Advertisement
ಬರೆಯಬೇಕು. ಆ ಮೂಲಕವೇ ಬೆಳೆಯಬೇಕು. ಕವಿ ಅನ್ನಿಸಿಕೊಳ್ಳಬೇಕು. ಲೇಖಕನಾಗಿ ಹೆಸರು ಮಾಡಬೇಕು. ನನ್ನೆದೆಯ ಪಿಸುಮಾತುಗಳನ್ನು. ಸ್ವಗತಗಳನ್ನು ಹಂಚಿಕೊಳ್ಳಬೇಕು. ಪ್ರಶಸ್ತಿಗಳನ್ನು ಪಡೆಯಬೇಕು. ಆ ಮೂಲಕ ಓದುಗರ, ಗಣ್ಯರ ಗಮನ ಸೆಳೆಯಬೇಕು. ಯುವಬರಹಗಾರ, ವರ್ಷದ ಲೇಖಕ, ಉದಯೋನ್ಮುಖ ಪ್ರತಿಭೆ, ಭರವಸೆಯ ಕವಿ- ಇಂಥವೇ ಹಲವು ಹೊಗಳಿಕೆಗೆ ಪಾತ್ರನಾಗಬೇಕು…
Related Articles
Advertisement
ಗುರುಗಳ ಸೂಚನೆಯನ್ನು ಪ್ರದೀಪ ತಪ್ಪದೇ ಪಾಲಿಸಿದ. ಪರಿಣಾಮ, ಅವನ ಬರಹಗಳು, ಕಥೆಗಳು ನಿಧಾನಕ್ಕೆ ಜನಪ್ರಿಯ ಆಗತೊಡಗಿದವು. ಕೆಲವರಂತೂ ಅವನನ್ನು ಫೇಸ್‌ಬುಕ್ ಕವಿ, ಫೇಸ್‌ಬುಕ್ ಸ್ಟಾರ್ ಎಂದೇ ಗುರುತಿಸತೊಡಗಿದರು. ಒಂದೆರಡು ಸಂದರ್ಭದಲ್ಲಿ ಕತೆ ಚೆನ್ನಾಗಿಲ್ಲ, ಲೇಖನದಲ್ಲಿ ಹೇಳಿಕೊಳ್ಳುವಂಥ ಕ್ವಾಲಿಟಿಯೇ ಇಲ್ಲ ಎಂದು ನಾಲ್ಕಾರು ಮಂದಿ ಕಮೆಂಟ್ ಹಾಕಿದ್ದರು. ಅದನ್ನು ನೋಡಿ ಪ್ರದೀಪನಿಗೆ ಬಿ.ಪಿ. ಜಾಸ್ತಿಯಾಗಿತ್ತು. ಈ ಸಂದರ್ಭದಲ್ಲಿ ಆತ ಮತ್ತೆ ಶ್ರೀಪಾದರಾಯರ ಬಳಿಗೇ ಬಂದ. ‘ಯಾರೋ ಕಿಡಿಗೇಡಿಗಳು ಹೀಗೆಲ್ಲಾ ಮಾಡ್ತಿದಾರೆ ಸರ್. ಅವರ ಕಮೆಂಟ್‌ಗೆ ವಿರುದ್ಧವಾಗಿ, ನನ್ನ ಫ್ರೆಂಡ್ಸ್ ಕಡೆಯಿಂದ ಹತ್ತು ಕಮೆಂಟ್ ಹಾಕಿಸಿ ಅವರ ಬಾಯಿ ಮುಚ್ಚಿಸಿದ್ರೆ ಹೇಗೆ?’ -ಎಂದು ಕೇಳಿದ. ‘ಅವರು ಸುಮ್ಮನಾಗ್ತಾರೆ ಅಂತ ಏನು ಗ್ಯಾರಂಟಿ ಇದೆಯಯ್ಯ? ಅವರೂ ನಿನ್ನ ಥರಾನೇ ಯೋಚನೆ ಮಾಡಿದ್ರೆ ಕಷ್ಟ ಆಗುತ್ತೆ. ಟೀಕೆಗಳು ಬಂದಾಗ ಸಿಟ್ಟಾಗಬೇಡ. ಗಾಬರಿಯಾಗುವುದೂ ಬೇಡ. ಟೀಕಿಸುವವರನ್ನ, ಅವರ ಕಮೆಂಟ್‌ಗಳನ್ನ ನೆಗ್ಲೆಕ್ಟ್ ಮಾಡೋದು ಕಲಿತ್ಕೊ. ಒಬ್ಬ ಲೇಖಕ, ಜಗತ್ತನ್ನೆಲ್ಲ ಮೆಚ್ಚಿಸಲು ಆಗಲ್ಲ…’ ಮೇಷ್ಟ್ರು ಮತ್ತೆ ಬುದ್ಧಿ ಹೇಳಿದರು.
