Advertisement
ನಾರಾದಲ್ಲಿ ಹತ್ತು ಹಲವು ಇತಿಹಾಸ ಪ್ರಸಿದ್ಧ ಮಂದಿರಗಳು, ಹೆಗ್ಗುರುತುಗಳು, ರಾಷ್ಟ್ರೀಯ ಸ್ಮಾರಕಗಳಿವೆ, ಕೆಲವೊಂದು ಯೂನಿಸ್ಕೊ ವರ್ಲ್ಡ್ ಹೆರಿಟೇಜ ಸೈಟ್ ಎಂದೂ ಗುರುತಿಸಲ್ಪಟ್ಟಿದೆ. ನಾರ ನಗರವು ಇತಿಹಾಸವನ್ನು ಉಳಿಸಿಕೊಂಡು, ಹಳತು-ಹೊಸತುಗಳ ಕೊಂಡಿಯಾಗಿ ನಿಂತು ವಿಶ್ವದ ಜನತೆಗೆ ತನ್ನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕಲೆಯ ಪರಂಪರೆಯ ಪರಿಚಯ ಮಾಡಿಕೊಡುತ್ತಿದೆ. ಆದರೆ, ಇತ್ತೀಚಿನ ಬೆಳವಣಿಗೆಯೆಂದರೆ ಆಧುನಿಕತೆಗೆ ಮಾರು ಹೋಗುವ ಯುವ ಪೀಳಿಗೆಯು ಹೆಚ್ಚು ಹೆಚ್ಚು ನಗರಗಳತ್ತ ವಲಸೆ ಹೋಗುತ್ತಿದ್ದು ನಾರಾದ ಜನಸಂಖ್ಯೆ ಇಳಿಮುಖವಾಗಿದೆ. ನಾರಾದಲ್ಲಿರುವ ನೋಡಲೇಬೇಕಾದ ಸ್ಥಳಗಳಲ್ಲಿ ಟೊಡೈಜಿ ಮಂದಿರವೂ ಒಂದು.
ಟೊಡೈಜಿ ಮಂದಿರ ಐತಿಹಾಸಿಕವಾಗಿಯೂ ಮಹತ್ವಪೂರ್ಣ ದ್ದಾಗಿದ್ದು ವಿಶ್ವಪ್ರಸಿದ್ಧಿಯನ್ನು ಪಡೆದಿದೆ, ಇದು ನಾರಾದ ಹೆಗ್ಗುರುತಾಗಿಯೂ ಗುರುತಿಸಲ್ಪಟ್ಟಿದೆ. ಜಪಾನಿನ ರಾಜಧಾನಿ ನಾರಾ ಆಗಿದ್ದ ಕಾಲ. ಕ್ರಿ.ಶ. 752ರಲ್ಲಿ ಜಪಾನಿನ ಎಲ್ಲಾ ಬೌದ್ಧ ಮಂದಿರಗಳಿಗೆ ಮುಖಂಡವಾಗುವಂತೆ ಟೊಡೈಜಿ ಮಂದಿರವನ್ನು ಕಟ್ಟಿಸಿದರಂತೆ. ಮಂದಿರದ ಪ್ರಭಾವ ಎಷ್ಟು ಹೆಚ್ಚಾಯಿತೆಂದರೆ ಧರ್ಮ ಮತ್ತು ರಾಜಕೀಯವನ್ನು ಬೇರ್ಪಡಿಸಲು ಕೆಲವೇ ವರ್ಷಗಳಲ್ಲಿ ಜಪಾನಿನ ರಾಜಧಾನಿಯನ್ನು ನಾರಾದಿಂದಲೇ ವರ್ಗಾಯಿಸಲಾಯಿತು. ಟೊಡೈಜಿ ಮಂದಿರಕ್ಕೆ ವಿಶಾಲವಾದ ಅಂಗಳವಿದ್ದು ಸುತ್ತ ಚೆರ್ರಿ ಮರಗಳಿವೆ, ಮಾರ್ಚ ತಿಂಗಳ ಕೊನೆ ಅಥವ ಎಪ್ರೀಲ್ ಚೆರ್ರಿ ಮರಗಳು ಹೂವು ಬಿಡುವ ಸಮಯ, ಆ ಸಮಯದಲ್ಲಿ ಇಲ್ಲಿಗೆ ಸಂದರ್ಶಿಸಿದರೆ ಮರದ ತುಂಬ ಅರಳಿದ ಹೂವುಗಳು ಮತ್ತು ಅರಳಿ ಉದುರಿದ ಹೂವಿನ ಹಾಸಿಗೆ ನಮ್ಮನ್ನು ಸ್ವಾಗತಿಸುತ್ತದೆ. ನಾವೂ ಇದೇ ಸಮಯದಲ್ಲಿ ಜಪಾನಿಗೆ ಪ್ರವಾಸ ಹೋಗಿದ್ದು.
Related Articles
Advertisement
ಹಲವು ಜಪಾನೀಸ್ ಸಿನೆಮಾಗಳಲ್ಲಿ ಟೊಡೈಜಿ ಮಂದಿರವನ್ನು ನೋಡಬಹುದು, ಇಲ್ಲಿ ಅಂತರಾಷ್ಟ್ರೀಯ ಸಂಗೀತ ಉತ್ಸವವೂ ನಡೆಯುತ್ತದಂತೆ.ನಾವು ಟೊಡೈಜಿ ಮಂದಿರಕ್ಕೆ ಹೋದಾಗ ಸೂರ್ಯನ ಕೃಪೆಯಿದ್ದರೂ ಸಣ್ಣದಾಗಿ ಚಳಿಯೂ ಇದ್ದು ಗಾಳಿಯೂ ಮಂದವಾಗಿ ಬೀಸುತ್ತಿತ್ತು.
ಗೀತಾ ಕುಂದಾಪುರ