ಬೆಂಗಳೂರು: ರಾಜ್ಯ ಸರ್ಕಾರಿ ನೌಕರ, ಸಿಬ್ಬಂದಿಗೆ ಸಕಾಲ ದಡಿ ಕಲ್ಪಿಸಿರುವ 21 ಸೇವೆಗಳ ಪೈಕಿ 18 ಸೇವೆಗಳನ್ನು ಕೈಬಿಡುವ ಚಿಂತನೆ ಬಗ್ಗೆ ಸರ್ಕಾರಿ ನೌಕರರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರೆ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಹಾಲಿ ಸೇವೆಗಳು ಸಕಾಲದಡಿ ಮುಂದುವರಿಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಉದಯವಾಣಿ ವರದಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಾರ್ವಜನಿಕರಂತೆ ಸರ್ಕಾರಿ ನೌಕರ, ಸಿಬ್ಬಂದಿಗೂ ಸಕಾಲದಡಿ ಆಯ್ದ ಸೇವೆಗಳನ್ನು ಕಲ್ಪಿಸಿರುವುದು ಸೂಕ್ತವಾಗಿದೆ. ಸರ್ಕಾರಿ ನೌಕರ, ಸಿಬ್ಬಂದಿಗೆ ಈಗಾಗಲೇ ಸಕಾಲ ದಡಿ ಕಲ್ಪಿಸಿರುವ ಸೇವೆಗಳನ್ನು ಮುಂದುವರಿಸಬೇಕೆಂಬುದರ ಪರವಾಗಿ ನಾನು ಗಟ್ಟಿಯಾಗಿ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.
ಈಗ ಎಲ್ಲೆಡೆ ಲಂಚ, ಭ್ರಷ್ಟಾಚಾರ ಹೆಚ್ಚಾಗಿದ್ದು, ಕಾಲಮಿತಿಯಲ್ಲಿ ಯಾವುದೇ ಸೇವೆ ಸಿಗುತ್ತಿಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ಸಾಕಷ್ಟು ಸೇವೆಗಳನ್ನು ಸಕಾಲದಡಿ ತರಲಾಗಿತ್ತು. ಎಲ್ಲರಿಗೂ ಕಾಲಮಿತಿಯಲ್ಲಿ ಸರ್ಕಾರಿ ಸೇವೆಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯ. ಅದಕ್ಕೆ ಸರ್ಕಾರಿ ಅಧಿಕಾರಿ, ನೌಕರರು ಹೊರತಲ್ಲ. ಅಧಿಕಾರಿ, ನೌಕರರು ವೇತನ ಇತರೆ ಸೌಲಭ್ಯ ಪಡೆಯಲು ಸಮಯ ವ್ಯರ್ಥ ಮಾಡಿದರೆ ತಮ್ಮ ಕರ್ತವ್ಯ ನಿರ್ವಹಿಸಲು ಅಡ್ಡಿಯಾಗಲಿದೆ. ಹಾಗಾಗಿ ನೌಕರ, ಸಿಬ್ಬಂದಿಗೆ ಸಂಬಂಧಪಟ್ಟ ಸೇವೆಗಳು ಸಕಾಲ ವ್ಯಾಪ್ತಿಯಲ್ಲಿರಬೇಕು ಎಂಬುದರಲ್ಲಿ ಎರಡು ಮಾತಿಲ್ಲ ಎಂದು ತಿಳಿಸಿದ್ದಾರೆ.
ಸಕಾಲ ಆರಂಭವಾದಾಗ 185 ಸೇವೆಗಳನ್ನು ಅದರ ವ್ಯಾಪ್ತಿಗೆ ತರಲಾಯಿತು. ಕೇವಲ ಒಂದು ವರ್ಷದಲ್ಲಿ ವಿಲೇವಾರಿಗೆ ಬಾಕಿ ಉಳಿದ ಕಡತಗಳ ಸಂಖ್ಯೆ ಹಾಗೂ ಸರ್ಕಾರಿ ಸೇವೆ ಪಡೆಯಲು ಬಾಕಿಯಿದ್ದ ಪ್ರಕರಣಗಳ ಪ್ರಮಾಣದಲ್ಲಿ ಶೇ.30ರಷ್ಟು ಇಳಿಕೆಯಾಗಿತ್ತು. ಕೆಳಹಂತದಲ್ಲೂ ಭ್ರಷ್ಟಾಚಾರ ಕಡಿಮೆಯಾಗಿತ್ತು ಎಂದು ಸ್ಮರಿಸಿದ್ದಾರೆ.
ಆದರೆ ಲಂಚಕ್ಕಾಗಿಯೇ ಇರುವ ಸರ್ಕಾರಗಳು ಬಂದಾಗ ನಡೆಯುವುದೇ ಬೇರೆ. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗಲೇ ಸಕಾಲವನ್ನು ಅರ್ಧ ಸಾಯಿಸಿದ್ದರು. ಇದೀಗ ಪೂರ್ಣ ಪ್ರಮಾಣದಲ್ಲಿ ಸಾಯುವ ಹಂತ ತಲುಪಿದೆ. ಎರಡೂ ಪಕ್ಷಗಳು ಲೂಟಿಗೆಂದೇ ಬಂದಿದ್ದು, ಈ ಪಕ್ಷಗಳಿಗೆ ಜನರಿಗೆ ಸೇವೆ ಸಲ್ಲಿಸುವುದಕ್ಕಿಂತ ಕಿಸೆ ತುಂಬಿಸಿಕೊಳ್ಳುವುದೇ ಮುಖ್ಯ ಉದ್ದೇಶದಂತಿದೆ. ಸಕಾಲದಡಿ ಈಗಿರುವ ಎಲ್ಲ ಸೇವೆ ಮುಂದುವರಿಯಬೇಕು. ಯಾವುದನ್ನೂ ಸಕಾಲದಿಂದ ಹೊರಗಿಡಬಾರದು ಎಂದಿದ್ದಾರೆ.