Advertisement

ಸಾಕಾರಗೊಂಡಿತು ಪಡುಕರೆ ಜನತೆಯ ಹಲವು ದಶಕಗಳ ಕನಸು

05:12 PM Mar 15, 2017 | |

ಮಲ್ಪೆ: ಉಡುಪಿ ತಾಲೂಕಿನ ಮಲ್ಪೆ ಪಡುಕರೆ ಭಾಗದ ಜನರ ಬಹುಕಾಲದ ಬೇಡಿಕೆಗಳಲ್ಲೊಂದಾದ ಮಹತ್ವಾಕಾಂಕ್ಷೆಯ ಮಲ್ಪೆ ಪಡುಕರೆ ಸಂಪರ್ಕ ಸೇತುವೆಯ ಕನಸು ಸಾಕಾರ ಗೊಂಡಿದೆ. ಕೊನೆಗೂ ಉದ್ಘಾಟನೆಗೆ ಕಾಲ ಕೂಡಿ ಬಂದಿದ್ದು ಇದೇ ಮಾ. 18ರಂದು ಸಂಜೆ 5 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ.

Advertisement

40  ವರ್ಷಗಳ ಹೋರಾಟ
ದ್ವೀಪ ಪ್ರದೇಶವಾದ ಪಡುಕರೆಯಿಂದ ಮಲ್ಪೆಗೆ  ಇರುವ ದೂರ ಕೇವಲ 800 ಮೀಟರ್‌. ಮಲ್ಪೆಯಿಂದ ಕಾಪು ಕೈಪುಂಜಾಲುವರೆಗೆ ಉದ್ದಕ್ಕೆ ಹರಡಿ ಕೊಂಡಿರುವ ದ್ವೀಪ ಪ್ರದೇಶದ ಜನರಿಗೆ ದೋಣಿ ಬಿಟ್ಟರೆ ಹೊರಗೆ ಹೋಗಲು 10 ಕಿ.ಮೀ ದೂರ ಸುತ್ತುವರಿದು ಹೋಗಬೇಕಾಗಿದೆ. ಸುಮಾರು 15 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಇಲ್ಲಿನ ಬಹುತೇಕ ಮಂದಿ ಮೀನುಗಾರಿಕೆಯನ್ನೆ ನೆಚ್ಚಿಕೊಂಡವರಾಗಿದ್ದರಿಂದ ನದಿ ದಾಟುವ ಸಮಸ್ಯೆಯಿಂದಾಗಿ ಪ್ರತಿನಿತ್ಯ ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಿದ್ದರು. ಜೊತೆಗೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಇನ್ನಿತರ ಕೆಲಸಕ್ಕೆ ತೆರಳುವ ಮಂದಿ ನಿತ್ಯ ದೋಣಿಯನ್ನೆ ಅವಲಂಬಿಸಿಬೇಕಾಗಿತ್ತು. ಪ್ರಕೃತಿಯೊಂದಿಗೆ ಸೆಣಸಾಟ ನಡೆಸಿ ಕೊಂಡು ನೂರಾರು ವರ್ಷ ಕಳೆದಿರುವ ಇಲ್ಲಿನ ಮಂದಿ ಸೇತುವೆ ಮುಂದಿಟ್ಟು ಕೊಂಡು ಸಾಕಷ್ಟು ಹೋರಾಟವನ್ನು ನಡೆಸಿದ್ದರು.

