ಸಕಲೇಶಪುರ: ಕಾಫಿ ಕೃಷಿಯಲ್ಲಿ ಕೂಲಿ ಕಾರ್ಮಿಕರ ಕೊರತೆ ಹೋಗಲಾಡಿಸಲು ಯಂತ್ರೋಪಕರಣಗಳನ್ನು ಹೆಚ್ಚು ಕೃಷಿಯಲ್ಲಿ ಬಳಸಬೇಕಾದ ಅಗತ್ಯವಿದ್ದು ಈ ಹಿನ್ನೆಲೆ ಬೆಳೆಗಾರರಿಗೆ ಕೃಷಿ ಯಂತ್ರೋಪಕರಣಗಳ ಕುರಿತು ಮಾಹಿತಿ ನೀಡಲು ಕಾಪಿಟೆಕ್ ಎಕ್ಸ್ಪೋ ಕಾರ್ಯಕ್ರಮವನ್ನು ಮೂರು ದಿನಗಳ ಕಾಲ ಪಟ್ಟಣದಲ್ಲಿ ಆಯೋಜಿಸಲಾಗಿದೆ ಎಂದು ಕೆಜಿಎಫ್ ಅಧ್ಯಕ್ಷ ಎಚ್.ಟಿ ಮೋಹನ್ ಕುಮಾರ್ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಮೇ 5, 6 ಮತ್ತು 7ನೇ ತಾರೀಖಿನಂದು ಸಕಲೇಶಪುರ ಪಟ್ಟಣದ ಶ್ರೀನಿವಾಸ ಕನ್ವೆಷನ್ ಹಾಲ್‌ನಲ್ಲಿ ವಿವಿಧ
ಬೆಳೆಗಾರರ ಸಂಘಟನೆಗಳ ಸಹಯೋಗದಲ್ಲಿ ಕಾಪಿಟೆಕ್ ಎಕ್ಸ್ಪೋವನ್ನು ಹಮ್ಮಿಕೊಳ್ಳಲಾಗಿದೆ.
ಈ ಮೇಳದಲ್ಲಿ ನೂತನ ಆವಿಷ್ಕಾರಗಳ ಬೃಹತ್ ಪ್ರದರ್ಶನ ಮೇಳ, ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ, ವಿಚಾರ ಸಂಕಿರಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣವಿರುತ್ತದೆ. ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮ ಮೇ 5 ಗುರುವಾರ ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡ ಉದ್ಘಾಟಿಸಲಿದ್ದಾರೆ. ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಮಾಜಿ ಸಚಿವ ಎಚ್ .ಡಿ ರೇವಣ್ಣ, ಹಾಸನ ಲೋಕಸಭಾ ಕ್ಷೇತ್ರದ ಸದಸ್ಯ ಪ್ರಜ್ವಲ್ ರೇವಣ್ಣ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಸಕಲೇಶಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಎಚ್.ಕೆ ಕುಮಾರಸ್ವಾಮಿ, ಬೇಲೂರು ಶಾಸಕ ಲಿಂಗೇಶ್, ಶೃಂಗೇರಿ ಶಾಸಕ ರಾಜೇಗೌಡ ಭಾಗವಹಿಸಲಿದ್ದಾರೆ.
6 ಮತ್ತು 7 ರಂದು ಕಾರ್ಯಾಗಾರ: 6ರಂದು ನಡೆಯುವ ಎರಡನೇ ದಿನ ಕಾರ್ಯಕ್ರಮಕ್ಕೆ ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ಸಚಿವರಾದ ಡಾ.ಅಶ್ವತ್ಥ್ ನಾರಾಯಣ, ಅಬಕಾರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಗೋಪಾಲಯ್ಯ , ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದಶಿ ಹಾಗೂ ಶಾಸಕ ಸಿ.ಟಿ ರವಿ, ಹಾಸನ ಶಾಸಕ ಪ್ರೀತಂ ಗೌಡ, ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ, ವಿಧಾನ ಪರಿಷತ ಸದಸ್ಯ ಪ್ರಾಣೇಶ್ ಸೇರಿದಂತೆ ಇತರ ಗಣ್ಯರು ಆಗಮಿಸಲಿದ್ದಾರೆ.
ಹಾಗೆಯೇ 7ರಂದು ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಉಪ ಸಭಾಪತಿ ಡಾ.ಬಿ.ಎಲ್. ಶಂಕರ್, ಮಾಜಿ ಮಂತ್ರಿಗಳಾದ ಡಾ.ಮೋಟಮ್ಮ, ಬಿ.ಬಿ. ನಿಂಗಯ್ಯ ಸೇರಿದಂತೆ ಇತರ ಗಣ್ಯರು ಆಗಮಿಸಲಿದ್ದಾರೆ. ಜೊತೆಗ ಪ್ರಸಿದ್ದ ನಟನಟಿಯರು ಆಗಮಿಸಿ ಸಾಂಸ್ಕೃತಿಕ ಕಾರ್ಯ ಕ್ರಮ ನೀಡಲಿದ್ದಾರೆ. ಈ ಹಿನ್ನೆಲೆ ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯ ಎಲ್ಲಾ ಬೆಳೆಗಾರರು ಕುಟುಂಬ ಸಮೇತರಾಗಿ ಆಗಮಿಸಿ, ಹೆಚ್ಚಿನ ಜನಸಂಖ್ಯೆಯಲ್ಲಿ ಭಾಗವಹಿಸಿ ಎಂದರು.
ಕೆಜಿಎಫ್ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ, ಅರೇಹಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ ಮಂಜುನಾಥ್ ಶೆಟ್ಟಿ, ಕೆಜಿಎಫ್ ನಿರ್ದೇಶಕ ಮಲ್ಲಿಕಾರ್ಜುನ್, ಚಿಕ್ಕಮಗಳೂರು ಬೆಳೆಗಾರ ಮುಖಂಡ ರತೀಶ್ ಕುಮಾರ್, ಹಾಸನ ಜಿಲ್ಲಾ ಬೆಳೆಗಾರರ ಸಂಘದ ಮಾಜಿ ಖಚಾಂಚಿ ವಿಶ್ವನಾಥ್ ನಾಯಕ್ ಹಲವರು ಹಾಜರಿದ್ದರು.