ಈ ಮಧ್ಯೆ ಪ್ರದೀಪ ಒಂದು ಸಂಗತಿಯನ್ನು ಗಮನಿಸಿದ್ದ. ಅವನ ಪ್ರತಿಯೊಂದು ಫೇಸ್‌ಬುಕ್ ಪೋಸ್ಟ್‌ಗೂ ‘ಕೀರ್ತಿ’ ಅನ್ನುವವರು ತಪ್ಪದೇ ಕಮೆಂಟ್ ಹಾಕುತ್ತಿದ್ದರು. ಸ್ವಾರಸ್ಯವೆಂದರೆ, ಅವರ ಕಮೆಂಟ್‌ನಲ್ಲಿ ಒಂದೇ ಒಂದು ಅಕ್ಷರವೂ ಇರುತ್ತಿರಲಿಲ್ಲ. ಬದಲಿಗೆ, ಎಮೋಜಿ ಇರುತ್ತಿತ್ತು. ನಗುವನ್ನು ಸೂಚಿಸುವಂತಿದ್ದ ಆ ಎಮೋಜಿಗಳ ಮೂಲಕ ಅವರು ಹೊಗಳುತ್ತಿದ್ದಾರಾ ಅಥವಾ ಟೀಕಿಸುತ್ತಿದ್ದಾರಾ ಎಂಬುದೂ ಪ್ರದೀಪನಿಗೆ ಅರ್ಥವಾಗಲಿಲ್ಲ. ಈ ಕುರಿತು ಒಂದಿಷ್ಟು ತಲೆಕೆಡಿಸಿಕೊಳ್ಳಬೇಕು ಅಂದುಕೊಂಡಾಗೆಲ್ಲಾ- ‘ಫೇಸ್‌ಬುಕ್ ಪೋಸ್ಟ್‌ಗಳ ಕುರಿತು ಜಾಸ್ತಿ ಯೋಚನೆ ಮಾಡಬೇಡ’ ಎಂದಿದ್ದ ಮೇಷ್ಟ್ರ ಮಾತು ನೆನಪಾಗಿ ಸುಮ್ಮನಾಗುತ್ತಿದ್ದ. ಆದರೆ, ಪ್ರತಿಯೊಂದು ಪೋಸ್ಟ್‌ಗೂ ಎಮೋಜಿಯ ಕಮೆಂಟ್ ತಪ್ಪದೇ ಬರಲು ಶುರುವಾದಾಗ, ಪ್ರದೀಪನಿಗೆ ಕಿರಿಕಿರಿಯಾಗತೊಡಗಿತು.
