ಸಕಲೇಶಪುರ: ಮುಂಬರುವ ಜಿಪಂ, ತಾಪಂ ಚುನಾವಣೆಗಾಗಿ ಕ್ಷೇತ್ರ ಪುನರ್ ವಿಂಗಡಣೆ ಮಾಡಲಾಗುತ್ತಿದ್ದು, ಸದ್ಯದ\ ಮಾಹಿತಿ ಪ್ರಕಾರ ತಾಲೂಕು 2 ತಾಪಂ ಕ್ಷೇತ್ರ ಕಳೆದುಕೊಂಡು, ಒಂದು ಜಿಪಂ ಕ್ಷೇತ್ರ ಹೆಚ್ಚಿಸಿಕೊಂಡಿದೆ.
ತಾಲೂಕಿನಲ್ಲಿ ಸದ್ಯ ಮೂರು ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಿದ್ದು, ಮುಂದೆ ನಾಲ್ಕು ಆಗುವ ಸಾಧ್ಯತೆ ಇದೆ. 11 ತಾಲೂಕು ಪಂಚಾಯ್ತಿ ಕ್ಷೇತ್ರ 9ಕ್ಕೆ ಇಳಿಕೆ ಆಗಲಿದೆ. ಈ ಕುರಿತು ರಾಜ್ಯ ಚುನಾವಣೆ ಆಯೋಗ ಅಂತಿಮವಾಗಿ ಅಧಿಕೃತ ಘೋಷಣೆ ಮಾಡಬೇಕಿದೆ. ಕ್ಷೇತ್ರ ಕಳೆದುಕೊಳ್ಳುವ ಆತಂಕ ಎದುರಿಸುತ್ತಿರುವ ಹಾಲಿ ತಾಪಂ ಸದಸ್ಯರು ಹಾಗೂಮುಂಬರುವ ಚುನಾವಣೆಯಲ್ಲಿ ಆ ಕ್ಷೇತ್ರಗಳಿಂದ ಸ್ಪರ್ಧಿಸಬೇಕೆಂದು ಸಿದ್ಧತೆ ನಡೆಸಿದ್ದ ಆಕಾಂಕ್ಷಿಗಳಿಗೆ ಸದ್ಯ ನಿರಾಸೆಯಂತೂ ಉಂಟಾಗಿದೆ. ಮುಂದೆಅಂತಿಮ ವರದಿಯಲ್ಲಿ ಏನು ಬದಲಾವಣೆ ಆಗುತ್ತದೋ ಕಾದು ನೋಡಬೇಕಿದೆ.
ಈಗಾಗಲೇ ತಾಲೂಕಿನಲ್ಲಿ ಬೆಳಗೋಡು, ಯಸಳೂರು, ಹಾನುಬಾಳ್ ಜಿಪಂ ಕ್ಷೇತ್ರಗಳಿದ್ದು, ಜೊತೆಗೆ ಹೆತ್ತೂರು ಜಿಪಂ ಕ್ಷೇತ್ರ ಮಾಡಲಾಗುತ್ತದೆಎಂಬ ಮಾಹಿತಿ ಇದೆ. ಕೆಲವರು ಕಸಬಾ ಹೋಬಳಿಯನ್ನು ಪ್ರತ್ಯೇಕ ಜಿಪಂ ಕ್ಷೇತ್ರ ಮಾಡಬೇಕೆಂದು ಅಭಿಪ್ರಾಯ ಪಡುತ್ತಿದ್ದಾರೆ. ಈ ತಿಂಗಳ 22ರ ಒಳಗೆ ಕ್ಷೇತ್ರ ಪುನರ್ ವಿಂಗಡಣೆ ಮಾಡಬೇಕಾಗಿದೆ. ಇದು ರಾಜಕೀಯ ಮುಖಂಡರಲ್ಲಿ, ಕಾರ್ಯಕರ್ತರಲ್ಲಿ ಹಲವು ಗೊಂದಲ ಹುಟ್ಟಿಹಾಕಿದೆ.
ಮುಂಬರುವ ಜಿಪಂ ಚುನಾವಣೆಗಾಗಿ ಕೆಲವು ಆಕಾಂಕ್ಷಿಗಳು ತೆರೆಮರೆಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಕೆಲವರಿಗೆ ಕ್ಷೇತ್ರ ಮರು ವಿಂಗಡಣೆ ವರದಿ ಏನು ಆಗುತ್ತದೋ ಎಂದು ಕಾದು ನೋಡುತ್ತಿದ್ದಾರೆ. ಕ್ಷೇತ್ರ ಮರು ವಿಂಗಡಣೆಯಿಂದ ಕೆಲವು ಗ್ರಾಮಗಳು ಹಾಲಿ ಇರುವ ಕ್ಷೇತ್ರಗಳಿಂದ ಕೈತಪ್ಪಿ ಹೋಗಬಹುದೆಂಬ ಆತಂಕವೂ ಇದೆ.ಒಟ್ಟಾರೆಯಾಗಿ ಕ್ಷೇತ್ರ ಮರು ವಿಂಗಡಣೆ ಕೆಲವರಿಗೆ ರಾಜಕೀಯ ಲಾಭ ತರುವ ನಿರೀಕ್ಷೆಯಿದ್ದು, ಮತ್ತೆ ಕೆಲವರಿಗೆ ರಾಜಕೀಯ ನಷ್ಟವುಂಟಾಗುವ ಸಾಧ್ಯತೆಯಿದೆ.
-ಸುಧೀರ್ ಎಸ್.ಎಲ್.