Advertisement

ಆತ್ಮಹತ್ಯೆ ವಿರುದ್ಧ ಸಾಯಿ ಪ್ರಕಾಶ್‌ ಚಿತ್ರ

10:20 AM Jan 11, 2020 | mahesh |

“ಪ್ರಪಂಚದಲ್ಲಿ ಪ್ರತಿ ಮೂರು ಸೆಕೆಂಡ್‌ಗೆ ಒಬ್ಬರು ಆತ್ಮಹತ್ಯೆಗೆ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಿವೆ ಅಂಕಿ-ಅಂಶಗಳು. ಆತ್ಮಹತ್ಯೆಯನ್ನು ತಡೆದು, ಆತ್ಮವಿಶ್ವಾಸ ಮೂಡಿಸುವ ಸಲುವಾಗಿಯೇ ಪ್ರತಿವರ್ಷ ಸೆಪ್ಟೆಂಬರ್‌ 10 ರಂದು ವಿಶ್ವ ಆತ್ಮಹತ್ಯಾ ವಿರೋಧಿ ದಿನ ಆಚರಣೆ ಮಾಡಲಾಗುತ್ತಿದೆ. ಆದರೂ ಈ ಸಂಖ್ಯೆ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಆತ್ಮಹತ್ಯೆಗೆ ಶರಣಾಗುತ್ತಿರುವವರ ಪಟ್ಟಿ ದೊಡ್ಡದಾಗುತ್ತಲೇ ಹೋಗುತ್ತಿದೆ. ಹೀಗಿರುವಾಗ ಒಂದು ಸಿನಿಮಾದ ಮೂಲಕ ಆತ್ಮಹತ್ಯೆ ವಿರುದ್ಧ ಜನಜಾಗೃತಿ ಮೂಡಿಸಿದರೆ ಹೇಗೆ ಎಂಬ ಯೋಚನೆ ಬಂದಿತು. ಆಗ ಶುರುವಾಗಿದ್ದೆ “ಸೆಪ್ಟೆಂಬರ್‌ 10′ ಸಿನಿಮಾ’

Advertisement

-ಹೀಗೆ ಹೇಳುತ್ತ ಮಾತಿಗಿಳಿದವರು ಹಿರಿಯ ನಿರ್ದೇಶಕ ಸಾಯಿ ಪ್ರಕಾಶ್‌. ಇಲ್ಲಿಯವರೆಗೆ ಲವ್‌, ಸೆಂಟಿಮೆಂಟ್‌, ಕಾಮಿಡಿ, ಆ್ಯಕ್ಷನ್‌, ಭಕ್ತಿಪ್ರಧಾನ ಹೀಗೆ ಹಲವು ಥರದ ಚಿತ್ರಗಳನ್ನು ನಿರ್ಮಿಸಿ ಸೈ ಎನಿಸಿಕೊಂಡಿರುವ ಸಾಯಿ ಪ್ರಕಾಶ್‌, ಈಗ ಗಂಭೀರ ವಿಷಯವನ್ನು ಇಟ್ಟುಕೊಂಡು, ಸಾಮಾಜಿಕ ಸಂದೇಶವನ್ನು ಹೇಳುವ ಚಿತ್ರವನ್ನು ನಿರ್ದೇಶನದ ಜೊತೆಗೆ ನಿರ್ಮಾಣವನ್ನು ಮಾಡುತ್ತಿದ್ದಾರೆ. ಅಂದಹಾಗೆ, ತಮ್ಮ ಹೊಸಚಿತ್ರಕ್ಕೆ “ಸೆಪ್ಟೆಂಬರ್‌ 10′ ಎಂದು ಹೆಸರಿಟ್ಟಿರುವ ಸಾಯಿಪ್ರಕಾಶ್‌, ಇದೇ ಜನವರಿ 1ರಂದು ಹೊಸವರ್ಷದ ಮೊದಲ ದಿನವೆ ಚಿತ್ರದ ಚಿತ್ರೀಕರಣ ಶುರು ಮಾಡಿದ್ದಾರೆ. ಇದೇ ವೇಳೆ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಕೆಂಗೇರಿಯ ಹತ್ತಿರವಿರುವ ಬಿಜಿಎಸ್‌ ಕ್ಯಾಂಪಸ್‌ಗೆ ಮಾಧ್ಯಮಗಳನ್ನು ಆಹ್ವಾನಿಸಿದ್ದ ಸಾಯಿಪ್ರಕಾಶ್‌, “ಸೆಪ್ಟೆಂಬರ್‌ 10′ ಚಿತ್ರದ ಬಗ್ಗೆ ತಮ್ಮ ಚಿತ್ರತಂಡದ ಜೊತೆಗೆ ಮಾತಿಗಿಳಿದರು.