ಕಡೆಗೊಮ್ಮೆ- ‘ಮಾನ್ಯರೆ, ನೀವು ಯಾರು? ಒಂದು ಅಕ್ಷರ ಟೈಪ್ ಮಾಡಿ ಅನಿಸಿಕೆ ಹೇಳಲು ಸಾಧ್ಯವಿಲ್ಲ ಅಂದಮೇಲೆ ತೆಪ್ಪಗಿದ್ದು ಬಿಡಿ. ನೀವು ಕಳಿಸುವ ಎಮೋಜಿಯನ್ನು ನಾನಾದರೂ ಏನೆಂದು ಅರ್ಥ ಮಾಡಿಕೊಳ್ಳಬೇಕು? ನಿಮ್ಮ ಕಮೆಂಟ್‌ನ ಅರ್ಥ ವಾದರೂ ಏನು? ಅದು ಮೆಚ್ಚುಗೆಯಾ? ವ್ಯಂಗ್ಯವಾ? ಸಿಟ್ಟಾ? ಹೊಟ್ಟೆ ಉರಿಯಾ? ಏನೇ ಹೇಳುವುದಿದ್ದರೂ ನೇರವಾಗಿ ಹೇಳಿಬಿಡಿ. ಕಮೆಂಟ್ ಮೂಲಕ ಹೇಳಲು ಆಗದಿದ್ದರೆ, ಫೋನ್ ಬೇಕಾದರೂ ಮಾಡಿ. ಫೋನ್ ನಂಬರನ್ನೂ ಇನ್‌ಬಾಕ್ಸ್ ಮಾಡಿದೀನಿ. ಸುಮ್ನೆ ಈ ಥರ ಎಮೋಜಿ ಕಳಿಸಿ ತಮಾಷೆ ನೋಡಬೇಡಿ. ನಿಮಗೆ ಮಾಡಲು ಬೇರೆ ಕೆಲಸ ಇಲ್ಲದಿರಬಹುದು. ಆದರೆ ನನಗೆ ವಿಪರೀತ ಕೆಲಸ ಇದೆ. ಅರ್ಥ ಮಾಡಿಕೊಳ್ಳಿ’ -ಎಂದು ಒಂದು ಕಮೆಂಟ್ ಹಾಕಿದ.
ಮರುದಿನವೇ ಅದಕ್ಕೂ ಒಂದು ಕಮೆಂಟ್ ಬಂತು. ಈ ಬಾರಿ ಒಂದಲ್ಲ, ಎರಡು ಎಮೋಜಿಗಳಿದ್ದವು. ಅದನ್ನು ಕಂಡಮೇಲೆ- ಇದ್ಯಾರೋ ತಲೆಕೆಟ್ಟ ಆಸಾಮಿ ಎಂದು ನಿರ್ಧರಿಸಲು ಪ್ರದೀಪ ಹಿಂದೆಮುಂದೆ ನೋಡಲಿಲ್ಲ.
ಅವತ್ತೇ ಸಂಜೆ, ಗೆಳೆಯರೊಂದಿಗೆ ಮಾತಿಗೆ ಕುಳಿತಾಗ ಅವನು ಈ ವಿಷಯವನ್ನು ಪ್ರಸ್ತಾಪಿಸಿದ. ‘ಅದ್ಯಾರೋ ಕೀರ್ತಿ ಅಂತೆ. ಸಖತ್ ತರ್ಲೆ ಅನಿಸುತ್ತೆ. ನಾನು ಯಾವುದೇ ಪೋಸ್ಟ್ ಹಾಕಲಿ; ತಕ್ಷಣ ಕಮೆಂಟ್ ರೂಪದಲ್ಲಿ ಒಂದು ಎಮೋಜಿ ಹಾಕ್ತಾರೆ. ಅದನ್ನು ಏನಂಥ ಅರ್ಥ ಮಾಡಿಕೊಳ್ಳುವುದು? ಎಮೋಜಿಗೆ ಸ್ಮೈಲ್ ಅನ್ನೋದು ಬಿಟ್ರೆ ಬೇರೆ ಅರ್ಥವಂತೂ ಸಿಗೋದಿಲ್ಲ’ ಅಂದ. ಈ ಮಾತನ್ನು ಅಷ್ಟಕ್ಕೇ ತಡೆದ ಗೆಳೆಯ- ‘ಪ್ರದೀ, ನೀನು