Advertisement

ಎಲ್ಲ ಮೀನುಗಾರಿಕಾ ದೋಣಿಗಳ  ದಾಖಲೆ ಸಕ್ರಮಕ್ಕೆ  ಕ್ರಮ: ಪ್ರಮೋದ್‌

02:51 PM Apr 15, 2017 | |

ಮಲ್ಪೆ: ಮೀನುಗಾರಿಕಾ ದೋಣಿ ನಿರ್ಮಾಣಕ್ಕೆ ಅರ್ಜಿ ಹಾಕಿದ ಎಲ್ಲರಿಗೂ ಸಾಧ್ಯತಾ ಪತ್ರ ನೀಡುವ ಜೊತೆಗೆ ಕರ್ನಾಟಕದ ಎಲ್ಲ ಮೀನುಗಾರರ ದೋಣಿಗಳ ದಾಖಲೆಗಳನ್ನು ನೂರಕ್ಕೆ ನೂರು ಸಕ್ರಮಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದು ರಾಜ್ಯ ಮೀನುಗಾರಿಕಾ ಇಲಾಖೆ ಸಚಿವ ಪ್ರಮೋದ್‌ ಮಧ್ವರಾಜ್‌ ತಿಳಿಸಿದ್ದಾರೆ.

Advertisement

ಅವರು ಶುಕ್ರವಾರ ಮಲ್ಪೆ ಬಂದರಿ ನಲ್ಲಿ ನೂತನ ಮೀನುಗಾರಿಕಾ ಉಪ ನಿರ್ದೇಶಕರ ಕಚೇರಿ ಉದ್ಘಾಟಿಸಿ ಮಾತನಾಡಿದರು.ಕಾನೂನು ತೊಡುಕು ನಿವಾರಣೆ  ದೇಶದಲ್ಲಿ ಗುಜರಾತ್‌ ಬಿಟ್ಟರೆ ಅತೀ ಹೆಚ್ಚಿನ ಮೀನುಗಾರಿಕಾ ದೋಣಿ ಗಳಿರುವುದು ಮಲ್ಪೆಯಲ್ಲಿ. ಎಲ್ಲ ಮೀನುಗಾರಿಕಾ ದೋಣಿಗಳಿಗೆ ಸಾಧ್ಯತಾ ಪತ್ರ ವಿತರಿಸಿ, ಸಕ್ರಮಗೊಳಿಸಲು ಕ್ರಮ ಕೈಗೊಳ್ಳಲಾಗಿದ್ದರಿಂದ ಮೀನುಗಾರ ರಿಗೆ ಸರಿಯಾದ ಡೀಸೆಲ್‌ ಸಬ್ಸಿಡಿ ದೊರೆಯಲಿದೆ ಹಾಗೂ ಸಮುದ್ರದಲ್ಲಿ ಕೋಸ್ಟ್‌ ಗಾರ್ಡ್‌ ವತಿಯಿಂದ ದಾಖಲೆಗಳ ಪರಿಶೀಲನೆ ವೇಳೆ ಎದುರಿಸಬಹು ದಾದ ಕಾನೂನು ತೊಡಕುಗಳು ನಿವಾರಣೆಯಾಗಲಿದೆ ಎಂದರು.

ಬಾಕಿ ಡೀಸೆಲ್‌ ಸಬ್ಸಿಡಿ ಖಾತೆಗೆ 
ಮೀನುಗಾರರಿಗೆ ಜನವರಿಯಿಂದ ಮಾರ್ಚ್‌ ವರೆಗೆ ಬಾಕಿ ಇರುವ ಡೀಸೆಲ್‌ ಸಬ್ಸಿಡಿಯನ್ನು ಎಪ್ರಿಲ್‌ ಅಂತ್ಯದೊಳಗೆ ಅವರವರ ಖಾತೆಗೆ ಜಮೆ ಮಾಡಲಾಗುತ್ತದೆ. ಡೀಸೆಲ್‌ ಸಬ್ಸಿಡಿಗಾಗಿ ಈ ವರ್ಷ ಬಜೆಟ್‌ನಲ್ಲಿ 157 ಕೋ. ರೂ. ಮೀಸಲಿಡಲಾಗಿದೆ. ಮೀನುಗಾರರ ಸಂಕಷ್ಟ ಪರಿಹಾರ ನಿಧಿಯನ್ನು 2 ಲಕ್ಷದಿಂದ 5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಜಿಲ್ಲೆಯಲ್ಲಿ 20 ವರ್ಷಗಳ ಬೇಡಿಕೆಯಾದ ಉಪನಿರ್ದೇಶಕರ ಕಚೇರಿಯನ್ನು ಇಂದು ಉದ್ಘಾಟಿಸ ಲಾಗಿದೆ. ಇದರಿಂದ ಇಲ್ಲಿನ ಮೀನುಗಾರರು ಮೀನುಗಾರಿಕೆಗೆ ಸಂಬಂದ ಪಟ್ಟ ಕೆಲಸಗಳಿಗೆ ಮಂಗಳೂರಿಗೆ ತೆರಳಬೇಕಾದುದು ತಪ್ಪಿದೆ ಎಂದು ಸಚಿವರು ತಿಳಿಸಿದರು.

