ ಬಗ್ಗೆ ಮಾತಾಡುವಂತಾಗಿದೆ. ನನಗಂತೂ ನನ್ನ ಕೆಲಸದ ಮೇಲೆ ವಿಶ್ವಾಸವಿದೆ. ಎಲ್ಲರಿಗೂ ನನ್ನ ಕೆಲಸ ಹಿಡಿಸುತ್ತದೆ ಎಂಬ ನಂಬಿಕೆಯಲ್ಲೇ ಇದ್ದೇನೆ ‘ ಎನ್ನುತ್ತಾರೆ ಅವರು.
ಕೆ.ಪಿ.ಶ್ರೀಕಾಂತ್ ನಿರ್ಮಾಣದ ಈ ಚಿತ್ರದಲ್ಲಿ ಧನಂಜಯ್ ಪ್ರಮುಖ ಪಾತ್ರ ಮಾಡಿ ದ್ದಾರೆ. ಸಂಜನಾ ಆನಂದ್ ಈ ಚಿತ್ರದ ನಾಯಕಿ. ಸದ್ಯ ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರದ ಚಿತ್ರಮಂದಿರಗಳ ಹೌಸ್‌ಫುಲ್ ಅನುಮತಿಗಾಗಿ ಎದುರು ನೋಡುತ್ತಿದೆ.
ರವಿಪ್ರಕಾಶ್ ರೈ