ತಪ್ಪು ತಿಳಿದಿದೀಯ. ಎಮೋಜಿಗಳಲ್ಲಿ ನೂರಕ್ಕೂ ಹೆಚ್ಚು ವಿಧಗಳಿವೆ. ಖುಷಿಗೆ, ಸಂಕಟಕ್ಕೆ, ಸಿಡಿಮಿಡಿಗೆ, ವ್ಯಂಗ್ಯಕ್ಕೆ ಪ್ರತ್ಯೇಕ ಎಮೋಜಿಗಳಿವೆ. ಪ್ರತಿಯೊಂದು ಪೋಸ್ಟ್‌ಗೂ ಕಮೆಂಟ್ ಮಾಡಿದಾರೆ ಅಂದ್ರೆ ಅವರು ಕಿಡಿಗೇಡಿ ಆಗಿರಲು ಸಾಧ್ಯವಿಲ್ಲ. ಏನೋ ವಿಷಯ ಇದೆ ಅನ್ಸುತ್ತೆ. ಚೆಕ್ ಮಾಡು’ ಎಂದ. ಪ್ರದೀಪನಿಗೂ ಕುತೂಹಲವಾಯಿತು. ನೂರಕ್ಕೂ ಹೆಚ್ಚು ಬಗೆಯ ಎಮೋಜಿಗಳಿವೆ ಎಂಬುದು ಅವನಿಗೆ ಗೊತ್ತೇ ಇರಲಿಲ್ಲ. ಎಲ್ಲವನ್ನೂ ಗೆಳೆಯರಿಗೂ ತೋರಿಸೋಣ ಎಂದು ಮೊಬೈಲ್ನಲ್ಲಿಯೇ ಫೇಸ್‌ಬುಕ್ ಓಪನ್ ಮಾಡಿದ.
ಗೆಳೆಯನ ಮಾತು ನಿಜವಾಗಿತ್ತು. ಕೀರ್ತಿ ಅನ್ನುವವರು ಕಳಿಸಿದ್ದ ಕಮೆಂಟ್‌ನಲ್ಲಿ ತರಹೇವಾರಿ ಎಮೋಜಿಗಳಿದ್ದವು. ಅವು- ಗುಡ್, ವೆರಿಗುಡ್, ಆವರೇಜ್, ಬ್ಯಾಡ್… ಎಂದೆಲ್ಲಾ ಹೇಳುವಂತಿದ್ದವು. ಛೇ, ಪ್ರತಿಯೊಂದು ಬರಹವನ್ನೂ ಅವರು ಓದಿ, ಪ್ರಾಮಾಣಿಕವಾಗಿ ಅನಿಸಿಕೆ ಹೇಳಿದ್ದಾರೆ. ಅದನ್ನು ಗುರುತಿಸುವಲ್ಲಿ ಎಡವಿಬಿಟ್ಟೆ ಅಂದುಕೊಂಡ. ಇಷ್ಟೊಂದು ಆಸಕ್ತಿಯಿಂದ ಕಮೆಂಟ್ ಹಾಕಿದ್ದಾರಲ್ಲ; ಅವರು ಯಾರಿರಬಹುದು? ಕೀರ್ತಿ ಅಂದರೆ ಹುಡುಗನೋ ಹುಡುಗಿಯೋ? ಹುಡುಗಿಯೇ ಆಗಿದ್ರೆ ಚೆಂದ ಅಂದುಕೊಂಡ. ಅದನ್ನೇ ಗೆಳೆಯರಿಗೂ ಹೇಳಿದ. ಅವರು ಒಕ್ಕೊರಲಿನಿಂದ- ‘ ಅದು ಹುಡುಗಿನೇ ಆಗಿರಲಿ ಮಾರಾಯ. ಅಷ್ಟೇ ಅಲ್ಲ: ಇನ್ನೂ ಮದುವೆ ಆಗಿಲ್ಲದ ಹುಡುಗಿ ಆಗಿರಲಿ. ಅವರು ಯಾವ ಊರು, ಏನ್ಮಾಡ್ತಾ ಇದ್ದಾರೆ ಅಂತೆಲ್ಲಾ ಪ್ರೊಫೈಲ್ ನೋಡಿದ್ರೆ ಗೊತ್ತಾಗುತ್ತಲ್ಲ…’ ಅಂದರು.