ಇದೇ ಸಂದರ್ಭ ವಿವಿಧ ಫಲಾನುಭವಿಗಳಿಗೆ ಸಂಕಷ್ಟ ಪರಿಹಾರ ನಿಧಿಯ ಚೆಕ್‌ ಮತ್ತು ಸಾಧ್ಯತಾ ಪತ್ರಗಳನ್ನು ಸಚಿವರು ವಿತರಿಸಿದರು.

Advertisement

ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಹಿರಿಯಣ್ಣ ಟಿ. ಕಿದಿಯೂರು, ಸತೀಶ್‌ ಅಮೀನ್‌ ಪಡುಕರೆ, ಮಂಗಳೂರು ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಮಹೇಶ್‌ ಕುಮಾರ್‌, ಉಡುಪಿ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗಣಪತಿ ಭಟ್‌, ಮೀನುಗಾರ ಮುಖಂಡರಾದ ಗೋಪಾಲ ಕುಂದರ್‌, ದಯಾನಂದ ಕೆ. ಸುವರ್ಣ, ರಮೇಶ್‌ ಕೋಟ್ಯಾನ್‌, ದಯಾನಂದ ಕುಂದರ್‌, ಗುಂಡು ಬಿ. ಅಮೀನ್‌, ನಾರಾಯಣ ಕರ್ಕೇರ, ಕೇಶವ ಎಂ. ಕೋಟ್ಯಾನ್‌, ಜನಾರ್ದನ ತಿಂಗಳಾಯ ಹಾಗೂ ಎಲ್ಲ ಮೀನುಗಾರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಉಡುಪಿ ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಪಿ. ಪಾರ್ಶ್ವನಾಥ್‌ ಸ್ವಾಗತಿಸಿ, ವಂದಿಸಿದರು. ಇಲಾಖಾಧಿ ಕಾರಿ ಸವಿತಾ ಖಾದ್ರಿ ಕಾರ್ಯಕ್ರಮ ನಿರೂಪಿಸಿದರು.

ಬಿಗಿ ಕಾನೂನು
ಸಕ್ರಮಗೊಳಿಸಿದ ಬಳಿಕ ಕಾನೂನನ್ನು ಬಿಗಿಗೊಳಿಸಲಾಗುತ್ತದೆ. ಎಲ್ಲವೂನೂರಕ್ಕೆ ನೂರು ಕಾನೂನು ಬದ್ದವಾಗಿ ನಡೆಯಬೇಕು. ಒಂದು ಬೋಟಿನ ಡೀಸೆಲ್‌ನ್ನು ಇನ್ನೊಂದು ಬೋಟಿಗೆ ನೀಡುವಂತಿಲ್ಲ. ಹಾಗೆ ನೀಡಿದಲ್ಲಿ ಆ ಡೀಸೆಲ್‌ ಬಂಕ್‌ನ್ನು ಕಪ್ಪುಪಟ್ಟಿಗೆ ಸೇರಿಸಿ ಅದರ ಲೈಸೆನ್ಸ್‌ ರದ್ದುಗೊಳಿಸಲಾಗುವುದು. ಡೀಸೆಲ್‌ ಸಬ್ಸಿಡಿ ಸರಿಯಾದ ದೋಣಿಗೆ ಹೋಗುತ್ತಾ ಇದೆಯಾ ಎಂದು ನೋಡಲು ಉಡುಪಿ, ಮಂಗಳೂರು ಮತ್ತು ಉತ್ತರಕನ್ನಡ ಜಿಲ್ಲೆಗೆ ನೋಡಲ್‌ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಹಾಗಾಗಿ ಎಲ್ಲ ಮೀನುಗಾರರು ತಮ್ಮ ದಾಖಲೆಗಳನ್ನು ಸಕ್ರಮಗೊಳಿಸಬೇಕು ಅದಕ್ಕೆ ಬೇಕಾದ ಪೂರ್ಣ ಸಹಕಾರ ಇಲಾಖೆ ನೀಡುತ್ತದೆ ಎಂದು ಸಚಿವರು ಹೇಳಿದರು.
 

Advertisement

Udayavani is now on Telegram. Click here to join our channel and stay updated with the latest news.

Next