ಒಂದು ಕಡೆ ಪ್ರೀತಿಯ ಕನಸು, ಮತ್ತೂಂದೆಡೆ ಸಾವೊಂದಕ್ಕೆ ನ್ಯಾಯ ಕೊಡಿಸುವ ಮನಸ್ಸು… ಈ ಇಬ್ಬಗೆಯಲ್ಲಿ ಸಣ್ಣದೊಂದು ಪೇಚಾಟ, ಜೊತೆ ಜೊತೆಗೆ ನಗೆಬುಗ್ಗೆ… ಈ ವಾರ ತೆರೆಕಂಡಿರುವ “ಸಖತ್’ ಸಿನಿಮಾವನ್ನು ಒನ್‌ಲೈನ್ ನಲ್ಲಿ ಹೀಗೆ ಹೇಳಬಹುದು. ನಿರ್ದೇಶಕ ಸುನಿ ಒಂದು ಮಜವಾದ ಜೊತೆಗೆ ಒಂದಷ್ಟು ಗಂಭೀರ ಅಂಶಗಳನ್ನು ಸೇರಿಸಿ “ಸಖತ್’ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.
ಮುಖ್ಯವಾಗಿ ಇಡೀ ಸಿನಿಮಾ ಒಂದು ಅಪಘಾತದ ಸುತ್ತ ಸಾಗುತ್ತದೆ. ಆ ಅಪಘಾತ ಹೇಗಾಯಿತು ಮತ್ತು ಯಾಕಾಯಿತು ಎಂಬ ಅಂಶ ಹಾಗೂ ಅದರ ಸುತ್ತ ನಡೆಯುವ ಕೋರ್ಟ್ ಡ್ರಾಮಾ ಈ ಸಿನಿಮಾದ ಹೈಲೈಟ್.
ಚಿತ್ರದಲ್ಲಿ ಗಣೇಶ್ ಅಂಧನಾಗಿ ಕಾಣಿಸಿಕೊಂಡಿದ್ದಾರೆ. ಹಾಗಾದರೆ ಇಡೀ ಸಿನಿಮಾದಲ್ಲಿ ಅವರು ಅಂಧನಾಗಿಯೇ ಇರುತ್ತಾರಾ ಎಂದು ನೀವು ಕೇಳಬಹುದು. ಅದಕ್ಕೆ ನೀವು ಸಿನಿಮಾವನ್ನೇ ನೋಡಬೇಕು. ಚಿತ್ರ ಹಾಸ್ಯದಿಂದ ಆರಂಭವಾಗಿ ಅಲ್ಲಲ್ಲಿ ಒಂದಷ್ಟು ಟ್ವಿಸ್ಟ್-ಟರ್ನ್ಗಳನ್ನು ಪಡೆದುಕೊಂಡು ಚಿತ್ರ ಸಾಗುತ್ತದೆ. ಸುನಿ ಸಿನಿಮಾ ಎಂದಮೇಲೆ ಅಲ್ಲೊಂದಿಷ್ಟು ಕಚಗುಳಿ ಇಡುವ ಡೈಲಾಗ್‌ಗಳು ಇದ್ದೇ ಇರುತ್ತವೆ. ಸಣ್ಣ ಸಣ್ಣ ಸನ್ನಿವೇಶಗಳಲ್ಲಿ ದೊಡ್ಡ ನಗು ಉಕ್ಕಿಸುವ ಸಾಮರ್ಥ್ಯ ಸುನಿಗಿದೆ. ಅದು ಈ ಸಿನಿಮಾದಲ್ಲೂ ಮುಂದುವರೆದಿದೆ. ಸಿನಿಮಾದ ಟೈಟಲ್ ಕಾರ್ಡ್‌ನಲ್ಲಿ “ನಮ್ ಸಿನಿಮಾಕ್ಕೆ ಯಾರೂ ಕೇಸ್ ಹಾಕ್ಬೇಡಿ…’ ಎಂದು ಹೇಳುವುದರಿಂದ ಆರಂಭವಾಗುವ ಪಂಚ್ ಇಡೀ ಸಿನಿಮಾದುದ್ದಕ್ಕೂ ಸಾಗಿಬಂದಿದೆ.
