Advertisement

ಮಹಾ ಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಸಂತ ಸಮ್ಮೇಳನ

01:07 AM Feb 09, 2019 | |

ಧರ್ಮಸ್ಥಳ: ಆಧ್ಯಾತ್ಮಿಕ  ಪರಂಪರೆಯನ್ನು ಹೊಂದಿರುವ ಪುಣ್ಯ ನೆಲವಾದ ಭಾರತದಲ್ಲಿ ತ್ಯಾಗ ಹಾಗೂ ಅಹಿಂಸಾ ಕಾರ್ಯದ ಮೂಲಕ ಜೀವನದಲ್ಲಿ ಸಾರ್ಥಕ್ಯವನ್ನು ಪಡೆದು ಕೊಳ್ಳಲು ಸಾಧ್ಯ ಎಂದು ಶ್ರೀ ವರ್ಧಮಾನ ಸಾಗರಜೀ ಮುನಿಮಹಾರಾಜರು ಸಂದೇಶ ನೀಡಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಗವಾನ್‌  ಶ್ರೀ ಬಾಹುಬಲಿ ಸ್ವಾಮಿಗೆ ಫೆ.9ರಿಂದ 18ರ ವರೆಗೆ ನಡೆಯಲಿರುವ ಮಹಾ ಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಶುಕ್ರವಾರ ಶ್ರೀ ಕ್ಷೇತ್ರದಲ್ಲಿ ನಡೆದ ಸಂತ ಸಮ್ಮೇಳನ ದಲ್ಲಿ ಪಾಲ್ಗೊಂಡು ಆಶೀರ್ವಚನವಿತ್ತರು.

ಅಹಿಂಸೆ ಹಾಗೂ ತ್ಯಾಗದ ಮೂಲಕ ಮನುಷ್ಯ ಸರ್ವಸಿದ್ಧಿಯನ್ನು ಪಡೆಯಬಲ್ಲ ಹಾಗೂ ಮುಕ್ತಿಯನ್ನು ಹೊಂದಬಹು ದಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಗವಾನ್‌ ಶ್ರೀ ಬಾಹುಬಲಿಗೆ ನಡೆಯುವ ಮಹಾಮಸ್ತಕಾಭಿಷೇಕದ ಮುಖೇನ ಸರ್ವರಿಗೂ ಒಳಿತಾಗಲಿ ಎಂದವರು ಆಶಿಸಿದರು.

ವಿನಯ-ಪ್ರೀತಿಯಿಂದ ಗೆಲುವು: ಪುಷ್ಪದಂತ ಶ್ರೀ
ಶ್ರೀ ಪುಷ್ಪದಂತ ಸಾಗರ ಮುನಿ ಮಹಾರಾಜರು ಮಾತನಾಡಿ, ವಿನಯ, ಪ್ರೀತಿಯ ಮೂಲಕ ಮನುಷ್ಯ ಗೆಲುವನ್ನು ಪಡೆಯಲು ಸಾಧ್ಯ. ಪರಮಾತ್ಮನ ಆರಾಧನೆ ಮಾಡುವ ಸಂಕಲ್ಪ ಎಲ್ಲರಲ್ಲೂ ಜಾಗೃತವಾಗಬೇಕು. ಪ್ರತಿಯೊಬ್ಬನಿಗೂ ಗೌರವ ನೀಡುವ ಮನೋಭಾವ ಬೆಳೆದಾಗ ಸಂತುಷ್ಟ ಭಾವ ಮೂಡಲು ಸಾಧ್ಯ ಎಂದು ಹೇಳಿದರು.

