ಮಂಡ್ಯ: ಸಕಾಲ ವಿಲೇವಾರಿ ಪ್ರಮಾಣದಲ್ಲಿ ಮಂಡ್ಯ ಜಿಲ್ಲೆ ಉತ್ತಮ ಪ್ರದರ್ಶನ ಹಾಗೂ ಸಕಾಲ ಸಪ್ತಾಹದಲ್ಲಿ ಮಂಡ್ಯ ಪ್ರಥಮ ಸ್ಥಾನ ಪಡೆದಿದೆ ಎಂದು ಸಚಿವ ಸುರೇಶ್‌ಕುಮಾರ್ ಶ್ಲಾಘಿಸಿದರು.
2020 ಅಕ್ಟೋಬರ್ ತಿಂಗಳ ಸಕಾಲ ಸಪ್ತಾಹವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ಅಡಿಯಲ್ಲಿ ಆಚರಿಸಲಿದ್ದು, ವೀಡಿಯೋ ಕಾನರೆನ್ಸ್‌ನ ಮೂಲಕ ಸಕಾಲ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಮಂಡ್ಯ ಜಿಲ್ಲೆ ಸಕಾಲ ಸಪ್ತಾಹದಲ್ಲಿ ಪ್ರಥಮ ಸ್ಥಾನ ಪಡೆದಿದೆ, ಎರಡನೇ ಸ್ಥಾನವು ಚಿಕ್ಕಮಗಳೂರು, ಮೂರನೇ ಸ್ಥಾನ ಚಿಕ್ಕಬಳ್ಳಾಪುರ, ಕೊನೆಯ ಸ್ಥಾನವನ್ನು ಬೆಂಗಳೂರು ನಗರ ಪಡೆದಿದ್ದು, ಬೀದರ್ ಜಿಲ್ಲೆಯು 29ನೇ ಸ್ಥಾನ, ರಾಯಚೂರು ಜಿಲ್ಲೆಯು 28ನೇ ಸ್ಥಾನವನ್ನು ಪಡೆದಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ ಅವರು ಡೀಸಿ ಕಚೇರಿಯ ವೀಡಿಯೋ ಕಾನರೆನ್ಸ್ ಸಭೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆ ಮುಖ್ಯಸ್ಥರುಗಳ ಜೊತೆ ಸಭೆ ನಡೆಸಿ, ಸಕಾಲ ಸಪ್ತಾಹಕುರಿತು ಚರ್ಚಿಸಿದರು. ಅಪರ ಜಿಲ್ಲಾಧಿಕಾರಿ ಶೈಲಜ, ಜಿಪಂ ಉಪಕಾರ್ಯದರ್ಶಿ ಡಿ.ಪ್ರಕಾಶ್ ಹಾಜರಿದ್ದರು.
ಶೇ.95.78ರಷ್ಟು ಸಾಧನೆ : ಸಕಾಲದಡಿಯಲ್ಲಿ ಒಟ್ಟು 98 ಇಲಾಖೆಗಳು ಮತ್ತು 1025 ಸೇರ್ಪಡೆಯಾದ ಸೇವೆಗಳಿದ್ದು, ಸಕಾಲ ಅರ್ಜಿಗಳ ವಿಲೇವಾರಿ ಪ್ರಮಾಣ ಅಕ್ಟೋಬರ್ 2020 ಮಾಹೆಯಲ್ಲಿ ಶೇ.95.78ರಷ್ಟು ಸಾಧನೆ ಆಗಿದೆ. ಈ ಮಾಹೆಯಲ್ಲಿ 22,21,919 ಅರ್ಜಿಗಳು ಸ್ವೀಕೃತಗೊಂಡು, 22,41,057 ಅರ್ಜಿಗಳು ವಿಲೇವಾರಿಯಾಗಿವೆ ಮತ್ತು 21,46,380 ಅರ್ಜಿಗಳು ನಿಗದಿತ ಸಮಯದಲ್ಲಿ ವಿಲೇವಾರಿಗೊಂಡಿವೆ.