ಕೆಟ್ಟ ಕುತೂಹಲದಿಂದಲೇ ಇವರು ಪ್ರೊಫೈಲ್ ಹುಡುಕಿದರೆ, ಅಲ್ಲಿ ಯಾವುದೋ ಕಲಾಕೃತಿಯ ಚಿತ್ರವಿತ್ತು. ‘ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಮುದಗಲ್ಗೆ ಹತ್ತಿರದ ಒಂದು ಹಳ್ಳಿ ನನ್ನೂರು. ಸ್ವಲ್ಪ ಖುಷಿಯಿದೆ, ಒಂದಿಷ್ಟು ದುಃಖವಿದೆ. ಹೀಗೇ ಬದುಕ್ತಿದ್ದೀನಿ….’ ಎಂಬ ವಿವರಣೆಯಿತ್ತು. ‘ಹುಡುಗ್ರು, ಈ ಥರ ಸ್ಟೇಟಸ್ ಹಾಕಲ್ಲ ಕಣೋ. ಇದು ಹಂಡ್ರೆಡ್ ಪರ್ಸೆಂಟ್ ಹುಡುಗೀದೇ. ಬಹುಶಃ ಭಾವುಕ ಮನಸ್ಸಿನ ಹುಡುಗಿ ಅನಿಸುತ್ತೆ. ಪಾಪ, ಅವರ ಸಮಸ್ಯೆ ಏನಿದೆಯೇ ಏನೋ.. ಇರಲಿ ನೀನ್ಯಾಕೆ ಒಮ್ಮೆ ಭೇಟಿ ಮಾಡಬಾರ್ಧು? ಟೈಂ ಮಾಡ್ಕೊಂಡು ಒಂದ್ಸಲ ಆ ಕಡೆಗೆ ಹೋಗಿ ಬಂದ್ರೆ, ಮನಸ್ಸಿಗೂ ನೆಮ್ಮದಿ. ಏನಿಲ್ಲಾಂದ್ರು ಒಬ್ರು ಫ್ರೆಂಡ್ ಅಂತೂ ಸಿಕ್ತಾರೆ. ಅಥವಾ, ಆ ಹುಡುಗಿಗೆ ನೀನೂ, ನಿನಗೆ ಅವಳೂ ಇಷ್ಟ ಆಗಿಬಿಟ್ರೆ…ಯಾರ ಸಂಬಂಧದ ನಂಟು ಎಲ್ಲಿರುತ್ತೋ, ಯಾರಿಗೆ ಗೊತ್ತು?’- ಗೆಳೆಯರು ಹೀಗೆಲ್ಲಾ ಕಮೆಂಟ್ ಮಾಡಿದರು.
ಅವತ್ತಿನಿಂದ ಪ್ರದೀಪನಿಗೆ ಚಡಪಡಿಕೆ ಶುರುವಾಯಿತು. ಕೀರ್ತಿ ಎಂಬ ಹೆಸರು ಹುಡುಗಿಯದೇ ಆಗಿರಲಿ, ಆಕೆ ತನ್ನನ್ನೂ ಪ್ರೀತಿಯಿಂದ ನೋಡುವಂತಾಗಲಿ ಎಂದು ತನಗೆ ತಾನೇ ಹೇಳಿಕೊಂಡ. ಬರಹಗಳನ್ನು ಫೇಸ್‌ಬುಕ್‌ಗೆ ಪೋಸ್ಟ್ ಮಾಡುವ ಮುನ್ನ ವಿಪರೀತ ಎಚ್ಚರ ವಹಿಸಿದ. ಕಮೆಂಟ್ ರೂಪದಲ್ಲಿ ಬರುವ ಎಮೋಜಿಯನ್ನು, ಅದು ತಿಳಿಸುವ ಅರ್ಥವನ್ನು ಸೂಕ್ಷ್ಮವಾಗಿ ಗಮನಿಸತೊಡಗಿದ. ಹೀಗಿದ್ದಾಗಲೇ, ಕಚೇರಿ ಕೆಲಸದ ಪ್ರಯುಕ್ತ ರಾಯಚೂರಿಗೆ ಹೋಗಬೇಕಾದ ಅವಕಾಶ ಸಿಕ್ಕಿಬಿಟ್ಟಿತು. ಪ್ರದೀಪ ತಡಮಾಡಲಿಲ್ಲ. ರಾಯಚೂರು ಸೀಮೆಯಲ್ಲಿದ್ದ ಫೇಸ್‌ಬುಕ್ ಗೆಳೆಯರನ್ನು ಸಂಪರ್ಕಿಸಿದ. ‘ಮುದಗಲ್ ಹತ್ರ ಒಂದು ಊರಿಗೆ ಹೋಗಿಬರಬೇಕು. ಒಂದು ಕಾರ್‌ನ ವ್ಯವಸ್ಥೆ ಮಾಡಿ’ ಎಂದು ವಿನಂತಿಸಿದ. ‘ಮನಸು ಗೆದ್ದ ಕೀರ್ತಿಗೆ’ ಎಂಬ ಕವನ ಬರೆದ. ಅಲ್ಲಿಂದ ಹೊರಟುಬರುವ ಮೊದಲು, ಸಮಯ ನೋಡಿಕೊಂಡು ‘ಆಕೆಗೆ’ ಈ ಪದ್ಯ ಕೊಡಬೇಕು ಎಂದುಕೊಂಡ.
