Advertisement

ವಿದಾಯದಂಚಿಗೆ ಸೈನಾ,ಸಿಂಧು?

09:39 AM May 06, 2019 | Team Udayavani |

ಭಾರತದ ಕ್ರೀಡಾಕ್ಷೇತ್ರ ಕಂಡ ಇಬ್ಬರು ಅನನ್ಯ ಪ್ರತಿಭೆಗಳು ಸೈನಾ ನೆಹ್ವಾಲ್‌ ಮತ್ತು ವಿ.ವಿ.ಸಿಂಧು. ಈ ಇಬ್ಬರು ಬ್ಯಾಡ್ಮಿಂಟನ್‌ ತಾರೆಯರಾದರೂ, ಇಡೀ ಕ್ರೀಡಾಸಮೂಹವನ್ನೇ ಪ್ರಭಾವಿಸಿದ್ದಾರೆ. ಮಹಿಳಾ ಬ್ಯಾಡ್ಮಿಂಟನ್‌ನಲ್ಲಿ ವಿಶ್ವ ನಂ.1 ಪಟ್ಟಕ್ಕೇರಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆ ಸೈನಾ ನೆಹ್ವಾಲ್‌ ಅವರದ್ದು. ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಆಟಗಾರ್ತಿ ಎಂಬ ಗರಿಮೆ ಪಿ.ವಿ.ಸಿಂಧು ಅವರಿಗೆ ಸಲ್ಲುತ್ತದೆ. ಈ ಇಬ್ಬರೂ ಆಟಗಾರ್ತಿಯರು ಬ್ಯಾಡ್ಮಿಂಟನ್‌ನಲ್ಲಿ ಮಾಡಿದ ಸಾಧನೆ ಒಂದು ತಲೆಮಾರನ್ನೇ ಸ್ಫೂರ್ತಗೊಳಿಸಿದೆ. ಭಾರತದಲ್ಲಿ ಬ್ಯಾಡ್ಮಿಂಟನ್‌ ಕ್ರೀಡೆ ಬಹಳ ಪ್ರಬಲವಾಗಿ ಬೆಳೆಯಲು, ವಿಶ್ವಮಟ್ಟದಲ್ಲಿ ಭಾರತ ಬ್ಯಾಡ್ಮಿಂಟನ್‌ ಶಕ್ತಿಕೇಂದ್ರ ಎಂಬ ಹೆಸರು ಗಳಿಸಿಕೊಳ್ಳಲು ಇವರೇ ಕಾರಣ. ಈ ಮಟ್ಟಕ್ಕೆ ಭಾರತದ ಪುರುಷ ಸ್ಪರ್ಧಿಗಳು ಸಾಧನೆ ಮಾಡಿಲ್ಲ.

Advertisement

ಸೈನಾ ನೆಹ್ವಾಲ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಅವರು ಇಂತಹ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ. ಮುಂದೆ ಸಿಂಧು ಬೆಳ್ಳಿಯನ್ನೇ ಗೆದ್ದು ಪರಂಪರೆಯನ್ನು ಇನ್ನಷ್ಟು ಬಲಿಷ್ಠಗೊಳಿಸಿದರು. ಸೈನಾ ನೆಹ್ವಾಲ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದ ಭಾರತದ ಮೊದಲ ಆಟಗಾರ್ತಿ. ಮುಂದೆ ಸಿಂಧು 2 ಬೆಳ್ಳಿ ಗೆದ್ದು ಈ ಸಾಧನೆಯನ್ನು ಇನ್ನಷ್ಟು ಎತ್ತರಕ್ಕೊಯ್ದರು. ಹಾಗಾಗಿ ಬ್ಯಾಡ್ಮಿಂಟನ್‌ನಲ್ಲಿ ಯಾವುದೇ ವಿಶ್ವ ಕೂಟ ನಡೆದರೂ, ಭಾರತೀಯ ಆಟಗಾರರ ಮೇಲೆ ವಿಶ್ವದ ಎಲ್ಲ ಬ್ಯಾಡ್ಮಿಂಟನ್‌ ಪ್ರಭಾವಿ ದೇಶಗಳ ಕಣ್ಣಿರುತ್ತದೆ.

ಹೀಗೆ ಸಾಧನೆಯ ಔನ್ನತ್ಯಕ್ಕೆ ತಲುಪಿದ ಇಬ್ಬರು ಆಟಗಾರ್ತಿಯರು, ಈಗ ಕಳೆಗುಂದಿದ್ದಾರೆ. ಸತತವಾಗಿ ಸೋಲುತ್ತಿದ್ದಾರೆ. ಬಹುಶಃ ಮತ್ತೆ ಇವರು ಬ್ಯಾಡ್ಮಿಂಟನ್‌ನಲ್ಲಿ ಹಿಂದಿನ ಎತ್ತರ ಏರುತ್ತಾರೆ ಎಂಬ ಭರವಸೆ ಯಾರಿಗೂ ಉಳಿದಿಲ್ಲ. ಸ್ವತಃ ಅವರಿಗೂ ಇದ್ದಂತಿಲ್ಲ. ಹಾಗಾಗಿ ವೇಗವಾಗಿ ಅವರು ನಿವೃತ್ತಿಯ ಸನಿಹ ತಲುಪುತ್ತಿದ್ದಾರೆ. ಬಹುಶಃ 2019 ಒಲಿಂಪಿಕ್ಸ್‌ ನಂತರ ಈ ಇಬ್ಬರು ಪೈಪೋಟಿಯಲ್ಲಿ ಉಳಿದುಕೊಳ್ಳುತ್ತಾರೆ ಎಂದು ಹೇಳುವುದು ಕಷ್ಟ.

ಚಿಗುರಿದ ಭರವಸೆ ಮುದುಡಿತು: ಪಿ.ವಿ.ಸಿಂಧು ಪ್ರತೀ ಕೂಟದ ಆರಂಭಿಕ ಹಂತದಲ್ಲೇ ಸೋಲುವುದು, ಉಪಾಂತ್ಯದಲ್ಲಿ ಸೋಲುವುದು 2018ರಲ್ಲಿ ಸತತವಾಗಿ ನಡೆಯಿತು. ಆದರೆ ಈ ಇಡೀ ವರ್ಷ ಅವರು ನೀಡಿದ ಕೆಲವು ಅದ್ಭುತ ಪ್ರದರ್ಶನದ ಕಾರಣ ಸಿಂಧು ಸೋಲುಗಳು ಕೇವಲ ಲಯ ಕುಸಿತವಾಗಿದ್ದರಿಂದ ಸಂಭವಿಸಿದ್ದು ಎಂದು ಜನ ಭಾವಿಸಿದರು. ಬ್ಯಾಡ್ಮಿಂಟನ್‌ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಅವರು ಸತತ 2ನೇ ಬೆಳ್ಳಿ ಪದಕ ಗೆದ್ದರು. ಕಾಮನ್‌ವೆಲ್ತ್‌ನಲ್ಲಿ ಚಿನ್ನ ಗೆದ್ದರು. ಅದಾದ ಮೇಲೆ ಮತ್ತೆ ಸೋಲತೊಡಗಿದರು. ಅಷ್ಟರಲ್ಲಿ ಒಂದು ಪವಾಡ ನಡೆಯಿತು. ಸಿಂಧು ಬ್ಯಾಡ್ಮಿಂಟನ್‌ ವರ್ಲ್x ಟೂರ್‌ ಫೈನಲ್ಸ್‌ ಪ್ರಶಸ್ತಿ ಗೆದ್ದುಕೊಂಡರು. ಯಾವುದೇ ಭಾರತೀಯ ಮಾಡದ ಸಾಧನೆ ಮಾಡಿದರು! ಆಗ, ಸಿಂಧು ಮತ್ತೆ ಚಿಗುರಿದ್ದಾರೆ, ಮುಂದೆ ಮತ್ತಷ್ಟು ಅಮೋಘ ಫ‌ಲಿತಾಂಶ ನೀಡುತ್ತಾರೆ ಎಂಬ ಭಾವನೆ ಮೂಡಿತ್ತು. ನಂತರ ಸಿಂಧು ಸತತವಾಗಿ ಸೋಲು ಕಾಣುವುದರೊಂದಿಗೆ ಅಪನಂಬಿಕೆಯ ಕಾರ್ಮೋಡ ಕವಿಯಿತು.

