ನಟ ದುನಿಯಾ ವಿಜಯ್ ಈಗ ನಟನೆಯಿಂದ ನಿರ್ದೇಶನದತ್ತ ಮುಖ ಮಾಡುತ್ತಿದ್ದಾರೆ. ವಿಜಯ್ ಸದ್ಯ “ಸಲಗ’ ಚಿತ್ರವನ್ನು ನಿರ್ದೇಶಿಸಲು ತೆರೆಮರೆಯಲ್ಲಿ ತಯಾರಿ ಶುರು ಮಾಡಿದ್ದಾರೆ. ಕೆ.ಪಿ.ಶ್ರೀಕಾಂತ್ ಈ ಚಿತ್ರದ ನಿರ್ಮಾಪಕರು ಎನ್ನುವ ಸುದ್ದಿಯನ್ನು ಕೆಲ ದಿನಗಳ ಹಿಂದೆ ಇದೇ ಬಾಲ್ಕನಿಯಲ್ಲಿ ನೀವು ನೀಡಿರುತ್ತೀರಿ. ಈಗ ದುನಿಯಾ ವಿಜಯ್ ನಿರ್ದೇಶಿಸುತ್ತಿರುವ “ಸಲಗ’ ಚಿತ್ರದ ಕಡೆಯಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಅದೇನಪ್ಪಾ ಅಂದ್ರೆ, ವಿಜಯ್ ತಮ್ಮ “ಸಲಗ’ ಚಿತ್ರದ ಬಹುತೇಕ ಪಾತ್ರಗಳಿಗೆ ರಂಗಭೂಮಿ ಹಿನ್ನೆಲೆಯ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಚಿತ್ರದಲ್ಲಿ ಬರುವ ಬಹುತೇಕ ಪಾತ್ರಗಳಿಗೆ ಹದಿನಾರು ವರ್ಷ ಮೇಲ್ಪಟ್ಟ, ರಂಗಭೂಮಿಯಲ್ಲಿ ಅಭಿನಯದ ಅನುಭವವಿರುವ, ರಂಗ ಹಿನ್ನೆಲೆಯ ಪ್ರತಿಭೆಗಳನ್ನು ವಿಜಯ್ ತಮ್ಮ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯಿಸಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಮಾತನಾಡುವ ವಿಜಯ್, “ರಂಗಭೂಮಿ ಹಿನ್ನೆಲೆಯ ಕಲಾವಿದರು ತಮ್ಮ ಪಾತ್ರಗಳನ್ನು ಬಹುಬೇಗ ಅರ್ಥ ಮಾಡಿಕೊಂಡು, ಅದಕ್ಕೆ ಬೇಕಂತೆ ತಯಾರಾಗುವ ಅನುಭವ ಮತ್ತು ಪ್ರೌಢಿಮೆ ಬೆಳೆಸಿಕೊಂಡಿರುತ್ತಾರೆ. ಅವರಿಗೆ ಸೆಟ್‌ನಲ್ಲಿ ಅಭಿನಯವನ್ನು ಹೇಳಿಕೊಡುವ ಅಗತ್ಯವಿರುವುದಿಲ್ಲ. ಅಲ್ಲದೆ ಹಲವು ವರ್ಷಗಳಿಂದ ರಂಗಭೂಮಿ ಯಲ್ಲಿ ಬದುಕು ನಡೆಸುತ್ತಿರುವ ಅನೇಕ ಕಲಾವಿದರನ್ನು ಚಿತ್ರರಂಗಕ್ಕೂ ಪರಿಚಯಿಸಿ ದಂತೆ ಆಗುತ್ತದೆ. ಅವರಿಗೂ ಹೊಸ ಅವಕಾಶಗಳು ತೆರೆದುಕೊಳ್ಳುತ್ತದೆ’ ಎನ್ನುತ್ತಾರೆ.
ಅಂದಹಾಗೆ, ಈಗಾಗಲೇ ವಿಜಯ್ “ಸಲಗ’ ಚಿತ್ರದಲ್ಲಿ ಬರುವ ಕೆಲ ಪಾತ್ರಗಳಿಗೆ ರಂಗ ಪ್ರತಿಭೆಗಳನ್ನು ಆಯ್ಕೆ ಮಾಡಿಕೊಂಡಿದ್ದು, ಉಳಿದ ಪಾತ್ರಗಳಿಗೆ ಆಯ್ಕೆ ಪ್ರಕ್ರಿಯೆ
ನಡೆಯುತ್ತಿದೆಯಂತೆ. ಇದರ ಜೊತೆಗೆ ಚಿತ್ರದ ಕೆಲ ಪಾತ್ರಗಳ ಫೋಟೋ ಶೂಟ್ ಕೂಡ ನಡೆಸಲಿರುವ ವಿಜಯ್, ಈ ತಿಂಗಳ ಕೊನೆಯೊಳಗೆ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರ ಬಳಗವನ್ನು ಫೈನಲ್ ಮಾಡಿಕೊಂಡು ಶೂಟಿಂಗ್‌ಗೆ ಹೊರಡುವ ಯೋಜನೆ ಹಾಕಿಕೊಂಡಿದ್ದಾರೆ. ಇನ್ನು “ಸಲಗ’ ಚಿತ್ರದಲ್ಲಿ ನಟ ಧನಂಜಯ್ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಹಾಡುಗಳಿಗೆ ಚರಣ್ ರಾಜ್ ಸಂಗೀತ ಸಂಯೋಜಿಸಲಿದ್ದಾರೆ.