ಈಗ ಬಿಡುಗಡೆ ಮುನ್ನವೂ ಮಕ್ಕಳ ಸಿನಿಮಾಗಳು ಒಂದಷ್ಟು ಸದ್ದು ಮಾಡುತ್ತಿವೆ ಎಂದರೆ ನಂಬಲೇಬೇಕು. ಈಗ ಹೇಳ ಹೊರಟಿರುವ ವಿಷಯ, “ಎಳೆಯರು ನಾವು ಗೆಳೆಯರು’ ಎಂಬ ಮಕ್ಕಳ ಚಿತ್ರದ ಬಗ್ಗೆ. ವಿಕ್ರಂ ಸೂರಿ ಚೊಚ್ಚಲ ನಿರ್ದೇಶನದ ಈ ಚಿತ್ರದ ಹಾಡೊಂದು ಈಗ ಯು ಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಏಳೆಂಟು ಮಕ್ಕಳು ಆಡಿ ಕುಣಿಯುವ ಈ ಹಾಡಿಗೆ ಬರೋಬ್ಬರಿ ಎರಡೂವರೆ ಲಕ್ಷದಷ್ಟು ಲೈಕ್ಸ್ ಸಿಕ್ಕಿವೆ ಎಂಬುದೇ ವಿಶೇಷ.
ಹೌದು, ಗೀತೆರಚನೆಕಾರ ಅರಸು ಅಂತಾರೆ ಬರೆದಿರುವ ಬಾಲ್ಯ ನೆನಪಿಸುವ ಹಾಗೂ ಹಳ್ಳಿ ಆಟಗಳನ್ನು ಮೆಲುಕು ಹಾಕುವಂತಹ ಹಾಡಿಗೆ ಗಾಯಕ ವಿಜಯಪ್ರಕಾಶ್ ದನಿಯಾಗಿದ್ದಾರೆ. ಅನೂಪ್ ಸೀಳಿನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅಷ್ಟಕ್ಕೂ ಈ ಹಾಡು ಅಷ್ಟೊಂದು ಸದ್ದು ಮಾಡೋಕೆ ಕಾರಣವಿಷ್ಟೇ, ಈಗ ಹಳ್ಳಿಯ ಆಟಗಳು ನೆನಪಾಗಿವೆ. ಮಕ್ಕಳ ಆಟಗಳಂತೂ ಕಣ್ಮರೆಯಾಗುತ್ತಿವೆ. ಈ ಚಿತ್ರದಲ್ಲಿ ಹಳ್ಳಿಯೊಂದರ ಮಕ್ಕಳು ತನ್ನೂರು, ತನ್ನ ನೆಲ, ತನ್ನೂರಿನ ಬೀದಿ ಬದಿಯ ಆಟಗಳನ್ನು ಆಡುತ್ತ ನಲಿದಾಡುವ ಚಿತ್ರಣ ಬಾಲ್ಯವನ್ನು ನೆನಪಿಸುವಂತಿದೆ.
“ಕರಿ ಗಿರಿ ಮುಡಿ ಮೇಲೆ ವನಸುಮಗಳ ಮಾಲೆ…’ ಎಂದು ಶುರುವಾಗುವ ಹಾಡಿನಲ್ಲಿ ಬಂಡಿ ಹೊಡೆಯೋದು, ಐಸ್‌ಪೇಸ್ ಆಡೋದು, ಕೂಸುಮರಿ ಆಟ, ಆಮಾಟೆಯಂತಹ ದೇಸೀಯಾಟ, ಕುಂಟೆಬಿಲ್ಲೆ, ಗಿಲ್ಲಿದಾಂಡು, ಪಗಡೆ, ಅಳಿಗುಳಿ ಹೀಗೇ ಹಳ್ಳಿಯಲ್ಲಿ ಕಾಣ ಸಿಗುವ ತರಹೇವಾರಿ ಆಟಗಳ ಹೆಸರುಗಳು ಬಂದು ಹೋಗುತ್ತವೆ. ಅದೇ ಸೊಗಡಿನ ಚಿತ್ರಣವನ್ನೂ ಹಾಡಲ್ಲಿ ಕಟ್ಟಿಕೊಡಲಾಗಿದೆ. ಈಗಾಗಲೇ ಈ ಹಾಡಿಗೆ ಒಳ್ಳೆಯ ಮೆಚ್ಚುಗೆಯೂ ಸಿಕ್ಕಿದೆ.
ಈ ಹಾಡನ್ನು ಚಿತ್ರತಂಡ ಯು ಟ್ಯೂಬ್‌ಗ ಅಪ್‌ಲೋಡ್ ಮಾಡಿದ ಬೆರಳೆಣಿಕೆ ದಿನದಲ್ಲೇ, ಲಕ್ಷಾಂತರ ಹಿಟ್ಸ್ ಆಗುವ ಮೂಲಕ ಮಕ್ಕಳ ಸಿನಿಮಾಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದು ಖುಷಿಯ ಮಾತಾಗಿದೆ. ಇದು ಸಹಜವಾಗಿಯೇ ಚಿತ್ರತಂಡಕ್ಕೂ ಸಂತಸ ತಂದಿದೆ. ಅದಷ್ಟೇ ಅಲ್ಲ, ಚಿತ್ರತಂಡ ಬಿಟ್ಟಿರುವ ಟ್ರೇಲರ್‌ವೊಂದಕ್ಕೂ ಸಿಕ್ಕಾಪಟ್ಟೆ ಲೈಕ್ಸ್ ಸಿಕ್ಕಿವೆ. “ಊರಿಗೆ ನಾವೇ ರಾಜರು’ ಎಂಬ ಡೈಲಾಗ್ ಹೊಡೆಯೋ ಚಿಣ್ಣರು,
ಹೀರೋಗಳಂತೆ ಫೋಸ್ ಕೊಟ್ಟು, ಪಂಚಿಂಗ್ ಡೈಲಾಗ್ ಹರಿಬಿಟ್ಟಿದ್ದಾರೆ. ಅಂದಹಾಗೆ, ಡ್ರಾಮಾ ಜೂನಿಯರ್ನ ಅಚಿಂತ್ಯ, ತೇಜಸ್ವಿನಿ, ಮಹತಿ, ನಿಹಾಲ್, ಸೂರಜ್, ಅಮೋಘ…, ಮಹೇಂದ್ರ, ಪುಟ್ಟರಾಜು ಮತ್ತು ಅಭಿಷೇಕ್ ಸೇರಿದಂತೆ ಇತರೆ ಬಾಲನಟರು ಅಭಿನಯಿಸಿದ್ದಾರೆ. ನಾಗರಾಜ್ ಗೋಪಾಲ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ರಿಚರ್ಡ್ ಲೂಯಿಸ್ ಚಿತ್ರಕಥೆ ಬರೆದಿದ್ದಾರೆ. ಅಶೋಕ್ ರಾಮನ್ ಕ್ಯಾಮೆರಾ ಹಿಡಿದಿದ್ದಾರೆ. ಸದ್ಯದಲ್ಲೇ ತೆರೆಗೆ ಬರಲು ಸಜ್ಜಾಗಿದೆ ಈ ಚಿತ್ರ.