ಈ ಹಿಂದಿನ ಸರಕಾರ ಇರುವಾಗ ಅಂದಿನ ಉಡುಪಿಯ ಶಾಸಕ ಕೆ. ರಘುಪತಿ ಭಟ್‌ ಅವರು ಸೇತುವೆ ಮಂಜೂರುಗೊಳಿಸಿ ಟೆಂಡರ್‌ ಕರೆದು ಫೆ. 10 2013 ರಲ್ಲಿ ಶಂಕು ಸ್ಥಾಪನೆಯನ್ನು ಮಾಡಿದ್ದರು. ಯೋಜಕ ಇಂಡಿಯಾ ಕಂಪೆನಿಗೆ ಗುತ್ತಿಗೆ ನೀಡಲಾಗಿತ್ತು. ಆ ನಂತರದ ದಿನಗಳಲ್ಲಿ ಸರಕಾರ ಬದಲಾವಣೆಗೊಂಡಿತು. ಕೆಲವೊಂದು ತಾಂತ್ರಿಕ ಕಾರಣಗಳಿಂದ ಉದ್ದೇಶಿತ ಯೋಜನೆಗೆ ಕೊಂಚ ಅಡೆತಡೆ ಉಂಟಾಗಿ ಕೆಲ ಸಮಯ ಹಿನ್ನಡೆ ಕಂಡಿತು. ಈ ಹಿಂದೆ 13.50ಕೋ. ರೂ.ಗೆ ಟೆಂಡರ್‌ ಅಗಿದ್ದು ಆ ಬಳಿಕ ಸೇತುವೆಯ ಅಗಲ ಮತ್ತು ಎತ್ತರವನ್ನು ವಿಸ್ತರಿಸಲಾಯಿತು. ಮರು ವಿನ್ಯಾಸದ ಬದಲಾವಣೆ ಕಾರಣದಿಂದಾಗಿ ವೆಚ್ಚವು 16.91 ಕೋ. ರೂ. ತಲುಪಿತು. ಈಗಿನ ರಾಜ್ಯ ಸರಕಾರದ ಮೀನುಗಾರಿಕಾ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಸೇತುವೆ ನಿರ್ಮಾಣದಲ್ಲಿ ಹೆಚ್ಚಿನ ಕಾಳಜಿ ವಹಿಸಿ ಸೇತುವೆಗೆ ಹೆಚ್ಚುವರಿ ಅನುದಾನ ಮಂಜೂರು ಮಾಡಿಸಿ ಸುಂದರ ಸೇತುವೆ ನಿರ್ಮಾಣ ಮಾಡುವಲ್ಲಿ ಸಫಲತೆಯನ್ನು ಕಂಡುಕೊಂಡಿದ್ದರು.

16.91 ಕೋ ರೂ. ವೆಚ್ಚದ ಸೇತುವೆ
8 ಕೋ. ರೂ ನಗರೋತ್ಥಾನ, 5.5 ಕೋ. ಅಮೃತ ಮಹೋತ್ಸವ ನಿಧಿ 50 ಲಕ್ಷ ರೂ. ಶಾಸಕರ ವಿಶೇಷ ನಿಧಿ, 2 ಕೋ. ನಗರಸಭೆ, 90 ಲಕ್ಷ ರೂ. ಅಮೃತ ಮಹೋತ್ಸವ ಬಡ್ಡಿ ಒಟ್ಟು 16.91ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಈ ಸೇತುವೆ ಒಟ್ಟು 9 ಪಿಲ್ಲರ್‌ಗಳನ್ನೊಳಗೊಂಡಿದೆ. ನೀರಿನ ಮೇಲಿರುವ ಉದ್ದ 315 ಮೀ. ಸೇತುವೆ ಇಕ್ಕೆಲಗಳಲ್ಲಿ 90 ಮೀ (ಪಡುಕರೆ ಭಾಗ) 200 ಮೀ (ಮಲ್ಪೆ ಭಾಗ) ಹೆಚ್ಚುವರಿ ಜೋಡಣೆ ಮಾಡಲಾಗಿದೆ. ಅಗಲ 6.25 ಮೀ ಎರಡೂ ಬದಿಗೆ 0.5 ಮೀ.ಅಗಲದಲ್ಲಿ ರಕ್ಷಣೆಗೆ ಕರ್ಬ್ (ದಂಡೆ) ರಚಿಸಲಾಗಿದೆ. ಸಂಚಾರಕ್ಕೆ 17 ಅಡಿ ಅಗಲದ ರಸ್ತೆ ದೊರೆತಿದೆ.