ಮೊದಲು ಚಿತ್ರದ ಕಥಾಹಂದರದ ಬಗ್ಗೆ ಮಾತು ಶುರು ಮಾಡಿದ ಸಾಯಿ ಪ್ರಕಾಶ್‌, “ಇಲ್ಲಿಯವರೆಗೆ ಹಲವು ಥರದ ಸಿನಿಮಾಗಳನ್ನು ಮಾಡಿದ್ದೇನೆ. ಹಲವು ದಿನಗಳಿಂದ ಆತ್ಮಹತ್ಯೆಯಂಥ ಗಂಭೀರ ವಿಷಯವನ್ನು ಜನರಿಗೆ ತಲುಪಿಸುವಂಥ, ಜನಜಾಗೃತಿ ಮಾಡುವಂಥ ಸಿನಿಮಾ ಮಾಡಬೇಕು ಅಂಥ ಯೋಚನೆಯಿತ್ತು. ಈ ಸಿನಿಮಾದ ಮೂಲಕ ಆ ಯೋಜನೆ ಕಾರ್ಯರೂಪಕ್ಕೆ ಬರುತ್ತಿದೆ. ಈ ಸಿನಿಮಾದ ಇಡೀ ಕಥೆ ಆತ್ಮಹತ್ಯೆ ವಿಷಯದ ಸುತ್ತ ನಡೆಯುತ್ತದೆ. ಏಳು ವಿವಿಧ ಘಟನೆಗಳು ಇದರಲ್ಲಿದೆ. ಇಂದಿನ ದಿನಗಳಲ್ಲಿ ರೈತರು, ವಿದ್ಯಾರ್ಥಿಗಳು, ಪ್ರೇಮಿಗಳು, ಉದ್ಯಮಿಗಳು ಹೀಗೆ ಸಮಾಜದ ವಿವಿಧ ವರ್ಗಗಳ ಜನರು, ವಿದ್ಯಾವಂತರೂ, ಬುದ್ಧಿವಂತರೂ ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆಗೆ ಕಾರಣ, ಪರಿಹಾರ ಎಲ್ಲವೂ ಚಿತ್ರದಲ್ಲಿದೆ. ಸಾವೇ ಪರಿಹಾರವಲ್ಲ ಎಂಬ ಸಂದೇಶ ಕೂಡ ಚಿತ್ರದಲ್ಲಿದೆ’ ಎಂದು ವಿವರಣೆ ನೀಡಿದರು.