ಅಲ್ಲಿ ಕುಂಭಮೇಳ-ಇಲ್ಲಿ ಮಹಾಮಸ್ತಕಾಭಿಷೇಕ!
ಶ್ರೀ ಕ್ಷೇತ್ರ ಹೊಂಬುಜದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅವರು ಮಾತನಾಡಿ, ಭಗವಾನ್‌ ಬಾಹುಬಲಿಯ ಕಾಲದಲ್ಲಿ ಸಂಸಾ ರಯುತ ಬದುಕು ಹಾಗೂ ಜೀವನ ನಡೆಯುತ್ತಿತ್ತು. ಇಂದು ರಾಜಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡುವಾಗ ಅಂದಿನ ಕಾಲ ಹಾಗೂ ಇಂದಿನ ಕಾಲದ ವಾಸ್ತವ ಸ್ಥಿತಿ ಕಂಡು ಬೇಸರವಾಗುತ್ತಿದೆ ಎಂದರು. ಉತ್ತರ ಪ್ರದೇಶದಲ್ಲಿ ಕುಂಭಮೇಳ ನಡೆಯುತ್ತಿದ್ದರೆ, ಇಲ್ಲಿ ಮುನಿ ಶ್ರೇಷ್ಠರ ಉಪಸ್ಥಿತಿಯಲ್ಲಿ ಮಸ್ತಕಾಭಿಷೇಕದ ಸೌಭಾಗ್ಯ ನೋಡುವ ಅವಕಾಶ ದೊರಕುತ್ತಿರುವುದು ಸಂತಸ ತಂದಿದೆ ಎಂದರು.

Advertisement

ಬಾಹುಬಲಿ ಆತ್ಮವಿಶ್ವಾಸವಿದ್ದಂತೆ: ಒಡಿಯೂರು ಶ್ರೀ
ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಮಾತನಾಡಿ, ಸಂತರು ಹಾಗೂ ಸಮಾಜಕ್ಕೆ ಅವಿನಾಭಾವ ಸಂಬಂಧ ವಿದೆ. ಬಾಹುಬಲಿಯು ಆತ್ಮವಿಶ್ವಾಸದ ಪ್ರತೀಕ, ತ್ಯಾಗದ ಸಂಕೇತ. ಭೋಗದ ಬದುಕಿಗಿಂತ ಪರಮಾತ್ಮನನ್ನು ಕಾಣುವ ಮುನಿಶ್ರೇಷ್ಠರ ಸಂಕಲ್ಪ ಮಾನವರಿಗೆ ಒಂದು ಮಹಾನ್‌ ಸಂದೇಶ ಎಂದರು.

ಆತ್ಮಶುದ್ಧಿಯೇ ಅಮೂಲ್ಯ: ಬ್ರಹ್ಮಾನಂದ ಸರಸ್ವತಿ ಶ್ರೀ
ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಮಾತನಾಡಿ, ಜೈನ ಪರಂಪರೆಯು ಶ್ರೇಷ್ಠ ಪರಂಪರೆಯಾಗಿದೆ. ಅಂತರ್‌ಶುದ್ಧಿ ಆಗದವನು ಬಾಹ್ಯವಾಗಿ ಎಷ್ಟೇ ಶುದ್ಧಿ ಆದರೂ ಫಲವಿಲ್ಲ ಎಂಬ ಸಂದೇಶ ಈ ಸಮಾಜದಿಂದ ಮೂಡಿದೆ. ಮನಸ್ಸನ್ನು ಗೆಲ್ಲುವ ಹಾಗೂ ಅಂತರ್‌ಶಕ್ತಿಯನ್ನು ಜಾಗೃತಗೊಳಿಸುವ ಮಹಾನ್‌ ಕಲೆ ಮುನಿಗಳಿಗೆ ಒಲಿದಿದೆ ಎಂದರು.