***
ಓ, ಇವರಾ ಸಾರ್? ಇವರು ಆರ್ಟಿಸ್ಟು. ಆದ್ರೆ ಹೆಚ್ಚಿನವರಿಗೆ ಪರಿಚಯವಿಲ್ಲ. ಆರೋಗ್ಯ ಚೆನ್ನಾಗಿಲ್ಲ ಅಂತ ಯಾರೋ ಹೇಳ್ತಿದ್ರು. ನಮಗೂ ಜಾಸ್ತಿ ಪರಿಚಯವಿಲ್ಲ. ಹೋಗಿ ಬರೋಣ ಬನ್ನಿ. ಅವರ ಹೆಸರು ಕೀರ್ತಿರಾಜ್ ಅಂತೇನೋ ಇರಬೇಕು. ಒಂದು ಕಾಲದಲ್ಲಿ ನಾಟಕ, ಸಿನಮಾಕ್ಕೆಲ್ಲ ಆರ್ಟ್‌ವರ್ಕ್ ಕೆಲಸ ಮಾಡಿದ್ದಾರಂತೆ- ರಾಯಚೂರಿನ ಗೆಳೆಯರು ಹೀಗೆನ್ನುತ್ತಿದ್ದಂತೆ, ಪ್ರದೀಪನಿಗೆ ಕರೆಂಟ್ ಹೊಡೆದ ಅನುಭವವಾಯಿತು. ಅವನಿಗೆ ಮಾತೇ ಹೊರಡಲಿಲ್ಲ. ತನ್ನ ಅಂದಾಜುಗಳೆಲ್ಲ ಉಲಾr ಆದವಲ್ಲ ಎಂದುಕೊಂಡು ಅವನು ನಿಟ್ಟುಸಿರು ಬಿಡುವುದಕ್ಕೂ, ಕಾರು ಮನೆಯೊಂದರ ಮುಂದೆ ನಿಲ್ಲುವುದಕ್ಕೂ ಸರಿಹೋಯಿತು.