ಇನ್ನು “ಸೆಪ್ಟೆಂಬರ್‌ 10′ ಚಿತ್ರದಲ್ಲಿ ನಟ ಶಶಿಕುಮಾರ ಮನೋವೈದ್ಯನಾಗಿ, ರಮೇಶ ಭಟ್‌ ವಕೀಲನಾಗಿ, ಸಿಹಿಕಹಿ ಚಂದ್ರು ಮುಸ್ಲಿಂ ಮೌಲ್ವಿ­ಯಾಗಿ, ಶಿವಕುಮಾರ್‌ ಚರ್ಚ್‌ನ ಫಾದರ್‌ ಆಗಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿ­ಕೊಳ್ಳುತ್ತಿದ್ದಾರೆ. ಉಳಿದಂತೆ ಗಣೇಶ ರಾವ್‌ ಕೇಸರ್ಕರ್‌, ರವಿ, ಯುವನಟ ಜಯಸಿಂಹ, ನಟಿ ಆರಾಧ್ಯ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಕಲಾವಿದರು, “ಸೆಪ್ಟೆಂಬರ್‌ 10′ ಹೊಸಥರದ ಚಿತ್ರವಾಗಲಿದೆ, ಪ್ರೇಕ್ಷಕರಿಗೂ ಇಷ್ಟವಾಗಲಿದೆ ಎಂದು ತಮ್ಮ ಭರವಸೆಯನ್ನು ವ್ಯಕ್ತಪಡಿಸಿದರು. ನಿವೃತ್ತ ಮಿಲಿಟರಿ ಅಧಿಕಾರಿ ಕ್ಯಾಪ್ಟನ್‌ ಜಿ.ಜಿ ರಾವ್‌ ಬರೆದ ಪುಸ್ತಕ “ಟ್ರಾನ್ಸ್‌ ಪಾರ್ಮಿಂಗ್‌ ವರ್ಲ್ಡ್ ಟು ಸೂಸೈಡ್‌ ಫ್ರೀ

ವರ್ಲ್ಡ್’ ಎಂಬ ಆತ್ಮಹತ್ಯೆಯ ಕುರಿತಾದ ಪುಸ್ತಕದಿಂದ ಈ ಚಿತ್ರವನ್ನು ಸಿನಿಮಾ ಮಾಡುವ ನಿರ್ಧಾರಕ್ಕೆ ಬಂದರಂತೆ ನಿರ್ದೇಶಕ ಸಾಯಿಪ್ರಕಾಶ್‌. ಇದೇ ವೇಳೆ ಹಾಜರಿದ್ದ ಪುಸ್ತಕದ ಲೇಖಕ ಕ್ಯಾಪ್ಟನ್‌ ಜಿ.ಜಿ ರಾವ್‌ ಕೂಡ ಆತ್ಮಹತ್ಯೆಯ ಬಗ್ಗೆ ಒಂದಷ್ಟು ಸಂಗತಿಗಳನ್ನು ತೆರೆದಿಟ್ಟರು. ಸದ್ಯ “ಸೆಪ್ಟೆಂಬರ್‌ 10′ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದ್ದು, ಚಿತ್ರಕ್ಕೆ ಜೆ.ಜೆ ಕೃಷ್ಣ ಛಾಯಾಗ್ರಹಣವಿದೆ. ಚಿತ್ರತಂಡದ ಪ್ಲಾನ್‌ ಪ್ರಕಾರ ಎಲ್ಲವೂ ನಡೆದರೆ, ಇದೇ ವರ್ಷದ ಮಧ್ಯ ಭಾಗದಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. ಒಟ್ಟಾರೆ ಸಿನಿಮಾದ ಮೂಲಕ ಆತ್ಮಹತ್ಯೆ ಬೇಡ ಎಂದು ಸಂದೇಶ ಹೇಳಲು ಹೊರಟಿರುವ ಸಾಯಿಪ್ರಕಾಶ್‌ ಪ್ರಯತ್ನ ಪ್ರೇಕ್ಷಕ ಪ್ರಭುಗಳಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಅನ್ನೋದು “ಸೆಪ್ಟೆಂಬರ್‌ 10′ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.

Advertisement

ಸಮಸ್ಯೆಗೆ ಸಾವೇ ಪರಿಹಾರವಲ್ಲ …
ಇಂದಿನ ದಿನಗಳಲ್ಲಿ ರೈತರು, ವಿದ್ಯಾರ್ಥಿಗಳು, ಪ್ರೇಮಿಗಳು, ಉದ್ಯಮಿಗಳು ಹೀಗೆ ಸಮಾಜದ ವಿವಿಧ ವರ್ಗಗಳ ಜನರು, ವಿದ್ಯಾವಂತರೂ, ಬುದ್ಧಿವಂತರೂ ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆಗೆ ಕಾರಣ, ಪರಿಹಾರ ಎಲ್ಲವೂ ಚಿತ್ರದಲ್ಲಿದೆ….

Advertisement

Udayavani is now on Telegram. Click here to join our channel and stay updated with the latest news.

Next