ಇನ್ನೊಂದು ಕಡೆ ಸೈನಾ ಮತ್ತೂಂದೇ ಚಿತ್ರಣ ನೀಡಿದರು. ಆಕೆ ಕಾಲು ನೋವಿನ ಕಾರಣ ದೀರ್ಘ‌ಕಾಲ ಲಯ ಕಳೆದುಕೊಂಡಿದ್ದರು. ಪಿ.ಕಶ್ಯಪ್‌ರನ್ನು ವಿವಾಹವಾದ ನಂತರವಂತೂ ಅವರು ನಿವೃತ್ತಿ ಹೇಳಿಯೇ ಬಿಡುತ್ತಾರೆ ಎಂಬ ಆಲೋಚನೆ ಹುಟ್ಟಿತ್ತು. ಅದನ್ನೆಲ್ಲ ಸುಳ್ಳು ಮಾಡಿ ಅವರು ಆಡತೊಡಗಿದರು. ಸತತ ಸೋಲನ್ನು ಕಂಡರು. ಇದೆಲ್ಲದರ ಮಧ್ಯೆ ಸಂತಸವಾಗಲು ಕೆಲವು ಕಾರಣಗಳಿವೆ. 2019ರ ಆರಂಭದಲ್ಲಿ ನಡೆದ ಮಲೇಷ್ಯಾ ಬ್ಯಾಡ್ಮಿಂಟನ್‌ನಲ್ಲಿ ಅವರು ಸೆಮಿಫೈನಲ್‌ಗೇರಿದರು. ಮುಂದೆ ನಡೆದ ಇಂಡೋನೇಷ್ಯಾ ಬ್ಯಾಡ್ಮಿಂಟನ್‌ನಲ್ಲಿ ಪ್ರಶಸ್ತಿಯನ್ನೇ ಗೆದ್ದರು. ಬಹುಶಃ ಸೈನಾ ತಮ್ಮ ಗತವೈಭವದ ದಿನಗಳಿಗೆ ಮರಳಿರಬಹುದು ಎಂದು ಅನಿಸಿತ್ತು. ಅದಾದ ಮೇಲೆ ಅವರು ಕಂಡಿದ್ದು ಬರೀ ಸೋಲು. ಈಗ ಈ ಇಬ್ಬರೂ ಆಟಗಾರ್ತಿಯರು ಮುಂದೇನು ಮಾಡುತ್ತಾರೆ ಪ್ರಶ್ನೆ ಹುಟ್ಟಿಕೊಂಡಿದೆ. ರೋಜರ್‌ ಫೆಡರರ್‌, ನೊವಾಕ್‌ ಜೊಕೊವಿಚ್‌, ರಫಾಯೆಲ್‌ ನಡಾಲ್‌ರಂತೆ ವೃತ್ತಿಜೀವನದ ವೃದ್ಧಾಪ್ಯದಲ್ಲೂ ತಿರುಗಿ ಬೀಳುತ್ತಾರಾ ಅಥವಾ ರ್ಯಾಕೆಟನ್ನು ಮೂಲೆಗೆಸೆಯುತ್ತಾರೊ? ತಿಳಿಯಬೇಕೆಂದರೆ ಕಾಯುವುದಷ್ಟೇ ದಾರಿ.

Advertisement

ಸೈನಾ ಪ್ರಶಸ್ತಿಗಳು ವರ್ಷ
ಕಾಮನ್‌ವೆಲ್ತ್‌ ಸಿಂಗಲ್ಸ್‌ ಚಿನ್ನ 2010
ಒಲಿಂಪಿಕ್ಸ್‌ ಕಂಚು 2012
ವಿಶ್ವ ಚಾಂಪಿಯನ್‌ಶಿಪ್‌ ಬೆಳ್ಳಿ 2015
ವಿಶ್ವ ಚಾಂಪಿಯನ್‌ಶಿಪ್‌ ಕಂಚು 2017
ಕಾಮನ್‌ವೆಲ್ತ್‌ ಸಿಂಗಲ್ಸ್‌ ಚಿನ್ನ 2018
ಕಾಮನ್‌ವೆಲ್ತ್‌ ಮಿಶ್ರ ಚಿನ್ನ 2018

ಸಿಂಧು ಪ್ರಶಸ್ತಿಗಳು ವರ್ಷ
ವಿಶ್ವ ಚಾಂಪಿಯನ್‌ಶಿಪ್‌ ಕಂಚು 2013
ವಿಶ್ವ ಚಾಂಪಿಯನ್‌ಶಿಪ್‌ ಕಂಚು 2014
ಒಲಿಂಪಿಕ್ಸ್‌ ಬೆಳ್ಳಿ 2016
ವಿಶ್ವ ಚಾಂಪಿಯನ್‌ಶಿಪ್‌ ಬೆಳ್ಳಿ 2017
ವಿಶ್ವ ಚಾಂಪಿಯನ್‌ಶಿಪ್‌ ಬೆಳ್ಳಿ 2018
ವರ್ಲ್x ಟೂರ್‌ ಫೈನಲ್ಸ್‌ ಚಿನ್ನ 2018

Advertisement

Udayavani is now on Telegram. Click here to join our channel and stay updated with the latest news.

Next