ಸಕಲೇಶಪುರ: ಸುಮಾರು 30 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಬೀಟೆ ಮರದ ನಾಟಾಗಳನ್ನು ಮಿಂಚಿನ ಕಾರ್ಯಾಚರಣೆ ನಡೆಸಿ ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ತಾಲೂಕಿನಲ್ಲಿ ಗುರುವಾರ ರಾತ್ರಿ ನಡೆದಿದೆ.
ತಾಲ್ಲೂಕಿನ ಹೆನ್ನಲಿ ಗ್ರಾಮದ ಸರ್ವೆ ನಂಬರ್ 207 ಮತ್ತು 210ರ ಶಿವಾನಂದಮೂರ್ತಿ ಎಂಬುವವರಿಗೆ ಸೇರಿದ ಕಾಫಿ ತೋಟದಲ್ಲಿ 10 ಬೀಟೆ ಮರಗಳನ್ನು ಅಕ್ರಮವಾಗಿ ಕಡಿದು ಕಳ್ಳಸಾಗಣೆ ಮಾಡುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ಗುರುವಾರ ರಾತ್ರಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಟಿಪ್ಪರ್ ಹಾಗೂ ಪಿಕ್‌ಆಪ್ ವಾಹನದಲ್ಲಿ ತುಂಬಿದ್ದ ಬೀಟೆ ನಾಟಾಗಳನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ವಾಹನ ಚಾಲಕರು ಹಾಗೂ ಮರಗಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ. ವಾಹನಗಳನ್ನು ವಶಕ್ಕೆ ಪಡೆದಿರುವುದರಿಂದ ಆರೋಪಿಗಳು ಯಾರು ಎಂಬುದು ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದ್ದು ಆದರೆ ಆರೋಪಿಗಳೆಲ್ಲಾ ತಲೆಮರೆಸಿಕೊಂಡಿದ್ದಾರೆ.
ಬೀಟೆ ನಾಟಗಳ ಬೆಲೆ ಸುಮಾರು 30ಲಕ್ಷಕ್ಕೂ ಹೆಚ್ಚು ಮೌಲ್ಯವೆಂದು ತಿಳಿದು ಬಂದಿದೆ.ಕಳೆದ ಎರಡು ದಶಕಗಳಲ್ಲಿ ಅರಣ್ಯ ಇಲಾಖೆಯಲ್ಲಿ ಬಾರಿ ಪ್ರಮಾಣದ ಬೀಟೆ ಮರವನ್ನು ವಶಕ್ಕೆ ಪಡೆದಿರುವ ಪ್ರಕರಣ ಇದಾಗಿದೆ. ಅರಣ್ಯ ಇಲಾಖೆಯ ಕಾರ್ಯವನ್ನು ಸಾರ್ವಜನಿಕರು ಶ್ಲಾಘನೆ ಮಾಡಿದ್ದಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ. ಮೋಹನ್‌ಕುಮಾರ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪಿ. ಮಹಾದೇವ್ ಮಾರ್ಗದರ್ಶನ ಹಾಗೂ ವಲಯ ಅರಣ್ಯ ಅಧಿಕಾರಿ ಶಿಲ್ಪಾ ವಸಂತ್ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿಗಳಾದ ದಿನೇಶ್,ರಮೇಶ್, ಮೋಹನ್, ಗಸ್ತು ವನಪಾಲಕರಾದ ಯೋಗೇಶ್,ಉಮೇಶ್, ಹನುಮಂತಪ್ಪ, ಲೋಕೇಶ್, ಅರುಣ, ವಾಹನ ಚಾಲಕರಾದ ಚಿದಾನಂದ್, ಸಾಗರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.