ಮುನಿಗಳು ಹಾಗೂ ಸಂತ ಶ್ರೇಷ್ಠರ ಉಪಸ್ಥಿತಿ
 ಕಾರ್ಕಳದ ದಾನಶಾಲೆ ಶ್ರೀ ಲಲಿತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಡಗು ವಿರಾಜಪೇಟೆಯ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಉಡುಪಿಯ ಶ್ರೀ ಸಂತೋಷ್‌ ಗುರೂಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಧರ್ಮಾ ಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಸ್ವಾಗತಿಸಿದರು. ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್‌, ಡಿ. ಹಷೇìಂದ್ರ ಕುಮಾರ್‌ ಉಪಸ್ಥಿತರಿದ್ದರು. ಕೃಷ್ಣರಾಜ ಹೆಗ್ಡೆ ಜಿ. ವಂದಿಸಿದರು. ದಾಮೋದರ ಶರ್ಮಾ ಬಾಕೂìರು ಅವರು ಕಾರ್ಯಕ್ರಮ ನಿರೂಪಿಸಿದರು.

ಶಾಂತಿಯಿಂದ ಜಗತ್ತನ್ನೇ ಗೆಲ್ಲಬಹುದು: ಡಾ| ಹೆಗ್ಗಡೆ 
ಶ್ರೀ ಕ್ಷೇತ್ರ ಧರ್ಮಸœಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ಧಾರ್ಮಿಕ ಸಂಘಟನೆಗಳ ಮುಖೇನ ಸಿದ್ಧಿಯನ್ನು ಪಡೆಯಲು ಸಾಧ್ಯ. ಮಹಾತ್ಮಾ ಗಾಂಧಿಧೀಜಿಯವರು ಕೂಡ ಇದೇ ತಣ್ತೀವನ್ನು ಪಾಲಿಸಿಕೊಂಡು ಬಂದಿದ್ದರು. ರಾಜಕೀಯದಿಂದ ನಡೆಯದ ಒಂದಿಷ್ಟು ವಿಚಾರಗಳು ಧಾರ್ಮಿಕ ಸಂಘಟನೆಗಳ ಮುಖೇನ ನಡೆಯುತ್ತಿವೆ ಎಂಬ ಅರಿವು ನಮ್ಮಲ್ಲಿ ಇರಬೇಕು. ಶಾಂತಿಯಿಂದ ನಾವು ಜಗತ್ತನ್ನೇ ಗೆಲ್ಲಬಹುದು ಎಂಬ ಸಂದೇಶವನ್ನು ಭಗವಾನ್‌ 
ಬಾಹುಬಲಿ ಸ್ವಾಮಿಯ ಮೂಲಕ ನಾವೆಲ್ಲರೂ ಕಂಡುಕೊಂಡಿದ್ದೇವೆ. ಹೀಗಾಗಿ ಶಾಂತಿಯ ತತ್ವ ನಮ್ಮಲ್ಲಿ ಅಡಕವಾಗಿರಲಿ ಎಂದರು.

ಪೂಜಾ ಕಾರ್ಯಕ್ರಮ
ಫೆ.9ರಂದು ಬೆಳಗ್ಗೆ 6ಕ್ಕೆ ಭಗವಾನ್‌ ಶ್ರೀ ಚಂದ್ರನಾಥ ತೀರ್ಥಂಕರರಿಗೆ ಪಂಚಾಮೃತಾಭಿಷೇಕ, ಮಹಾಪೂಜೆ, ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ವಿಶೇಷ ಪೂಜೆ, ಶ್ರೀ ಚಂದ್ರನಾಥಸ್ವಾಮಿ ಬಸದಿಯಿಂದ ಅಗ್ರೋದಕ ಮೆರವಣಿಗೆ, ಬೆಟ್ಟದಲ್ಲಿ ಇಂದ್ರಪ್ರತಿಷ್ಠೆ, ತೋರಣ ಮುಹೂರ್ತ, ಮಧ್ಯಾಹ್ನ ಮುಖವಸ್ತ್ರ ಉದ್ಘಾಟನೆ, ಶ್ರೀ ಬಾಹುಬಲಿ ಸ್ವಾಮಿಗೆ 24 ಕಲಶಗಳಿಂದ ಪಾದಾಭಿಷೇಕ, ನಾಂದಿ ಮಂಗಲ ಪೂಜಾ ವಿಧಾನ, ಮೃತ್ತಿಕಾ ಸಂಗ್ರಹಣೆ, ಯಜ್ಞಶಾಲಾ ಪ್ರವೇಶ, ಅಂಕುರಾರ್ಪಣ ವಿಧಾನ, ಮಹಾಮಂಗಳಾರತಿ ನಡೆಯಲಿವೆ.