ಈ ಸಿನಿಮಾವನ್ನು ಔಟ್ ಅಂಡ್ ಔಟ್ ಲವ್‌ಸ್ಟೋರಿ ಎಂದು ಹೇಳುವುದು ಕಷ್ಟ. ಆದರೆ, ಗಣೇಶ್ ಈ ಸಿನಿಮಾದಲ್ಲಿ ಅಲ್ಲಲ್ಲಿ ಲವರ್‌ಬಾಯ್ ಆಗಿ ಕಾಣಿಸಿ ಕೊಂಡಿದ್ದಾರೆ. ಹೆಚ್ಚೇನು ಗಂಭೀರವಲ್ಲದ ಕಥೆಯನ್ನು ಸುನಿ ಫನ್ ಆಗಿಯೇ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಮುಖ್ಯವಾಗಿ ಸುನಿ ಚಿತ್ರಕಥೆಯಲ್ಲಿ ಆಟವಾಡಿದ್ದಾರೆ. ಈ ಹಾದಿಯಲ್ಲಿ ಒಂದಷ್ಟು ದೃಶ್ಯಗಳಿಗೆ ಕತ್ತರಿ ಹಾಕುವ ಅವಕಾಶವೂ ಇತ್ತು. ಅದರಾಚೆ ಹೇಳುವುದಾದರೆ “ಸಖತ್’ ಮಜಾ ಕೊಡೋ ಸಿನಿಮಾ.
ನಕ್ಕು ನಗಿಸುವ ಡೈಲಾಗ್, ಸುಂದರವಾದ ಹಾಡು, ಮಜ ಕೊಡುವ ರಿಯಾಲಿಟಿ ಶೋ ವೇದಿಕೆ, ಕುತೂಹಲ ಹುಟ್ಟಿಸುವ ಕೋರ್ಟ್ ರೂಂ ಡ್ರಾಮಾ… ಹೀಗೆ ವಿವಿಧ ಆಯಾಮಗಳಲ್ಲಿ “ಸಖತ್’ ಸಿನಿಮಾ ನಿಮಗೆ ನಗೆ ಉಕ್ಕಿಸುತ್ತಾ ಸಾಗುತ್ತದೆ. ಹಾಗಾದರೆ ಚಿತ್ರ ಯಾವ ಜಾನರ್‌ಗೆ ಸೇರಿದ ಸಿನಿಮಾ ಎಂದು ನೀವು ಕೇಳಿದರೆ ಉತ್ತರಿಸೋದು ಕಷ್ಟ. ಏಕೆಂದರೆ ಇದು ಯಾವುದೇ ಒಂದು ಜಾನರ್ ಗೆ ಸೀಮಿತವಾದ ಸಿನಿಮಾವಲ್ಲ. ಅಷ್ಟೊಂದು ಅಂಶಗಳೊಂದಿಗೆ ಸಿನಿಮಾ ಸಾಗುತ್ತದೆ.
ಇನ್ನು, ಇಡೀ ಸಿನಿಮಾದ ಹೈಲೈಟ್ ನಟ ಗಣೇಶ್. ತಮಗೆ ಸಿಕ್ಕ ಪಾತ್ರವನ್ನು ಅದ್ಭುತವಾಗಿ ನಿಭಾಹಿಸಿದ್ದಾರೆ. ತಮ್ಮ ಪಾತ್ರದಲ್ಲಿ ಎಷ್ಟು ಮಜ ಕೊಡಬಹುದೋ ಅಷ್ಟನ್ನೂ ಗಣೇಶ್ ಕೊಟ್ಟಿದ್ದಾರೆ. ಹಾಡುಗಳಲ್ಲಿ ಲವರ್‌ಬಾಯ್ ಆಗಿ ಗಣೇಶ್ ಸುಂದರ. ಚಿತ್ರದಲ್ಲಿ ಗಣೇಶ್ ಪುತ್ರ ವಿಹಾನ್ ನಟಿಸಿದ್ದು, ಮೊದಲ ಚಿತ್ರದಲ್ಲೇ ಗಮನ ಸೆಳೆದಿದ್ದಾರೆ. ನಿಶ್ವಿಕಾ ಹಾಗೂ ಸುರಭಿ ಚಿತ್ರದಲ್ಲಿದ್ದಾರಷ್ಟೇ. ನಟನೆಗೆ ಹೆಚ್ಚೇನು ಅವಕಾಶವಿಲ್ಲ. ಉಳಿದಂತೆ ರಂಗಾಯಣ ರಘು, ಗಿರಿ, ರಾಘು, ಸಾಧುಕೋಕಿಲ, ಶೋಭರಾಜ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಫ್ಯಾಮಿಲಿ ಜೊತೆ ಜಾಲಿಯಾಗಿ ನಗಬೇಕಾದರೆ ನೀವು “ಸಖತ್’ ನೋಡಬಹುದು.
ರವಿಪ್ರಕಾಶ್ ರೈ