Advertisement

ದಲಿತರಿಗೆ ನ್ಯಾಯ ಕಲಿಸಿದ ಎಚ್‌ಆರ್‌ಪಿ ಅಧಿಕಾರಿ

07:30 PM Sep 26, 2019 | Naveen |

ಸುಧೀರ್‌ ಎಸ್‌.ಎಲ್‌
ಸಕಲೇಶಪುರ:
ತಾಲೂಕಿನಲ್ಲೆಡೆ ಕೇವಲ ಹೇಮಾವತಿ ಮುಳುಗಡೆ ಯೋಜನೆಯ ಪುನರ್ವಸತಿ ಯೋಜನೆ (ಎಚ್‌ಆರ್‌ಪಿ) ಹಗರಣಗಳ ಸುದ್ದಿಗಳೇ ಹೆಚ್ಚಾಗಿದ್ದು, ಈ ನಡುವೆ ಹೇಮಾವತಿ ಪುರ್ನವಸತಿ ಭೂ ಸ್ವಾಧೀನಾಧಿಕಾರಿ ಕ್ಯಾಪ್ಟನ್‌ ಶ್ರೀನಿವಾಸ್‌ ಗೌಡ ಎಚ್‌ ಆರ್‌ಪಿಯಿಂದ ನೋವುಂಡ ಕೆಲವು ಬಡ ದಲಿತ ಕುಟುಂಬಗಳಿಗೆ ಬೆಳಕು ತೋರಿದ್ದಾರೆ.

Advertisement

ತಾಲೂಕಿನ ಯಸಳೂರು ಹೋಬಳಿ, ಹೇರೂರು ಗ್ರಾಮದ ಸ.ನಂ.49ರಲ್ಲಿ ಹೇಮಾವತಿ ಜಲಾಶಯ ಯೋಜನೆ 2012- 13ನೇ ಸಾಲಿನಲ್ಲಿ ಮುಳುಗಡೆ ಸಂತ್ರಸ್ತ ರಾದ ಜಿ.ಟಿ.ಹರೀಶ್‌ ಬಿನ್‌ ತಿಮ್ಮೇಗೌಡ, ಶೋಭಾ ಕೋಂ ತಿಮ್ಮೇಗೌಡ, ಚನ್ನಕೇಶವ ಬಿನ್‌  ಟ್ಟಸ್ವಾಮಿಗೌಡ, ಟಿ.ಎಚ್‌.ಪುಷ್ಪಾ ಕೋಂ ತಿಮ್ಮಪ್ಪಗೌಡ, ಯೋಗೇಶ್‌ ಬಿನ್‌ ರಂಗೇಗೌಡ, ಎಸ್‌.ಆರ್‌.ಮಂಜುನಾಥ್‌ ಬಿನ್‌ ರಾಜೇಗೌಡ ಅವರಿಗೆ ತಲಾ 4 ಎಕರೆಯಂತೆ ಎಚ್‌ಆರ್‌ಪಿ ಯಲ್ಲಿ ಜಮೀನು ಮಂಜೂರಾತಿ ಮಾಡಲಾಗಿ ಜೊತೆಗೆ ಮಂಜೂರಾತಿಯಂತೆ ಸಾಗುವಳಿ ಪತ್ರ ನೀಡಿ ಖಾತೆ ಮಾಡಲಾಗಿತ್ತು. ಫ‌ಲಾನುಭವಿಗಳು ತಮಗೆ ಮಂಜೂರಾದ ಜಾಗದಲ್ಲೇ ಭೂಮಿ ಸಾಗುವಳಿ ಮಾಡುತ್ತಿದ್ದರೂ ಸರ್ವೆಯರ್‌ಗಳು ಹಣ ಪಡೆದು ಕೂತಲ್ಲೇ ಸರ್ವೆ ಸ್ಕೆಚ್‌ ಮಾಡಿದ್ದರು.