ಇಂದು ಜನಕಲ್ಯಾಣ ಕಾರ್ಯಕ್ರಮ

ಮಹಾ ಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಫೆ. 9ರಂದು ಬೆಳಗ್ಗೆ 11ಕ್ಕೆ ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದಲ್ಲಿ ಜನಕಲ್ಯಾಣ ಕಾರ್ಯಕ್ರಮ ನಡೆಯಲಿದೆ. 
ಕಾರ್ಯಕ್ರಮದಲ್ಲಿ ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ಕ್ಷೇತ್ರದ ಪ್ರಥಮ ಹಂತದ ಚತುಷ್ಪಥ ರಸ್ತೆಯ ಕಾಮಗಾರಿಯನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಸ್ಮರಣಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. 

ರಾಜ್ಯ ಸಚಿವರಾದ ಎಚ್‌.ಡಿ. ರೇವಣ್ಣ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದು, ಸಿ.ಎಸ್‌. ಪುಟ್ಟರಾಜು ಅವರು ಕೆರೆ ಸಂಜೀವಿನಿ ಯೋಜನೆಯ ಒಡಂಬಡಿಕೆಗೆ ಚಾಲನೆ ನೀಡಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಸಚಿವ ಯು.ಟಿ. ಖಾದರ್‌, ಸಂಸದ ನಳಿನ್‌ಕುಮಾರ್‌ ಕಟೀಲು, ಶಾಸಕ ಹರೀಶ್‌ ಪೂಂಜ, ವಿಧಾನ ಪರಿಷತ್‌ ಸದಸ್ಯರಾದ ಕೆ. ಹರೀಶ್‌ಕುಮಾರ್‌, ಎಸ್‌.ಎಲ್‌. ಭೋಜೇಗೌಡ ಭಾಗವಹಿಸಲಿದ್ದಾರೆ. 

3ಡಿ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ
ಸಂಜೆ 7ಕ್ಕೆ ರತ್ನಗಿರಿಯಲ್ಲಿ ಬಾಹುಬಲಿ ಚರಿತ್ರೆಯ 3ಡಿ ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಶಿಲ್ಪಿ ರೆಂಜಾಳ ಗೋಪಾಲಕೃಷ್ಣ ಶೆಣೈ ಅವರ ಪ್ರಸಕ್ತ ತಲೆಮಾರಿನ ಪ್ರತಿನಿಧಿಗಳನ್ನು ಸಮ್ಮಾನಿಸಲಿದ್ದಾರೆ. ಸಚಿವೆ ಜಯಮಾಲಾ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದು, ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ| ಎಸ್‌. ಪ್ರಭಾಕರ್‌ ಅವರು ರೆಂಜಾಳ ಗೋಪಾಲಕೃಷ್ಣ ಶೆಣೈ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. 

ನಟ ರಮೇಶ್‌ ಅರವಿಂದ್‌ ಅವರು 3ಡಿ ಪ್ರದರ್ಶನವನ್ನು ಉದ್ಘಾಟಿಸಲಿದ್ದು, ಸಚಿವ ಸಾ.ರಾ. ಮಹೇಶ್‌, ಶಾಸಕ ಹರೀಶ್‌ ಪೂಂಜ, ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ರಾತ್ರಿ 8 ಗಂಟೆಗೆ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೂಡುಬಿದಿರೆಯ ಆಳ್ವಾಸ್‌ ವಿದ್ಯಾರ್ಥಿಗಳ ಸಾಂಸ್ಕೃತಿಕ ವೈಭವ ಪ್ರದರ್ಶನಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next