Advertisement

30ರಿಂದ ಸಕಾಲ ಸಪ್ತಾಹ: ಡಿಸಿ ಶಿವಕುಮಾರ್‌

04:41 PM Nov 28, 2020 | Suhan S |

ಶಿವಮೊಗ್ಗ: ಸಾರ್ವಜನಿಕರಲ್ಲಿ ಸಕಾಲ ಯೋಜನೆಯ ಕುರಿತು ಹೆಚ್ಚಿನ ಅರಿವು ಮೂಡಿಸುವ ನಿಟ್ಟನಲ್ಲಿ ಹಾಗೂ ಸಕಾಲದಡಿ ಸ್ವೀಕರಿಸಿ ಬಾಕಿ ಉಳಿದ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇ ಮಾಡಲು ನ.30ರಿಂದ ಎರಡು ಹಂತಗಳಲ್ಲಿ ಸಕಾಲ ಸಪ್ತಾಹವನ್ನು ಆಚರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ.30ರಿಂದ ಡಿ.5ರವರೆಗೆ ನಗರಾಭಿವೃದ್ಧಿ, ಕಂದಾಯ, ಸಾರಿಗೆ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗಳಲ್ಲಿ ಹಾಗೂ ಡಿ.7 ರಿಂದ ಡಿ.11ರವರೆಗೆ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಸಪ್ತಾಹವನ್ನು ಆಚರಿಸಲಾಗುವುದು ಎಂದು ಹೇಳಿದ್ದಾರೆ.

ಸಪ್ತಾಹದಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳು: ಹೊಸದಾಗಿ ಸ್ವೀಕರಿಸಿರುವ ಅರ್ಜಿಗಳನ್ನು ಸಕಾಲದಡಿ ಸ್ವೀಕರಿಸಿ ನಿಗದಿತ ಕಾಲಮಿತಿಯಲ್ಲಿ ವಿಲೇ ಮಾಡುವುದು, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಸಕಾಲ ಮಿಷನ್‌ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು, ಸಕಾಲ ತಂಡದಿಂದ ಕಚೇರಿಗಳಿಗೆ ಭೇಟಿ ಹಾಗೂ ತಪಾಸಣೆ, ಸಾರ್ವಜನಿಕರ ಅಭಿಪ್ರಾಯ ಕ್ರೋಢೀಕರಿಸಲು ಹೆಲ್ಪ್ ಡೆಸ್ಕ್ ಸಹಾಯದೊಂದಿಗೆ ಪ್ರಶ್ನಾವಳಿಯನ್ನು ಸಾರ್ವಜನಿಕರಿಂದ ಭರ್ತಿ ಮಾಡಿಸುವುದು ಸೇರಿದಂತೆ ಸಕಾಲದ ಕುರಿತು ಪ್ರಚಾರ ಕಾರ್ಯಕ್ರಮಗಳನ್ನು ಸಪ್ತಾಹದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಸೂಚನೆ: ಸಪ್ತಾಹದ ಕುರಿತು ಗುರುವಾರ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ನಡೆಸಿದ ಸಕಾಲ ಯೋಜನೆಯ ಹೆಚ್ಚುವರಿ ಮಿಷನ್‌ ನಿರ್ದೇಶಕ ಡಾ| ಬಿ.ಆರ್‌.ಮಮತಾ, ಸಕಾಲ ಸಪ್ತಾಹದ ಸಂದರ್ಭದಲ್ಲಿ ಸಕಾಲ ಯೋಜನೆಯ ಬಗ್ಗೆ ಜನರಲ್ಲಿ ವ್ಯಾಪಕವಾದ ಅರಿವು ಮೂಡಿಸುವ ಕಾರ್ಯ ಮಾತ್ರವಲ್ಲದೆ, ಬಾಕಿಇರುವ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಈವರೆಗೆ 22,88,81,652 ಅರ್ಜಿಗಳನ್ನು ಸ್ವೀಕರಿಸಿ 22,82,55,866 ಅರ್ಜಿಗಳನ್ನು ವಿಲೇ ಮಾಡಲಾಗಿದೆ ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next