ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.
ತಾಲೂಕಿನ ಗುಲಗಳಲೆ ಗ್ರಾಮದ ಬಳಿ ಹೆದ್ದಾರಿಯ ತಿರುವಿನಲ್ಲಿ ಹಾಸನ ಕಡೆಯಿಂದ ಬರುತ್ತಿದ್ದ ಕಾರುಗಳು ಡಿಕ್ಕಿಯಾಗಿದೆ. ಬೆಂಗಳೂರಿನಿಂದ ಉಡುಪಿಗೆ ಹೋಗುತ್ತಿದ್ದ ಸ್ವಿಫ್ಟ್ ಕಾರು ಹಾಗೂ ಹಾಸನದಿಂದ ಸಕಲೇಶಪುರಕ್ಕೆ ತೆರಳುತ್ತಿದ್ದ ಕ್ರೇಟಾ ಕಾರು ಗುಲಗಳಲೆ ಬಳಿ ಈ ಎರಡು ಕಾರುಗಳ ಮುಂದೆ ಚಲಿಸುತ್ತಿದ್ದ ಮತ್ತೊಂದು ಕಾರು ಹೆಬ್ಬನಹಳ್ಳಿ ಕಡೆಗೆ ತಿರುವು ತೆಗೆದುಕೊಂಡ ಹಿನ್ನೆಲೆಯಲ್ಲಿ ಎರಡು ಕಾರುಗಳ ಚಾಲಕರ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಅಪಘಾತದಲ್ಲಿ ದಯಾನಂದ್ ಎಂಬುವರಿಗೆ ಹಾಗೂ ಓರ್ವ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಇಬ್ಬರಿಗೆ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 75 ರ ಗುಲಗಳಲೆ ಗ್ರಾಮದ ಬಳಿ ಕಳೆದ ಒಂದು ತಿಂಗಳಿಂದೀಚೆಗೆ ಹಲವಾರು ಅಪಘಾತಗಳು ಜರುಗಿದ್ದು, ಹಲವರು ಪ್ರಾಣ ಕಳೆದುಕೊಂಡಿದ್ದಾರೆ.
ಆದರೆ, ರಾ.ಹೆ.ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.