ಆ ಮನೆಯ ಹಿರಿಯರು ಹೇಳತೊಡಗಿದರು: ‘ಇವನ ಹೆಸರೇನೋ ಕೀರ್ತಿರಾಜ. ಆದರೆ ಕೀರ್ತಿಯೂ ಇಲ್ಲ, ಕಿರೀಟವೂ ಇಲ್ಲ. ಅಂಥಾ ಸ್ಥಿತಿ ಇವನದು. ನಾಟಕಕ್ಕೆ, ಸಿನಿಮಾಕ್ಕೆ ಚಿತ್ರ ಬರೆದ. ಆರು ತಿಂಗಳಿಗೋ, ಮೂರು ತಿಂಗಳಿಗೋ ಒಂದಷ್ಟು ಹಣ ಸಿಗುತ್ತಿತ್ತು. ಆದರೆ, ಒಂದ್ಸಲ ಇದ್ದಕ್ಕಿದ್ದಂತೆ ಸ್ಟ್ರೋಕ್ ಹೊಡೀತು ನೋಡಿ: ಇವನ ಬದುಕಿನ ನಕ್ಷೆಯೇ ಬದಲಾಗಿ ಹೋಯ್ತು. ಮಾತು ನಿಂತಿತು. ನೆನಪಿನ ಶಕ್ತಿ ಹೋಗಿಬಿಡ್ತು. ಕೈ ಅಲುಗಿ ಸುವುದೂ ಕಷ್ಟವಾಯ್ತು. ಕೂತ ಜಾಗ ಬಿಟ್ಟು ಎದ್ದೇಳಲೂ ಆಗುತ್ತಿರಲಿಲ್ಲ. ಕಡೆಗೆ, ಎದುರಿಗೆ ಬಂದವರ ಮುಖವನ್ನೂ ಗುರುತಿಸದಂತೆ ಆಗಿಬಿಟ್ಟ.
ಏನ್ಮಾಡೋದು ಹೇಳಿ? ಸೋಲ್ಲಾಪುರ, ಹೈದ್ರಾಬಾದ್, ಮೈಸೂರು, ಬೆಂಗಳೂರು, ಶಿವಮೊಗ್ಗ…ಹೀಗೆ, ಎಲ್ಲೆಲ್ಲಿ ಅತ್ಯುತ್ತಮ ಚಿಕಿತ್ಸೆ ಸಿಗುತ್ತೆ ಅಂತಾರೋ, ಅಲ್ಲಿಗೆಲ್ಲಾ ಕರ್ಕೊಂಡು ಹೋದ್ವಿ. ಕಡೆಗೊಮ್ಮೆ, ಸ್ವಲ್ಪಮಟ್ಟಿಗೆ ನೆನಪಿನ ಶಕ್ತಿ ಮರಳಿತು. ತೊದಲುಮಾತು ಜತೆಯಾಯಿತು. ಕೈಗೆ ಸ್ವಲ್ಪ ಶಕ್ತಿ ಬಂತು. ಆದರೆ, ದೇಹದ ಒಂದು ಭಾಗವೇ ಸ್ವಾಧೀನದಲ್ಲಿ ಇಲ್ಲದ ಕಾರಣ, ಎದ್ದು ನಿಲ್ಲುವುದು ಸಾಧ್ಯವಾಗುತ್ತಿಲ್ಲ. ತಿಂಗಳುಗಟ್ಟಲೇ ಒಂದೇ ಕಡೆ ಕುಳಿತಿರುವುದರಿಂದ ಬೊಜ್ಜು, ಡಿಪ್ರಶನ್‌ನಂಥ ತೊಂದರೆಗಳು ಈಗ ಜೊತೆಯಾಗಿವೆ. ಇದರಿಂದ ಹಾರ್ಟ್ ಪ್ರಾಬ್ಲಿಂ ಬಂದ್ರೂ ಬರಬಹುದು ಎಂದೆಲ್ಲ ಜನ ಹೇಳ್ತಿದಾರೆ. ಈ ಸಂಕಟಗಳ ಮಧ್ಯೆಯೇ ಇವನೀಗ ಮೊಬೈಲ್ ನೋಡಲು ಕಲಿತಿದ್ದಾನೆ. ಕೂತ ಜಾಗದಲ್ಲೇ ಮೊಬೈಲ್ ಹಿಡಿದುಕೊಂಡು ನಿರಂತರವಾಗಿ ಅದೇನೇನೋ ಓದುತ್ತಲೇ ಇರುತ್ತಾನೆ. ಆದರೆ ಇವನಿಗೆ ಪ್ರತಿಕ್ರಿಯೆ ನೀಡಲು ಗೊತ್ತಾಗುವುದಿಲ್ಲ. ಟೈಪ್ ಮಾಡಲು ಬರುವುದಿಲ್ಲ. ತಡವರಿಸುತ್ತಲೇ ಮೊಬೈಲ್ನ ಮೇಲೆ ಬೆರಳಾಡಿಸುತ್ತಾ ಅವನಿಗೆ ಇಷ್ಟ ಬಂದ ಎಮೋಜಿ ಒತ್ತುತ್ತಾನೆ. ಎಮೋಜಿ ಒತ್ತುವಷ್ಟರಲ್ಲಿ ಅವನ ‘ಕೈ’ ಬಳಲುತ್ತದೆ. ಆ ಕೆಲಸ ಆದ ತಕ್ಷಣ, ಹೇಳಬೇಕಿದ್ದುದನ್ನು ಹೇಳಿ ಆಯ್ತು ಎಂಬ ಸಂತೃಪ್ತ ಭಾವದಿಂದ ಕಣ್ಣರಳಿಸುತ್ತಾನೆ ಸಾರ್. ಆಗೆಲ್ಲಾ ನಮಗೆ, ಕಣ್ತುಂಬಿಬರುತ್ತೆ…ಆ ಹಿರಿಯರು ಹೇಳುತ್ತಲೇ ಇದ್ದರು. ಈ ಮಾತುಕತೆಗೂ ತನಗೂ ಸಂಬಂಧವೇ ಇಲ್ಲವೆಂಬಂತೆ ಕೀರ್ತಿರಾಜ ನಿರ್ಭಾವುಕನಾಗಿ ಮೊಬೈಲ್ ಹಿಡಿದುಕೊಂಡು ಕೂತಿದ್ದ.
***
ಆಸೆಪಟ್ಟ ಜೀವ ಕಣ್ಮುಂದೆಯೇ ಇದ್ದರೂ ಮಾತೇ ಹೊರಡದೆ ಪ್ರದೀಪ ಚಡಪಡಿಸಿದ. ತಿಂಗಳುಗಳಿಂದಲೂ ಎದೆಯೊಳಗೇ ಉಳಿದಿದ್ದ ಮಾತು, ಅಲ್ಲಿಯೇ ಸತ್ತು ಹೋಗಿತ್ತು. ‘ಇವರನ್ನು ನೋಡಬೇಕು ಅನ್ನಿಸ್ತು’ ಬಂದುಬಿಟ್ಟೆ. ನಿಮಗೆಲ್ಲಾ ತೊಂದರೆ ಆಯ್ತೇನೋ. ದಯವಿಟ್ಟು ಕ್ಷಮಿಸಿ. ಹೋಗ್ ಬರ್ತೀನಿ. ಬರ್ಲಾ ಸಾರ್…ಎನ್ನುತ್ತಲೇ ಎದ್ದು ನಿಂತವನು, ಕೀರ್ತಿರಾಜನ ಬಳಿ ಹೋಗಿ ಅವನ ಕೈಗೆ ಹೂಮುತ್ತನ್ನಿಟ್ಟು, ಹಿಂತಿರುಗಿ ನೋಡದೆ ಕಾರ್‌ನ ಬಳಿ ಬಂದ.
ಅವನು ಕಾರ್‌ನೊಳಗೆ ಕೂರುತ್ತಿದ್ದಂತೆಯೇ, ಬ್ಲಿರ್ ಬ್ಲಿರ್ ಬ್ಲಿರ್…ಎಂದು ಮೊಬೈಲ್ ಸದ್ದು ಮಾಡಿತು. ಓಪನ್ ಮಾಡಿ ನೋಡಿದರೆ- ಕೀರ್ತಿಯ ಎಮೋಜಿ. ಈ ಬಾರಿ ಅಲ್ಲಿ ಹೃದಯದ ಸಿಂಬಲ್ಗಳಿದ್ದವು. ಉಳಿದವರು ಏನೆಂದುಕೊಂಡಾರೋ ಎಂಬುದನ್ನೂ ಲೆಕ್ಕಿಸದೆ, ಕಿಟಕಿಯಿಂದ ತಲೆಯನ್ನು ಹೊರಚಾಚಿದ ಪ್ರದೀಪ- ‘ಕೀರ್ತಿ, ಲವ್ ಯೂ…’ ಎಂದ.
ಎ . ಆರ್ . ಮಣಿಕಾಂತ್