ರವಿವಾರ ಭಾರತಕ್ಕೆ 3 ಚಿನ್ನ ಗೆಲ್ಲುವ ಅವಕಾಶವಿತ್ತು. ಆದರೆ ಕೊನೆಗೆ ಇದು ಒಂದಕ್ಕೆ ಸೀಮಿತಗೊಂಡಿತು. ಉಳಿದೆರಡು ಪದಕಗಳು ಬೆಳ್ಳಿ ರೂಪದಲ್ಲಿ ಬಂದವು. “ಆಲ್ ಇಂಡಿಯನ್’ ವನಿತೆಯರ ಸಿಂಗಲ್ಸ್ ನಲ್ಲಿ ಸೈನಾ ನೆಹ್ವಾಲ್ ಚಿನ್ನದ ಪದಕ ಗೆದ್ದರೆ, ಫೈನಲ್‌ನಲ್ಲಿ ಎಡವಿದ ಪಿ.ವಿ. ಸಿಂಧು ಬೆಳ್ಳಿ ಪದಕಕ್ಕೆ ತೃಪ್ತರಾದರು. ಪುರುಷರ ಸಿಂಗಲ್ಸ್ ನಲ್ಲಿ ವಿಶ್ವದ ನಂಬರ್ ವನ್ ಆಟಗಾರ ಕಿಡಂಬಿ ಶ್ರೀಕಾಂತ್ ಮಲೇಶ್ಯದ ಲೀ ಚಾಂಗ್ ವೀ ವಿರುದ್ಧ ಸೋಲು ಕಾಣಬೇಕಾಯಿತು. ಗೇಮ್ಸ್ ಪುರುಷರ ಡಬಲ್ಸ್‌ನಲ್ಲಿ ಇದೇ ಮೊದಲ ಸಲ ಕಣಕ್ಕಿಳಿದ ಸಾತ್ವಿಕ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಇಂಗ್ಲೆಂಡಿನ ಜೋಡಿಗೆ ಶರಣಾಗಿ ಚಿನ್ನವನ್ನು ಕಳೆದುಕೊಂಡರು.
Advertisement
ಸೈನಾ-ಸಿಂಧು ಜಿದ್ದಾಜಿದ್ದಿ ಸೆಣಸಾಟಸೈನಾ ನೆಹ್ವಾಲ್-ಪಿ.ವಿ. ಸಿಂಧು ನಡುವಿನ ವನಿತಾ ಸಿಂಗಲ್ಸ್ ಫೈನಲ್ ಅಂತಿಮ ದಿನದ ವಿಶೇಷ ಆಕರ್ಷಣೆಯಾಗಿತ್ತು. ಇಬ್ಬರೂ ತಮ್ಮ ಸಾಮರ್ಥ್ಯವನ್ನು ಪಣಕ್ಕಿಟ್ಟು ಹೋರಾಡಿದ್ದರಿಂದ ಪಂದ್ಯದ ಕಾವು ಕ್ಷಣದಿಂದ ಕ್ಷಣಕ್ಕೆ ಏರುತ್ತ ಹೋಯಿತು. ಸಿಂಧು ಪಾದದ ನೋವನ್ನು ಲೆಕ್ಕಿಸದೇ ಹೋರಾಟ ಜಾರಿಯಲ್ಲಿರಿಸಿದರು. ಅಂತಿಮವಾಗಿ ಸೈನಾ 21-18, 23-21 ಅಂತರದಿಂದ ಗೆದ್ದು ಚಿನ್ನಕ್ಕೆ ಕೈ ಚಾಚಿದರು. ಇದು ಸೈನಾಗೆ ಒಲಿದ 2ನೇ ಗೇಮ್ಸ್ ಸಿಂಗಲ್ಸ್ ಚಿನ್ನ. 2010ರ ತವರಿನ ಗೇಮ್ಸ್‌ನಲ್ಲೂ ಸೈನಾ ನೆಹ್ವಾಲ್ ಬಂಗಾರದ ಪದಕ ಜಯಿಸಿದ್ದರು.
Related Articles
ದ್ವಿತೀಯ ಗೇಮ್ ಇನ್ನಷ್ಟು ಪೈಪೋಟಿಯಿಂದ ಕೂಡಿತ್ತು. ಆರಂಭದಲ್ಲಿ ಸಿಂಧು ಮೇಲುಗೈ ಸಾಧಿಸಿ 9-7, 13-8, 19-16ರಿಂದ ಮುನ್ನಡೆದರು. ಈ ಹಂತದಲ್ಲಿ ಸೈನಾ ಪ್ರಬಲ ಹೊಡೆತಗಳಿಗೆ ಮುಂದಾದರು. 19-19, 21-21ರಲ್ಲಿ ಇಬ್ಬರೂ ಸಮಬಲ ಸಾಧಿಸಿದರು. ಮುಂದಿನೆರಡು ಗೆಲುವಿನ ಅಂಕಗಳನ್ನು ಬಾಚಿಕೊಂಡ ಸೈನಾ ಸ್ವರ್ಣ ಪದಕದ ಮೇಲೆ ಹಕ್ಕು ಚಲಾಯಿಸಿಯೇ ಬಿಟ್ಟರು! ಭಾರತದ ಈ ತಾರಾ ಆಟ ಗಾರ್ತಿಯರ ಹೋರಾಟದ ವೇಳೆ ಸ್ಟೇಡಿಯಂ ಫುಲ್ ಪ್ಯಾಕ್ ಆಗಿತ್ತು.
Advertisement