ಪಡುಕರೆ ಪ್ರವಾಸೋದ್ಯಮ ಕೇಂದ್ರ
ಪಡುಕರೆ ಅತ್ಯಂತ ಮನೋಹರವಾದ ಕಡಲ ತಡಿಗಳಲ್ಲಿ ಒಂದು. ಸುಂದರ ಸಮುದ್ರ ಕಿನಾರೆಯನ್ನು ಹೊಂದಿದೆ. ಧಾರ್ಮಿಕವಾಗಿಯೂ ಇಲ್ಲಿ ಹಲವಾರು ಭಜನಾ ಮಂದಿರಗಳಿವೆ. ವಿಶೇಷವಾಗಿ ಪಡುಕರೆ ಬೀಚ್‌ನ್ನು ಮಲ್ಪೆ ಬೀಚ್‌ ಅಭಿವೃದ್ದಿ ಸಮಿತಿಯ ಅಧೀನಕ್ಕೆ ತರಲು ಈಗಾಗಲೇ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ, ಪಡುಕರೆ ಬೀಚ್‌ನ್ನು  ಮಲ್ಪೆ ಬೀಚ್‌ನಂತೆ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ದಿ ಪಡಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಸೇತುವೆ ನಿರ್ಮಾಣದಿಂದಾಗಿ ಇನ್ನು ಮುಂದೆ ಮಲ್ಪೆ ಪಡುಕರೆ ಪ್ರವಾಸೋದ್ಯಮ ಕೆಂದ್ರವಾಗಿ ಬಹಳ ಎತ್ತರಕ್ಕೆ ಬೆಳೆಯುವುದರಲ್ಲಿಯೂ ಸಂದೇಹ ಇಲ್ಲವೆನ್ನಲಾಗಿದೆ.

Advertisement

ಉದಯವಾಣಿಗೆ ಕೃತಜ್ಞತೆ
ಕಳೆದ ಒಂದೂವರೆ ದಶಕಗಳಿಂದ ಹಲವು ಬಾರಿ ಈ ಸಂಪರ್ಕ ಸೇತುವೆ ಕುರಿತು ಉದಯವಾಣಿ ಬೆಳಕು ಚೆಲ್ಲುತ್ತ ಬಂದಿದೆ. ನಿರಂತರ ಸಚಿತ್ರ ವರದಿಯೊಂದಿಗೆ ಇಲ್ಲಿನ ಸಮಸ್ಯೆಯ ಬಗ್ಗೆ ಆಡಳಿತದ ಗಮನಕ್ಕೆ ತರುತ್ತಲೇ ಇತ್ತು. ಇದೀಗ ತಮ್ಮ ಬಹುಕಾಲದ ಬೇಡಿಕೆ ಈಡೇರಿದ ಸಂತಸದೊಂದಿಗೆ ಅಲ್ಲಿನ ಜನತೆ ಉದಯವಾಣಿಗೂ ಕೃತಜ್ಞತೆ  ಸಲ್ಲಿಸಿದ್ದಾರೆ.

