Advertisement

ನಂದಿ ನಾಡ ಕಚೇರಿಯಲ್ಲಿ ಸಕಾಲಸೇವೆ ಸ್ಥಗಿತ ಸಾರ್ವಜನಿಕರ ಪರದಾಟ

09:03 PM Mar 19, 2021 | Team Udayavani |

ಚಿಕ್ಕಬಳ್ಳಾಪುರ : ಸರ್ಕಾರದ ಸೌಲಭ್ಯಗಳನ್ನು ಜನರ ಮನೆಬಾಗಿಲಿಗೆ ತಲುಪಿಸಲು ಸರ್ಕಾರ “ಜಿಲ್ಲಾಡಳಿತದ ನಡಿಗೆ ಗ್ರಾಮದ ಕಡೆಗೆ”  ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ನಡೆಸಿ ಜನರ ವಿಶ್ವಾಸವನ್ನುಗಳಿಸುವ ಕೆಲಸವನ್ನು ಮಾಡುತ್ತಿದೆ. ಮತ್ತೊಂದಡೆ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಎ4 ಪೇಪರ್ ಹಾಗೂ ಇಂಕ್ ಖಾಲಿಯಾಗಿದೆಯೆಂದು  ತಾತ್ಕಾಲಿಕವಾಗಿ ಸಕಾಲ ಸೇವೆಯನ್ನು ಸ್ಥಗಿತಗೊಳಿಸಿರುವ ಅಂಶ ಬೆಳಕಿಗೆ ಬಂದಿದೆ.

Advertisement

ಹೌದು ಚಿಕ್ಕಬಳ್ಳಾಪುರ ತಾಲೂಕಿನ ನಂದಿ ನಾಡ ಕಚೇರಿಯ ಹೊರಭಾಗದಲ್ಲಿ ಎ4 ಪೇಪರ್ ಹಾಗೂ ಇಂಕ್ ಖಾಲಿ ಆಗಿರುವುದರಿಂದ ತಾತ್ಕಾಲಿಕವಾಗಿ ಸಕಾಲ ಸೇವೆಯನ್ನು ಸ್ಥಗಿತಗೊಂಡಿರುತ್ತದೆ ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿಸಿಕೊಂಡಿರುವ ಫಲಕ ಅಳವಡಿಸಿದ್ದಾರೆ ಇದರಿಂದ ಸಾರ್ವಜನಿಕರ ಸೇವೆ ಪಡೆಯಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸಕಾಲಸೇವೆಯನ್ನು ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯದಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡು ಬಂದಿದ್ದು ಇದೀಗ ಪೇಪರ್ ಮತ್ತು ಇಂಕ್ ಇಲ್ಲವೆಂದು ತಾತ್ಕಾಲಿಕವಾಗಿ ಸಕಾಲ ಸೇವೆಯನ್ನು ಸ್ಥಿಗಿತಗೊಂಡಿದ್ದರಿಂದ ಮುಂದಿನ ತಿಂಗಳು ಸಕಾಲಸೇವೆಯನ್ನು ಜಿಲ್ಲೆ ಹಿಂದುಳಿಯುವುದೇ? ಎಂಬ ಅನುಮಾನ ಕಾಡುವಂತಾಗಿದೆ ಸಾಮಾನ್ಯವಾಗಿ ಮಾರ್ಚ್ ತಿಂಗಳ ಅಂತ್ಯದೊಳಗೆ ವಿವಿಧ ಇಲಾಖೆಯ ಅಧಿಕಾರಿಗಳು ಸರ್ಕಾರದಿಂದ ಬಂದಿರುವ ಅನುದಾನಗಳನ್ನು ಖರ್ಚು ಮಾಡಿ ಕಚೇರಿಗಳಿಗೆ ಅಗತ್ಯವಾಗಿ ಬೇಕಾಗಿರುವ ಸೌಲಭ್ಯಗಳು ಮತ್ತು ಸಲಕರಣೆಗಳನ್ನು ಪಡೆಯಲು ಕಾಳಜಿವಹಿಸುತ್ತಾರೆ ಆದರೇ ನಂದಿ ನಾಡ ಕಚೇರಿಯಲ್ಲಿ ಪೇಪರ್ ಮತ್ತು ಇಂಕ್ ಇಲ್ಲವೆಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ನಾಡ ಕಚೇರಿಗೆ ಎ4 ಪೇಪರ್ ಮತ್ತು ಇಂಕ್ ಖರೀದಿ ಮಾಡಲು ಅಲಾಟ್‍ಮೆಂಟ್ ನೀಡಿಲ್ಲ ಎನ್ನಲಾಗಿದೆ ಇದರಿಂದ ನಾಡ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಸ್ವಂತ ಖರ್ಚಿನಲ್ಲಿ ಪೇಪರ್ ಮತ್ತು ಇಂಕ್ ಖರೀದಿ ಮಾಡಿ ಸರ್ಕಾರಿ ಸೇವೆಯನ್ನು ಒದಗಿಸಿದ್ದಾರೆ ಆದರೇ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಪ್ರತಿಯೊಂದಕ್ಕೆ ಅಲಾಟ್‍ಮೆಂಟ್ ಬಾರದೆ ಯಾವುದೇ ರೀತಿಯ ವಸ್ತುಗಳನ್ನು ಖರೀದಿ ಮಾಡಲು ಸಾಧ್ಯವಾಗದೆ ಸಾರ್ವಜನಿಕರು ಪರದಾಡುವಂತಾಗಿದೆ.

ಈ ಕುರಿತು ಚಿಕ್ಕಬಳ್ಳಾಪುರ ಪ್ರಭಾರ ತಹಶೀಲ್ದಾರ್ ತುಳಸಿ ಅವರನ್ನು ಉದಯವಾಣಿ ಸಂಪರ್ಕಿಸಿದಾಗ ಜಿಲ್ಲಾಧಿಕಾರಿಗಳು ಕಚೇರಿಯಿಂದ ಅಲಾಟಮೆಂಟ್ ಬಂದಿಲ್ಲ ಅನಿಸುತ್ತದೆ ಹೀಗಾಗಿ ಸಕಾಲಸೇವೆಯನ್ನು ಸ್ಥಗಿತಗೊಂಡಿರಬಹುದು ತಾವು ಈ ಸಂಬಂಧ ನಾಡ ಕಚೇರಿಯ ಉಪ ತಹಶೀಲ್ದಾರ್ ಅವರನ್ನು ವಿಚಾರಣೆ ಮಾಡಿ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದರು.

Advertisement

ಅಪರ ಜಿಲ್ಲಾಧಿಕಾರಿ ಅಮರೇಶ್ ಅವರನ್ನು ಸಂಪರ್ಕಿಸಿದಾಗ ನಾಡ ಕಚೇರಿಯಲ್ಲಿ ಪೇಪರ್ ಮತ್ತು ಇಂಕ್ ಇಲ್ಲವೆಂದು ಸಕಾಲ ಸೇವೆ ಸ್ಥಗಿತಗೊಂಡಿರುವುದು ತಮ್ಮ ಗಮನಕ್ಕೆ ಬಂದಿಲ್ಲ ತಾವು ಈ ಸಂಬಂಧ ಚಿಕ್ಕಬಳ್ಳಾಪುರ ತಹಶೀಲ್ದಾರ್ ಹಾಗೂ ನಾಡಕಚೇರಿಯ ತಹಶೀಲ್ದಾರ್ ಅವರನ್ನು ವಿಚಾರಿಸಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳುತ್ತೇನೆ.

Advertisement

Udayavani is now on Telegram. Click here to join our channel and stay updated with the latest news.

Next