ವಾಸ್ತವವಾಗಿ ಗ್ರಾಮದ ಸರ್ವೆ ನಂ. 49ರಲ್ಲಿ ಪರಿಶಿಷ್ಟ ಜಾತಿಯ ಗೌರಮ್ಮ ಕೋಂ ನಿಂಗಯ್ಯ, ಹುಲ್ಲುಕೊಡಯ್ಯ ಬಿನ್‌ ಕೋಮರಯ್ಯ, ಕೃಷ್ಣಯ್ಯ ಬಿನ್‌ ತಿಪ್ಪಯ್ಯ, ವಿಶಾಲ ಕೋಂ ರಮೇಶ್‌ ಮತ್ತು ಹೊನ್ನಮ್ಮ ಕೋಂ ರಾಜಯ್ಯ ಅವರು ತಲಾ 3 ಎಕರೆಯಂತೆ ಸುಮಾರು 60-70 ವರ್ಷದಿಂದಲೂ ಸದರಿ ಸರ್ವೆ ನಂಬರ್‌ ಜಾಗದಲ್ಲಿ ಕಾಫಿ ಸಾಗುವಳಿ ಮಾಡಿಕೊಂಡಿದ್ದು, ಈ ಜಾಗಕ್ಕೆ ಮಂಜೂರಾತಿಗಾಗಿ ನಮೂನೆ -53 ರಲ್ಲಿ ಕಂದಾಯ ಕಚೇರಿಗೆ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಶಾಸಕರ ನೇತೃತ್ವದ ಭೂಮಂಜೂರಾತಿ ಸಮಿತಿಯ 1ನೇ ಸಭೆಯಲ್ಲಿ ಮಂಜೂರು ಮಾಡಿಸಿಕೊಂಡಿದ್ದರು. ಸ.ನಂ.49ರಲ್ಲಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಮಂಜೂರು ಮಾಡುವ ಸಂದರ್ಭದಲ್ಲಿ ದಲಿತರು ಸ್ವಾಧೀನ ಹೊಂದಿರುವ ಸ್ಥಳವನ್ನು ಮಂಜೂರಾತಿ ಮಾಡಲಾಗಿದ್ದು ಇದರಿಂದ ದಲಿತ ಕುಟುಂಬಗಳು ಕಳೆದ ಹಲವಾರು ತಿಂಗಳಿನಿಂದ ಆತಂಕದ ಪರಿಸ್ಥಿತಿ
ಎದುರಿಸುತ್ತಿತ್ತು. ಹಲವು ಬಾರಿ ತಾಲೂಕು ಆಡಳಿತಕ್ಕೆ ಮನವಿ ಮಾಡಿದರೂ ಸಹ ಯಾರು ಸ್ಪಂದಿಸಿರಲಿಲ್ಲ.

ಈ ಹಿನ್ನೆಲೆಯಲ್ಲಿ ವಿಷಯ ತಿಳಿದ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಮುಗ್ಧ ದಲಿತ ಕುಟುಂಬಗಳ ಸಮಸ್ಯೆಯ ಕುರಿತು ಹೇಮಾವತಿ ಪುರ್ನವಸತಿ ಭೂ ಸ್ವಾಧೀನಾಧಿಕಾರಿ ಕ್ಯಾಪ್ಟನ್‌ ಶ್ರೀನಿವಾಸ್‌ ಗೌಡರವರ ಗಮನಕ್ಕೆ ತಂದಿದ್ದರು.

ಈ ಹಿನ್ನೆಲೆಯಲ್ಲಿ ಖುದ್ದು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಶ್ರೀನಿವಾಸಗೌಡರ ಎದುರು ಹಾಜರಿದ್ದ ಬಡ ದಲಿತ ಕುಟುಂಬದ ಮಹಿಳೆಯರು ಕಣ್ಣೀರು ಹಾಕಿ ತಮ್ಮ ನೋವನ್ನು ಹೇಳಿಕೊಳ್ಳಲು ಮುಂದಾದಾಗ ಎಲ್ಲರನ್ನೂ ಅಧಿಕಾರಿ ಸಂತೈಸಿದರು. ದಲಿತರ ಜಾಗದಲ್ಲಿ ಭೂಮಿ ಪಡೆದವರನ್ನು ಹಾಗೂ ಸಾಗುವಳಿ ಮಾಡುತ್ತಿರುವ ದಲಿತ ಕುಟುಂಬದವರು ತಮ್ಮ ಕಚೇರಿಗೆ ಬರಲು ಹೇಳಿದ್ದು, ದಲಿತರು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ದಲಿತರಿಗೆ ನೀಡಿ ಸಂತ್ರಸ್ತರಿಗೆ ಇದೇ ಸರ್ವೆ ನಂ.ನಲ್ಲಿ ನಲ್ಲಿ ಬೇರೆ ಕಡೆ ನೀಡುವ ಸಾಧ್ಯತೆಯಿದೆ.

Advertisement

ಒಟ್ಟಾರೆಯಾಗಿ ಕ್ಯಾಪ್ಟನ್‌ ಶ್ರೀನಿವಾಸ ಗೌಡರವರ ಈ ಕಾರ್ಯದಿಂದ ನೊಂದ ದಲಿತ ಕುಟುಂಬಗಳಲ್ಲಿ ಹೊಸ ಆಶಾ ಕಿರಣ ಕಂಡು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next