ಹಿಂದಿನ ಸರಕಾರ ಸೇತುವೆಗೆ ಮಂಜೂರಾತಿ ನೀಡಿದ್ದರೂ ಕೂಡ ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳು ಆಗಿದ್ದು ಸಿದ್ದರಾಮಯ್ಯ ಸರಕಾರ ಬಂದ ಮೇಲೆ.  2013ರಲ್ಲಿ  ನಾನು ಶಾಸಕನಾಗಿ ಬಂದ ಬಳಿಕ ಹಣಕಾಸಿನ ಬಿಡುಗಡೆ ಮಾಡಿಸಲಾಗಿದೆ. ವಿನ್ಯಾಸದ ಬದಲಾವಣೆ, ಡಿಸೈನ್‌ ಅನುಮೋದನೆ, ಪಿಎಂಸಿ ಸಮಿತಿ ರಚನೆಯನ್ನು ಮಾಡಲಾಗಿದೆ. ಸೇತುವೆಯ ಅಗಲವನ್ನು  4.25 ಮೀ. ನಿಂದ 5.25 ಮೀಟರ್‌ ಅಗಲಕ್ಕೆ ವಿಸ್ತರಣೆ ಮತ್ತು ದೋಣಿಗೆ ಸುಗಮ ಸಂಚಾರಕ್ಕೆ ಸೇತುವೆ ಎತ್ತರಗೊಳಿಸಲಾಗಿದ್ದರಿಂದ ಹೆಚ್ಚುವರಿ ಮೊತ್ತವನ್ನು ಕಾಯ್ದಿರಿಸಬೇಕಾಯಿತು. ಸುಮಾರು 1.10 ಕೋ. ರೂ.  ವೆಚ್ಚದಲ್ಲಿ ಸೇತುವೆಯ ಎರಡೂ ಕಡೆ ಸಂಪರ್ಕ ರಸ್ತೆ ನಿರ್ಮಾಣ ಮಾಡಲಾಗಿದೆ. ವಿನ್ಯಾಸದ ಬದಲಾವಣೆಯಿಂದಾಗಿ ವೆಚ್ಚವು 13.50 ಕೋ ರೂ ನಿಂದ 16.91 ಕೋಟಿಗೆ ತಲುಪಿತು.
– ಪ್ರಮೋದ್‌ ಮಧ್ವರಾಜ್‌, ಮೀನುಗಾರಿಕಾ ಸಚಿವರು

1973 ರಿಂದ ಪಡುಕರೆ ಯುವಕ ಮಂಡಲದ, ದಿ. ಅಣ್ಣಯ ಟಿ. ಕುಂದರ್‌ ಸೇರಿದಂತೆ ಅನೇಕ ಹಿರಿಯರ ನೇತೃತ್ವದಲ್ಲಿ  ಸಂಪರ್ಕ ಸೇತುವೆಗಾಗಿ ಹೋರಾಟ ನಡೆಸುತ್ತಾ ಬಂದಿತ್ತು.  ಅಂದಿನ ಸಂಸದ ರಂಗನಾಥ್‌ ಶೆಣೈಯಿಂದ ಹಿಡಿದು ಅನಂತರ ಬಂದ ಎಲ್ಲಾ ಸಂಸದ, ಮಂತ್ರಿ, ಶಾಸಕರಿಗೆ ಮನವಿ ಮಾಡಿ ಒತ್ತಾಯಿಸಲಾಗಿತ್ತು. ಕಡೆಕಾರ್‌ ಸೀಬೀÅಜ್‌ ಬಳಿ ಸೇತುವೆ ನಿರ್ಮಾಣಕ್ಕೆ ಎಸ್ಟಿಮೇಟ್‌ ಆಗಿ ಆನಂತರ ಆ ಪ್ರಸ್ತಾವನೆಯೂ ಬಿದ್ದು ಹೋಯಿತು. ಮಾಜಿ ಶಾಸಕ ರಘುಪತಿ ಭಟ್‌ ಅವಧಿಯಲ್ಲಿ ಸೇತುವೆಗೆ ಮಂಜೂರಾತಿ ದೊರೆತು ಶಂಕು ಸ್ಥಾಪನೆಯೂ ಆಯಿತು.  ಮುಂದೆ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ವಿಶೇಷ ಮುತುವರ್ಜಿ ವಹಿಸಿದ್ದರಿಂದ ಸುದೃಢ‌ವಾದ ಸೇತುವೆ ಪೂರ್ಣಗೊಳ್ಳಲು ಸಾಧ್ಯವಾಯಿತು.
– ಜಗನ್ನಾಥ್‌ ಕಡೆಕಾರ್‌, ಪಡುಕರೆ ಯುವಕ ಮಂಡಲದ ಅಧ್ಯಕ್ಷರು

– ನಟರಾಜ್‌ ಮಲ್ಪೆ
ಚಿತ್ರ: ಪ್ರೇಮ್‌, ಥರ್ಡ್‌ ಐ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next